ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

0

ಹಾಸನ ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಿಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.

ಕರ್ನಾಟಕ ರಾಜ್ಯದ ಉದಯ, ನಾಡು ನುಡಿಯ ಹಿರಿಮೆ ಗರಿಮೆ, ಪರಂಪರೆ, ಇತಿಹಾಸ, ಐತಿಹಾಸಿಕ ಸ್ಥಳಗಳ ಬಗ್ಗೆ ವಿವರಿಸಿ ಮೆಚ್ಚುಗೆಯ ನುಡಿಗಳನ್ನಾಡಿದರು ಹಾಗೂ ರಾಜ್ಯವನ್ನಾಳಿದ ರಾಜ ಮನೆತನಗಳು, ನಾಡು ನುಡಿಯನ್ನ ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿದ ಸಚಿವರು ಮುಂದೆಯೂ ಸಾಮರಸ್ಯದ ಸಹಬಾಳ್ವೆ ಮೂಲಕ ಎಲ್ಲರೂ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ ಎಂದು ಸಚಿವ ಗೋಪಾಲಯ್ಯ ಅವರು ಕರೆ ನೀಡಿದರು.

ಇದೇ ವೇಳೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಹಂಪನಹಳ್ಳಿ ತಿಮ್ಮೇಗೌಡ, ಅನುಸೂಯಮ್ಮ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಗಣ್ಯರು ಸಾಧಕರು ಹಾಗೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಅಧಿಕಾರಿ ಸಿಬ್ಬಂದಿ, ಪೋಲಿಸ್ ಅಧಿಕಾರಿಗಳು, ನಗರಸಭೆ ನೌಕರರು ಹಾಗೂ ರೈತರನ್ನು ಜಿಲ್ಲಾಡಳಿತದ ಪರವಾಗಿ ಸಚಿವರು ಸನ್ಮಾನಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ ಜಾಗೃತಿ ಗೀತೆಗಳ ಗಾಯನ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕನ್ನಡ ನಾಡಿನ ಹಿರಿಮೆ ಸಾರುವ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು.

ಸಚಿವರು ಕನ್ನಡ ರಾಜ್ಯೋತ್ಸವದಲ್ಲಿ ನೀಡಿದ ಸಂದೇಶದ ಸಂಪೂರ್ಣ ವಿವರ: ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕ, ತನ್ನದೇ ಆದ ಐತಿಹಾಸಿಕ, ಸಾಂಸ್ಕøತಿಕ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ಹೆಸರಾಗಿದೆ ಅದಕ್ಕೆಲ್ಲಾ ಕಾರಣರಾದ ನಮ್ಮ ಹಿರಿಯರಿಗೆ ಈ ನಾಡನ್ನು ಕಟ್ಟಿದ ಗಣ್ಯರಿಗೆ ಕೃತಜ್ಞತಾ ನಮನ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದರು.

ಕನ್ನಡ ಭಾಷೆಗೆ 3 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಿ.ಪೂ.2ನೇ ಶತಮಾನದಲ್ಲೇ ಕನ್ನಡ ಭಾಷೆ, ಸಾಹಿತ್ಯ ಇತ್ತೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಆ ನಂತರದಲ್ಲಿ ಹಂತ ಹಂತವಾಗಿ ವಿವಿಧ ಸ್ವರೂಪಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳು ಬೆಳೆದು ಬಂದಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಯ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ಶಾತವಾಹನರು, ಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಸೇವುಣರು, ಹೊಯ್ಸಳರು, ತಲಕಾಡು ಗಂಗರು, ವಿಜಯನಗರ ಅರಸರು, ನಾಯಕರು, ಬಹುಮನಿ ಸುಲ್ತಾನರು, ಬ್ರಿಟೀಷರು ಸೇರಿದಂತೆ ಹತ್ತು ಹಲವು ಆಳರಸರ ಆಡಳಿತದಲ್ಲಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದ ಹೆಮ್ಮೆ ಕನ್ನಡಿಗರದ್ದು ಎಂದು ಸಚಿವರು ಹೇಳಿದರು.

ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿರಾಯಣ್ಣ, ಮದಕರಿನಾಯಕರಂತಹ ಕೆಚ್ಚೆದೆಯ ಕಲಿಗಳ ವೀರ ಪರಂಪರೆಯೂ ನಮ್ಮಲ್ಲಿದೆ. ಅದೇ ರೀತಿ ಕರ್ನಾಟಕ ಶಿಲ್ಪಕಲೆಗಳ ತವರೂರು ಸಹ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ, ಹಂಪೆ,ಬಾದಾಮಿ,ಐಹೊಳೆ, ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಇಂದಿಗೂ ಸಾರುತ್ತವೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಹೆಮ್ಮೆಯ ಕನ್ನಡಕ್ಕೆ ಪಾಶ್ಚಿಮಾತ್ಯರ ಕೊಡುಗೆಯೂ ಸ್ಮರಣೀಯ. ರೆವರೆಂಡ್ ಕಿಟಲ್, ಬಿ.ಎಲ್.ರೈಸ್, ಬಿ.ಪಿ.ರೈಸ್ ಮತ್ತಿತರರು ಹಾಗೂ ಲಂಡನ್ ಮಿಷನರಿ, ಬಾಸೆಲ್ ಮಿಷನ್, ವೆಸ್ಲಿಯನ್ ಮಿಷನರಿಗಳು ನಮ್ಮ ಭಾಷಾ ಬೆಳವಣಿಗೆಗೆ ನೆರವಾಗಿವೆ. ಮೈಸೂರು ಒಡೆಯರು, ಬೆಂಗಳೂರು ಕಟ್ಟಿದ ನಾಡ ಪ್ರಭು ಕೆಂಪೇಗೌಡರು, ಅದೇ ರೀತಿ ರಾಜ್ಯಕ್ಕೆ ಬೆಳಕು, ಬೆಳೆಗೆ ನೀರು ನೀಡಿ ರಾಷ್ಟ್ರಕ್ಕೆ ಮಾದರಿ ಎನಿಸಿದ ಭಾರತರತ್ನ ಡಾ. ಸರ್.ಎಂ. ವಿಶ್ವೇಶ್ವರಯ್ಯನವರನ್ನೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

ಇನ್ನು ರಾಜ್ಯದ ಮಟ್ಟಿಗೆ ಹೇಳುವುದಾದರೆ ಮನುಕುಲ ತಾನೊಂದೇ ವಲಂ ಎಂದು ಸಾರಿದ ಆದಿ ಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ, ಮಾಸ್ತಿ, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮತ್ತಿತರ ಶ್ರೇಷ್ಠ ಕವಿಗಳು, ಸಾಹಿತಿಗಳು, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರಂತಹ ಶ್ರೇಷ್ಠ ವಚನಕಾರರು, ಸಮಾಜ ಸುಧಾರಕರು, ಪುರಂದರ ದಾಸ, ಕನಕದಾಸರಂತಹ ದಾರ್ಶನಿಕರು, ನಮ್ಮ ಬದುಕಿನ ದಾರಿಗೆ ದೀಪ ಹಚ್ಚಿ ಬೆಳಗಿದ್ದಾರೆ. ಕುವೆಂಪು ವಿಶ್ವ ಮಾನವ ಸಂದೇಶವನ್ನೇ ಸಾರಿದ್ದಾರೆ ಎಂದು ಕೆ. ಗೋಪಾಲಯ್ಯ ಅವರು ತಿಳಿಸಿದರು.

ಕನ್ನಡದ ಪ್ರಥಮ ಶಿಲಾ ಶಾಸನ ಹಲ್ಮಿಡಿ ಶಾಸನ ದೊರೆತಿರುವುದು ಹಾಸನ ಜಿಲ್ಲೆಯಲ್ಲಿಯೇ. ದೇಶದ ಪ್ರಧಾನಿಯಾಗಿದ್ದ ರಾಜ್ಯದ ಏಕೈಕ ಕನ್ನಡಿಗರಾದ ಹೆಚ್.ಡಿ. ದೇವೇಗೌಡ ಅವರು ಈ ಜಿಲ್ಲೆಯ ಕೊಡುಗೆಯೇ. ಅದೇ ರೀತಿ ಎಸ್.ಎಲ್.ಭೈರಪ್ಪ, ಅ.ನ.ಕೃ., ಎಸ್.ಕೆ.ಕರೀಂಖಾನ್, ಡಾ:ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹಾರ್ನಳ್ಳಿ ರಾಮಸ್ವಾಮಿ, ಕಿರಂ ನಾಗರಾಜ್, ಕ್ಯಾಪ್ಟನ್ ಗೋಪಿನಾಥನ್, ಗರುಡನಗಿರಿ ನಾಗರಾಜ್, ಜಾವಗಲ್ ಶ್ರೀನಾಥ್, ಪ್ಯಾರಾ ಒಲಂಪಿಯನ್ ಗಿರೀಶ್ ಮುಂತಾದ ಮಹತ್ವದ ಮುತ್ತುಗಳು ಈ ಮಣ್ಣಿನಲ್ಲಿ ಅರಳಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಂಪನ್ನು ಪಸರಿಸಿವೆ ಎಂದರು.

LEAVE A REPLY

Please enter your comment!
Please enter your name here