ರೈತರ ಬೆಳೆ ವಿಮೆ ಬಗ್ಗೆ ಹೆಚ್ಚು ಗಮನಹರಿಸಿ: ಶ್ವೇತ ದೇವರಾಜ್

0

ರೈತರಿಗೆ ಸಲ್ಲಬೇಕಾದ ಬೆಳೆಯ ವಿಮೆಯನ್ನು ಸಕಾಲದಲ್ಲಿ ನೀಡಬೇಕು. ಈ ಬಗ್ಗೆ ಹೆಚ್ಚು ಗಮನಹರಿಸಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ವೇತ ದೇವರಾಜ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿಂದು ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಈಬಾರಿ ಜಿಲ್ಲೆಯಲ್ಲಿ ಹೆಚ್ಚು ಬಿತ್ತನೆಯಾಗಿದೆ. ಈ ಸಂಬಂಧ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾವಹಿಸಿ ಎಂದು ಹೇಳಿದರು.

ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಗುವ ಆಯುಷ್ಮಾನ್ ಕಾರ್ಡ್ ಎಲ್ಲಾ ಬಿ.ಪಿ.ಎಲ್ ಕುಟುಂಬದವರಿಗೆ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ದೊರೆಯುವ ಸೌಲಭ್ಯವಾಗಿದ್ದು, ಎಲ್ಲಾ ಬಡವರಿಗೂ ಇದು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಈ ಬಗ್ಗೆ ಕ್ರಮ ವಹಿಸಿ ಎಂದು ಶ್ವೇತ ದೇವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಚಳಿ ಹೆಚ್ಚಾಗುವುದರಿಂದ ಎರಡನೇ ಹಂತದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಿ ಎಂದು ಹೇಳಿದರು.

ಈ ಬಾರಿ ಹೆಚ್ಚು ಅತಿವೃಷ್ಟಿಯಿಂದಾಗಿ ಹೆಚ್ಚು ಬೆಳೆಹಾನಿಯಾಗಿದೆ. ಈ ನಿಟ್ಟಿನಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಪರಿಹಾರಧನ ಒದಗಿಸಿ ಎಂದು ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ತಿಳಿಸಿದರು.

ಬೆಳಕು ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳ ವರದಿಯನ್ನು ಪಡೆದರಲ್ಲದೆ, ನಿರಂತರ ಜ್ಯೋತಿ ಯೊಜನೆಯಡಿ ಬಾಕಿ ಇರುವ ಎಲ್ಲಾ ಮನೆಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು ಹಾಗೂ ಗಂಗಾ ಕಲ್ಯಾಣ ಯೋಜನೆ, ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಒದಗಿಸಲು ಸೂಚಿಸಿದರು.

ವಿದ್ಯುತ್ ಪ್ರಸರಣ ಕೇಂದ್ರಗಳ ಕಾಮಗಾರಿ ಸೇರಿದಂತೆ ಹೇಮಾವತಿ ಹಾಗೂ ಯಗಚಿ ಜಲಾಶಯದ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿರುವ ನೀರಿನ ಬಳಕೆಯ ಮಾಪನ ಕಳಪೆ ಗುಣಮಟ್ಟದ್ದಾಗಿದೆ. ಈ ಬಗ್ಗೆ ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ಶ್ವೇತ ದೇವರಾಜ್ ತಿಳಿಸಿದರು.

ಚಿರತೆ ಆನೆಗಳಂತಹ ಕಾಡು ಪ್ರಾಣಿಗಳು ಇತ್ತೀಚೆಗೆ ಗ್ರಾಮಗಳತ್ತ ನುಗ್ಗುತ್ತಿವೆ. ಅವುಗಳಿಗೆ ಆಹಾರ ಅಥವಾ ನೀರಿನ ಅಭಾವವಾಗದಂತೆ ಅರಣ್ಯದೊಳಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಎಂದರು.

ಜಿಲ್ಲೆಯಲ್ಲಿ ಕೆಲವರಿಗೆ ಪಿಂಚಣಿಯು ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೆ ವಿಧವಾ ವೇತನ ಹಾಗೂ ಇತರೆ ಸೌಲಭ್ಯಗಳೂ ಸಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಇರುವ ತೊಡಕುಗಳನ್ನು ಸರಿಪಡಿಸಿಕ್ರಮ ವಹಿಸಿ ಆದಷ್ಟು ಬೇಗ ಸೌಲಭ್ಯ ಒದಗಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಬಡಕುಟುಂಬಗಳಿಗೆ ಅನುಕೂಲವಾಗುವಂತೆ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರದಾರರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಹಾಗೂ ಹಣ ಪಡೆಯುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಶ್ವೇತ ದೇವರಾಜ್ ತಿಳಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಾಗೂ ನಿಗಮಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿದರೂ ಸಹ ಮಂಜೂರಾದ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕುಗಳು ನಿರಾಕರಿಸುತ್ತಿವೆ. ಈ ರೀತಿಯಾಗದಂತೆ ಕ್ರಮ ವಹಿಸಿ ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಆರೋಗ್ಯ ಇಲಾಖೆಯಿಂದ ನೀಡಲಾಗುವ ಜನನಿ ಸುರಕ್ಷಾ ಯೋಜನೆ ಹೆಚ್ಚು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೂಡಲೇ ಈ ಸೌಲಭ್ಯವನ್ನು ಪಡೆದ ನಂತರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದರು.

ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇರುವ ಅನುದಾನವನ್ನು ಜಿಲ್ಲಾ ಪಂಚಾಯ್ತಿಯಿಂದ ಒದಗಿಸಲಾಗುವುದು. ಆದರೆ ಕಾಮಗಾರಿಯು ಯಾವುದೇ ವಿಳಂಬವಾಗದಂತೆ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಕೊರೋನ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಎಂದು ಅವರು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಸಣ್ಣ ಸಣ್ಣ ಕೈತೋಟಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಲಭ್ಯವಾಗುತ್ತದೆ ಎಂದು ಬಿ.ಎ ಪರಮೇಶ್ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೆಚ್.ವಿ ನಾಗರಾಜ್, ಉಪಕಾರ್ಯದರ್ಶಿಗಳಾದ ಮಹೇಶ್, ಚಂದ್ರಶೇಖರ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here