ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ

0

ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಎಲ್ಲಾ ಇಲಾಖಾ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಜವಾಬ್ದಾರಿ ಅರಿತು ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಎರಡನೇ ತ್ರೈಮಾಸಿಕ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಹುತೇಕ ಆರ್ಥಿಕ ವರ್ಷ ಮುಗಿಯುತ್ತಿದ್ದು, ಉಳಿದಿರುವ ನಾಲ್ಕು ತಿಂಗಳಲ್ಲಿ ಬಾಕಿ ಇರುವ ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿ ಎಂದು ನಿರ್ದೇಶನ ನೀಡಿದರು.

ಕೃಷಿ ಯಂತ್ರೀಕರಣಕ್ಕೆ ಇನ್ನಷ್ಟು ಹೆಚ್ಚು ಒತ್ತು ನೀಡಿ ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ಚಟುವಟಿಕೆಗಳಿಗೆ ಆಧ್ಯತೆ ನೀಡಿ ಎಂದು ಪ್ರಜ್ವಲ್ ರೇವಣ್ಣ ಅವರು ಹೇಳಿದರು.

ಇದೇ ವೇಳೆ ಶಾಸಕರಾದ ಹೆಚ್.ಡಿ ರೇವಣ್ಣ ಅವರು ಮಾತನಾಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಆಗುವ ನಷ್ಟ ಉಳಿಸಿ ಬೆಳೆ ವ್ಯವಸ್ಥೆಗಳ ಬಗ್ಗೆ ಕೃಷಿಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವು ಒದಗಿಸಿ ಎಂದು ಹೇಳಿದರು.

ಕೃಷಿ, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಿದೆ. ಬಿತ್ತನೆ ಬೀಜ, ಹವಾಮಾನ, ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸಿ ಬೇಸಾಯವನ್ನು ಲಾಭದಾಯಕವಾಗಿ ಪರಿವರ್ತಿಸಿ ಎಂದು ಹೇಳಿದರು.

ಪ್ರತಿ ವರ್ಷ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಕನಿಷ್ಠ ತಾಲ್ಲೂಕಿಗೆ ಕೆಲವು ಗ್ರಾಮ ಪಂಚಾಯ್ತಿಗಳನ್ನಾದರೂ ಮಾದರಿಯನ್ನಾಗಿ ಪರಿವರ್ತಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ, ಪಶುಪಾಲನಾ ಇಲಾಖೆಗಳ ನಾಯಕತ್ವದಲ್ಲಿ 500 ಎಕರೆ ಜಮೀನನ್ನು ಸಮೃದ್ಧಿಗೊಳಿಸಿ ಅದರಲ್ಲಿ ಶೇ. 50 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಜಮೀನು ಅಭಿವೃದ್ಧಿಪಡಿಸಿ ಎಂದು ಶಾಸಕ ರೇವಣ್ಣ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಖಾಲಿ ಇರುವ ಶೇ. 87 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರು ಈ ವಿಷಯವನ್ನು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಅಧ್ಯಕ್ಷತೆಯ ಕೆ.ಡಿ.ಪಿ ಸಭೆಗಳಲ್ಲಿ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಅವರು ಮಾತನಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಪೌಷ್ಠಿಕ ಉದ್ಯಾನ ಯೋಜನೆ ಜಾರಿಗೆ ತರಲಾಗುತ್ತಿದೆ. ಆಸಕ್ತರು ಮನೆಯಲ್ಲಿಯೇ ಇಂತಹ ಗಿಡಗಳನ್ನು ಬೆಳೆದು ಆರ್ಥಿಕ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.

ಸಾಮಾಜಿಕ ಅರಣ್ಯ ಹಾಗೂ ಸಾಮಾನ್ಯ ಅರಣ್ಯ ಯೋಜನೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸಸಿಗಳನ್ನು ಬೆಳೆಯಲು ಕೇಳಿದಷ್ಟು ಅನುದಾನ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಚಿಂತನೆಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.

ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರಾದ ಹೆಚ್.ಡಿ ರೇವಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‍ಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಇದನ್ನು ತಪ್ಪಿಸಿ ಬಡರೋಗಿಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೇಳಿದರು.

ಜಿಲ್ಲೆಯ ಹೆದ್ದಾರಿ, ತಾಲ್ಲೂಕು ಕೇಂದ್ರಗಳು ಹಾಗೂ ವೈದ್ಯಕೀಯ ಸೌಲಭ್ಯದಿಂದ ದೂರದಲ್ಲಿರುವ ಕ್ಲಿಷ್ಟ ಪ್ರದೇಶಗಳಲ್ಲಿ ವೆಂಟಿಲೇಟರ್ ಸೌಲಭ್ಯ ಇರುವ ಸುಸಜ್ಜಿತ ಆಂಬುಲೆನ್ಸ್‍ಗಳನ್ನು ನಿಯೋಜಿಸಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೆಲವು ಆಂಬುಲೆನ್ಸ್‍ಗಳನ್ನು ನಿಯೋಜಿಸಿ ಎಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶಾಸಕರಾದ ಹೆಚ್.ಡಿ.ರೇವಣ್ಣ ಹಾಗೂ ಕೆ.ಎಸ್.ಲಿಂಗೇಶ್ ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಅಧಿಕ ಬಿಲ್ ಪಡೆಯುತ್ತಿದ್ದು, ಇವುಗಳ ಮೇಲೆ ನಿಯಂತ್ರಣ ಅಗತ್ಯವಿದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇದ್ದರೂ ರೋಗಿಗಳನ್ನು ಏಕೆ ಖಾಸಗಿ ಆಸ್ಪತ್ರೆಗೆ ಕಳಿಸಲಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ಶಾಸಕ ಹೆಚ್.ಡಿ ರೇವಣ್ಣ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ನೀಡಲಾದ ಕೋವಿಡ್ ಚಿಕಿತ್ಸೆ ಕುರಿತು ಆಡಿಟ್ ಮಾಡಿಸಿ, ಈವರೆಗೆ ಎಷ್ಟು ರೋಗಿಗಳು ದಾಖಲಾಗಿದ್ದಾರೆ, ಎಷ್ಟು ಬಿಲ್ ಪಾವತಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಭಾರತೀಯ ಮೆಡಿಕಲ್ ಕೌನ್ಸಿಲ್ ಹಾಗೂ ರಾಜ್ಯ ಮೆಡಿಕಲ್ ಕೌನ್ಸಿಲ್‍ಗೆ ಪತ್ರ ಬರೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಆಯುಷ್ ಅಧಿಕಾರಿಗಳು ಇಲಾಖಾ ಕಾರ್ಯಕ್ರಮಗಳನ್ನು ನಡೆಸುವ ವೇಳೆ ಶಿಷ್ಟಾಚಾರ ಪಾಲಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.

ಸಕಲೇಶಪುರ ಮಾರ್ಗ ಮಧ್ಯ ರಸ್ತೆ ಅಭಿವೃದ್ಧಿ ಕಾರ್ಯ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ತಾತ್ಕಾಲಿಕ ಗುಂಡಿ ಮುಚ್ಚುವ ಕಾರ್ಯವೂ ವಿಳಂಬವಾಗುತ್ತಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಿ ಎಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಶಾಸಕರಾದ ಹೆಚ್.ಡಿ ರೇವಣ್ಣ ಸೂಚನೆ ನೀಡಿದರು.

ಸಕಲೇಶಪುರ ವ್ಯಾಪ್ತಿಯ ದೊಡ್ಡತಪ್ಲು ಗ್ರಾಮದ ಬಳಿ ಭೂಕುಸಿತ ಆಗುತ್ತಿದ್ದು, ಮುಂದೆ ಅನಾಹುತಗಳಾದರೆ ಇಲಾಖೆಯೆ ಹೊಣೆಯಾಗಲಿದ್ದು, ಈಗಲೇ ಮುಂಜಾಗ್ರತೆ ವಹಿಸಬೇಕು ಎಂದು ಲೋಕಸಭಾ ಸದಸ್ಯರು ಎಚ್ಚರಿಸಿದರು.

ಹೆದ್ದಾರಿ ಕಾಮಗಾರಿಗೆ ಅಗತ್ಯ ಮಾನವ ಸಂಪನ್ಮೂಲ ಬಳಸಿಕೊಳ್ಳುತ್ತಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಜೊತೆಗೆ ಕಾಮಗಾರಿ ಪ್ರಗತಿ ವರದಿಯನ್ನು ಜಿಲ್ಲಾಡಳಿತಕ್ಕೆ ತಕ್ಷಣವೇ ಸಲ್ಲಿಸಬೇಕು ಎಂದು ಸೂಚಿಸಿದರು.

ಹಾಸನದಿಂದ ಬೇಲೂರಿನ ಹೆದ್ದಾರಿ ಅಗಲೀಕರಣಕ್ಕೆ ಕಳೆದ ಬಾರಿಯೇ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಆದರೆ ಆ ಕಾಮಗಾರಿಯನ್ನು ಕೈಬಿಡಲಾಗಿದೆ ಎಂದು ಶಾಸಕರು ವಿಷಾದ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಆದಷ್ಟು ಬೇಗ ಕಾಮಾಗಾರಿ ಪ್ರಾರಂಭಿಸಬೇಕು ಎಂದರು.

ಲೋಕಸಭಾ ಸದಸ್ಯರು ಮಾತನಾಡಿ ಮಲೆನಾಡು ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ಸಮಸ್ಯೆ ಇದ್ದು ರೈತರು ಯಾವುದೇ ಬೆಳೆ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆ ಭಾಗದ ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಂಡು ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದರೆ ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ಮಾತನಾಡಿ ರೈತರ ಭೂಮಿಯನ್ನು ಸ್ವಾದೀನಪಡಿಸಿಕೊಂಡು ಪರಿಹಾರ ಒದಗಿಸಲು ಇಲಾಖೆಯಲ್ಲಿ ಸಾಕಷ್ಟು ಅನುದಾನ ಇಲ್ಲದ ಕಾರಣ ರೈಲ್ವೆ ಬ್ಯಾರಿಕೇಡ್ ಮಾಡಲು ಇಲಾಖೆ ಸೂಚಿಸಿದೆ ಎಂದರು. ಆನೆಗಳು ಇರುವ ಜಾಗವನ್ನು ಗುರುತಿಸಲು ರೇಡಿಯೋ ಕಾಲರ್‍ಗಳನ್ನು ಖರೀದಿಸಲಾಗಿದೆ. ಇದರಿಂದ ಆನೆಗಳು ಇರುವ ಸ್ಥಳವನ್ನು ಶೀಘ್ರವಾಗಿ ಗುರುತಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬಹುದು ಎಂದು ಅವರು ತಿಳಿಸಿದರು.

ಶಾಸಕರಾದ ಹೆಚ್.ಡಿ ರೇವಣ್ಣ ಅವರು ಮಾತನಾಡಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರಬೇಕು. ಈಗಾಗಲೇ ಹಲವು ಹಳ್ಳಿಗಳ ರಸ್ತೆಗಳು ಹಾಳಾಗಿದ್ದು, ದುರಸ್ತಿ ಕಾಮಗಾರಿಗಳು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಸುಮಾರು 47 ಸಾವಿರ ಕುಟುಂಬಗಳಿಗೆ ಪಿಂಚಣಿ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸರಿಪಡಿಸಬೇಕು ಎಂದು ಶಾಸಕರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೆಲವು ತಾಂತ್ರಿಕ ದೋಷಗಳಿಂದ ಪಿಂಚಣಿ ಸೌಲಭ್ಯ ಸ್ಥಗಿತಗೊಂಡಿತ್ತು, ಈಗಾಗಲೇ ಸುಮಾರು 45 ಸಾವಿರ ಪಿಂಚಣಿದಾರರಿಗೆ ಸೌಲಭ್ಯ ದೊರೆತಿದ್ದು, ಬಾಕಿ ಇರುವವರಿಗೂ ಶೀಘ್ರದಲ್ಲೇ ಸೌಲಭ್ಯ ಒದಗಿಸಲಾಗುವುದು ಎಂದರು.
ಇದೇ ರೀತಿ 32 ಸಾವಿರ ಅಂಗವಿಕಲರಿಗೆ ಅಗತ್ಯ ಸೌಲಭ್ಯ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪ್ರಸ್ತುತ ಯಾವುದೇ ಶಾಲಾ ಕಾಲೇಜುಗಳು ನಡೆಯುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಪ್ರಾರಂಭವಾಗುತ್ತವೆ. ಅಷ್ಟರೊಳಗೆ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ರೇವಣ್ಣ ತಿಳಿಸಿದರು.
ಹಲವಾರು ದಾನಿಗಳು ಶಾಲೆಗಳಿಗೆ ಸಾಕಷ್ಟು ಆಸ್ತಿಯನ್ನು ದಾನ ಮಾಡಿರುತ್ತಾರೆ ಅಂತಹವರ ಹೆಸರನ್ನು ಹಾಕಿಸುವುದು ಗೌರವಸೂಚಕ ಎಂದ ರೇವಣ್ಣ ಅವರು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಯುವ ಉದ್ದಿಮೆದಾರರು ಹಲವಾರು ಉತ್ತಮ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಆರ್ಥಿಕ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದರೂ ಬ್ಯಾಂಕುಗಳಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಯುವ ಉದ್ದಿಮೆದಾರರ ಉತ್ಸಾಹ ಕುಂಠಿತವಾಗುತ್ತದೆ. ಅಲ್ಲದೆ ರೈತರಿಗೆ ಸರ್ಕಾರದಿಂದ ಸಿಗುವ ಹಣ ಹಾಗೂ ನರೇಗಾ ಸೇರಿದಂತೆ ಪಿಂಚಣಿ ಮೂಲಕ ಬರುವ ಹಣವನ್ನು ಬ್ಯಾಂಕುಗಳು ಸಾಲದ ಮೊತ್ತಕ್ಕೆ ಕಡಿತಗೊಳಿಸುವಂತಿಲ್ಲ. ಈ ಬಗ್ಗೆ ಕ್ರಮ ವಹಿಸಿ ಎಂದು ಸೂಚಿಸಿದರು.
ಸರ್ಕಾರಿ ಶಾಲಾ ಕಾಲೇಜುಗಳ ಆಸ್ತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿಗಾವಹಿಸುವಂತೆ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶಾಸಕರುಗಳಾದ ಹೆಚ್.ಡಿ ರೇವಣ್ಣ, ಹೆಚ್.ಕೆ ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಂದ ಸೂಕ್ತ ವಿವರಣೆ ಪಡೆಯಿರಿ ಎಂದು ಲೋಕಸಭಾ ಸದಸ್ಯರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ತಿಳಿಸಿದರು.
ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಕೆ.ಎಸ್ ಲಿಂಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಉಪವಿಭಾಗಾಧಿಕಾರಿಗಳಾದ ಗಿರೀಶ್ ನಂದನ್, ಬಿ.ಎ ಜಗದೀಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here