ಅತ್ಯಾಚಾರಕ್ಕೆ ಮುಕ್ತಾಯವಿಲ್ಲವೇ ?

0

ಹೆಣ್ಣುಮಕ್ಕಳು ಮಹಾಲಕ್ಷ್ಮಿ ಎಂದು ಹೇಳುವ ಈ ದೇಶದ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷ ಣೆಯೇ ಇಲ್ಲ .ಭಾರತಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾಗಿದ್ದರೂ ಹೆಣ್ಣು ಮಕ್ಕಳಿಗೆ ಸ್ವಾತಂತ್ರವಾಗಿ ರಾತ್ರಿ ಹೊತ್ತು ಓಡಾಡಲು ಅವಕಾಶವೇ ಇಲ್ಲ .

ಭಾರತ ದೇಶ ಹೆಣ್ಣುಮಕ್ಕಳ ಅತ್ಯಾಚಾರದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಇದೇನಾ ನಮ್ಮ ದೇಶದ ಬೆಳವಣಿಗೆ?ದಿನಕ್ಕೆ ಸುಮಾರು 91 ಅತ್ಯಾಚಾರದ ಪ್ರಕರಣಗಳು ದಾಖಲಿಸಲಾಗಿದೆ.ಈ ಸಂಖ್ಯೆ ಬರೀ ದಾಖಲಿಸಲಾಗಿರುವ ಪ್ರಕರಣಗಳು, ಎಷ್ಟೋ ಪ್ರಕರಣಗಳು ತೆರೆ ಹಿಂದೆಯೇ ಮರೆಯಾಗುತ್ತಿದೆ.
ಈ ವಿಷಯಗಳನ್ನು ಕೇಳಿದಾಗ ನಮ್ಮ ಕಾನೂನು ವ್ಯವಸ್ಥೆ ಮೇಲೆ ಅಸಹ್ಯ ಹುಟ್ಟುತ್ತೆ.

ಸೆಪ್ಟೆಂಬರ್ ಹದಿನಾಲ್ಕು ರಂದು ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಒಂದು ಸಾಮೂಹಿಕ ಅತ್ಯಾಚಾರದ ಘಟನೆ ಸಂಭವಿಸಿತ್ತು . ನಾಲ್ವರು ಉನ್ನತ ವರ್ಗದ ಪಿಶಾಚಿಗಳು ಹತ್ತೊಂಬತ್ತು ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು.
ಈ ಕೆಲಸವನ್ನು ಯಾವುದೇ ಭಯ ಅಥವಾ ಸಂಕೋಚದಿಂದ ಮಾಡುವುದಿಲ್ಲ ಯಾಕೆಂದರೆ ಭ್ರಷ್ಟಾಚಾರದ ಕಾನೂನು ಎಂದಿಗೂ ಇವರ ಸಹಾಯದಲ್ಲಿ ಇರುತ್ತದೆ ಎಂದು ಇವರಿಗೆ ಬಹಳ ಧೈರ್ಯ.

ಈ ಅತ್ಯಾಚಾರದ ಬಳಿಕ ಆ ಹುಡುಗಿಯ ಉಸಿರು ಕಟ್ಟಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಕೆಯ ನಾಲಿಗೆ ಕತ್ತರಿಸಿ ಬೆನ್ನುಮೂಳೆ ಮುರಿದಿದ್ದರು.ಗಂಭೀರ ಸ್ಥಿತಿಯಲ್ಲಿದ್ದ ಅವಳನ್ನು ಜವಾಹರಲಾಲ್ ನೆಹರು ಮೆಡಿಕಲ್ ಆಸ್ಪತ್ರೆಯಿಂದ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದರು,ಆಕೆಗೆ ಸಮಯಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ ನೀಡದೆ ಇರುವ ಕಾರಣದಿಂದ ಯುವತಿ ಮೃತಪಟ್ಟಿದ್ದಾಳೆ.

ಪೊಲೀಸರು ಯುವತಿಯ ಶವ ಕುಟುಂಬಸ್ಥರಿಗೆ ಕೊಡದೆ ಶವವನ್ನು ಸುಟ್ಟು ಹಾಕಿದ್ದಾರೆ ಈ ಅತ್ಯಾಚಾರ ಖಂಡಿಸಿ ಉತ್ತರ ಪ್ರದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ.ನಮ್ಮ ದೇಶದಲ್ಲಿ ಪ್ರತಿಭಟನೆಗಳು ಸದಾ ನಡೆಯುತ್ತಿದೆ ಆದರೆ ನ್ಯಾಯ ಮತ್ತು ರಕ್ಷಣೆ ಸಿಗುತ್ತಿಲ್ಲ.

ಆದರೆ ನಮ್ಮ ಭಾರತದಲ್ಲಿ ಹಲವರ ಮನಸ್ಥಿತಿ ಹೇಗೆಂದರೆ ಹೆಣ್ಣುಮಕ್ಕಳು ಚಿಕ್ಕ ,ಪುಟ್ಟ ಬಟ್ಟೆ ಹಾಕುವುದರಿಂದ, ರಾತ್ರಿ ಒಬ್ಬಂಟಿಯಾಗಿ ನಡೆಯುವುದರಿಂದ ಅತ್ಯಾಚಾರ ಹೆಚ್ಚಾಗುತ್ತಿದೆ ಎಂದು.ಇದೇ ಸತ್ಯವಾಗಿದ್ದರೆ ಇತ್ತೀಚೆಗೆ ಕೇರಳದಲ್ಲಿ ಪಾಸಿಟಿವ್ ಟೆಸ್ಟ್ ಆಗಿರುವ ಯುವತಿಯ ಮೇಲೆ ಆಂಬ್ಯುಲೆನ್ಸ್ ಚಾಲಕ ಅತ್ಯಾಚಾರ ನಡೆಸಿದ್ದ .ಸುಮಾರು ಹೆಣ್ಣುಮಕ್ಕಳು ಮನೆಯಲ್ಲೇ ಅತ್ಯಾಚಾರಕ್ಕೆ ಒಳಪಟ್ಟಿದ್ದಾರೆ. ಎಷ್ಟೋ ಹೆಣ್ಣು ಮಕ್ಕಳು ಈ ವಿಷಯವನ್ನು ಹೇಳಿಕೊಳ್ಳುವುದಕ್ಕೆ ಬಹಳ ಸಂಕೋಚ ಪಡುತ್ತಾರೆ ಏಕೆಂದರೆ ನಾವು ಬದುಕುತ್ತಿರುವ ಸಮಾಜ ಆ ಹೆಣ್ಣು ಮಗಳನ್ನು ಅವಳ ಕುಟುಂಬದವರನ್ನು ಕೀಳಾಗಿ ನೋಡುತ್ತದೆ ಎಂಬ ಭಯ.

ಇಂತಹ ಘಟನೆಗಳು ನಡೆದಾಗ ಯುವತಿ ಅತ್ಯಾಚಾರಕ್ಕೆ ಒಳಗೊಂಡಳು ಅನ್ನುತ್ತಾರೆ ಹೊರತು ಒಬ್ಬ ಗಂಡಸು ಹುಡುಗಿ ಮೇಲೆ ಅತ್ಯಾಚಾರ ನಡೆಸಿದ ಎಂದು ಹೇಳುವುದಿಲ್ಲ.ಅವಳು ತಪ್ಪು ಮಾಡದಿದ್ದರೂ ಅವಳ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಹೇಳುವ ಜನರೇ ಹೆಚ್ಚು.

ಭ್ರಷ್ಟಾಚಾರದಲ್ಲಿ ಮುಳುಗಿದ ಈ ಭಾರತದಲ್ಲಿ ತಪ್ಪು ಮಾಡಿದರೆ ಶಿಕ್ಷೆ ಆಗದು ಎಂಬ ಭರವಸೆ ಪಾಪಿಗಳಿಗೆ .ಅತ್ಯಾಚಾರ ಮಾಡುವವರಿಗೆ ಕಠಿಣ ಶಿಕ್ಷೆ ಇಲ್ಲದೆ ಹೋದರೆ ಇಂಥಾ ಘಟನೆಗಳು ಸದಾ ನಡೆಯುತ್ತಲೇ ಇರುತ್ತದೆ.ನಮ್ಮ ಹಲವಾರು ಮಾಧ್ಯಮದವರು ಕೂಡ ಯಾವ ನಟ ,ನಟಿ ಡ್ರಗ್ಸ್ ಸೇವಿಸುತ್ತಿದ್ದಾರೆ ಎಂಬ ವಿಷಯದಲ್ಲಿ ಕುತೂಹಲ ತೋರಿಸುತ್ತಿದ್ದಾರೆ ಹೊರತು, ಭಾರತದಲ್ಲಿ ಆಗುತ್ತಿರುವ ಅತ್ಯಾಚಾರದ ಬಗ್ಗೆ ಮಾತಾಡಲು ಯಾರೂ ಮುಂದೆ ಬರುತ್ತಿಲ್ಲ.

ಈ ಎಲ್ಲಾ ವಿಷಯಗಳನ್ನು ತಿಳಿದು ನಮ್ಮ ಯೋಚನೆಗೆ ಬರುವ ಒಂದು ವಿಷಯ ಏನೆಂದರೆ ಭಾರತ ದೇಶದಲ್ಲಿ ಅತ್ಯಾಚಾರಕ್ಕೆ ಮುಕ್ತಾಯವಿಲ್ಲವೇ ?

LEAVE A REPLY

Please enter your comment!
Please enter your name here