ಕಾಫಿ ಬೀಜ ಗುಣಮಟ್ಟ ಪರೀಕ್ಷಾ ಕೇಂದ್ರ ಸ್ಥಾಪಿಸಿ: ಆರ್. ಗಿರೀಶ್

0

ಕಾಫಿ ಬೆಳಗಾರರಿಗೆ ತಾವು ಬೆಳೆದ ಕಾಫಿ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಫಿ ಬೀಜದ ಗುಣಮಟ್ಟವನ್ನು ಪರೀಕ್ಷಿಸುವ ಪರೀಕ್ಷಾ ಕೇಂದ್ರವನ್ನು ಆದಷ್ಟು ಬೇಗ ಸ್ಥಾಪಿಸುವ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಕಡಿಮೆ ಪ್ರಮಾಣದಲ್ಲಿ ಕಾಫಿ ಬೆಳೆಯುವವರಿಗೆ ನೇರವಾಗಿ ತಮ್ಮ ದಾಸ್ತಾನನ್ನು ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಬೆಳೆದ ಕಾಫಿ ಬೀಜವನ್ನು ನಮ್ಮ ಜಿಲ್ಲೆಯಲ್ಲಿಯೇ ಪರೀಕ್ಷಿಸಿ ಗುಣಮಟ್ಟದ ವರದಿ ನೀಡಿದರೆ, ಬೆಳೆಗಾರರೇ ನೇರವಾಗಿ ತಮ್ಮ ದಾಸ್ತಾನನ್ನು ರಫ್ತು ಮಾಡಬಹುದು. ಇದರಿಂದ ಅವರಿಗೂ ಹೆಚ್ಚಿನ ಲಾಭ ದೊರೆತಂತಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ದೇಸಿ ವಿಶೇಷ ತಳಿ ರಾಜಮುಡಿ ಅಕ್ಕಿಯ ಉತ್ಪನ್ನ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇಂದು ಕಣ್ಮರೆಯಾಗುವ ಸ್ಥಿತಿಯಲ್ಲಿದೆ. ಹಿಂದೆ ಮೈಸೂರು ರಾಜಮನೆತನ ಉಪಯೋಗಿಸುತ್ತಿದ್ದ ಈ ಅಕ್ಕಿಯನ್ನು ಪುನಃ ಜನರಿಗೆ ಪರಿಚಯಿಸುವ ಅಗತ್ಯವಿದ್ದು, ಇದರ ಉತ್ಪಾದನೆಗೆ ಹೆಚ್ಚು ಆಧ್ಯತೆ ನೀಡಿ ಎಂದರಲ್ಲದೆ, ಪೌಷ್ಟಿಕಯುಕ್ತವಾದ ಈ ತಳಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದಿನೇಶ್ ಅವರು ಮಾತನಾಡಿ ಕರ್ನಾಟಕದಾದ್ಯಂತ ಒಟ್ಟು 13 ಪ್ರಾದೇಶಿಕ ಕಾಫಿ ವೈವಿಧ್ಯಗಳಿದ್ದು ಅವುಗಳಲ್ಲಿ ಕೇವಲ 5 ಕ್ಕೆ ಮಾತ್ರ ಜಿ.ಐ ಟ್ಯಾಗ್ ನೀಡಲಾಗಿದೆ. ಹಾಗಾಗಿ ಜಿಲ್ಲೆಯ ಸಕಲೇಶಪುರ ಪ್ರಾಂತ್ಯದಲ್ಲಿ ಬೆಳೆಯಲಾಗುವ ಕಾಫಿಗೆ ಮಂಜರಾಬಾದ್ ಕಾಫಿ ಎಂದು ಅನುಮೋದಿಸಿ ಜಿ.ಐ ಟ್ಯಾಗ್ ನೀಡಬೇಕೆಂದು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಕಾಫಿ ಮಂಡಳಿ ಜಂಟಿ ನಿರ್ದೇಶಕರಾದ ಶಂಕರ್ ನಾರಾಯಣ್ ಅವರು ಮಾತನಾಡಿ ಜಿಲ್ಲಯಲ್ಲಿ ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಅಗತ್ಯ ಸೌಲಭ್ಯಗಳಿದ್ದು, ಕೇಂದ್ರ ಕಚೇರಿಗೆ ಅನುಮೋದನೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೈಗಾರಿಕೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು. ಅಂತೆಯೇ ಆಯ್ದ ತೋಡಗಾರಿಕಾ ಉತ್ಪನ್ನಗಳ ಹೆಚ್ಚಳ ಮತ್ತು ರಫ್ತು ಕ್ರಿಯೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಸಣ್ಣ ಪ್ರಮಾಣದ ಕೈಗಾರಿಕೆ ಅಧ್ಯಕ್ಷರಾದ ಮಹಾಂತಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿ ಶುಂಠಿ ಹಾಗೂ ಕಾಲು ಮೆಣಸು ಯತೇಚ್ಚವಾಗಿ ಉತ್ಪಾದನೆಯಾಗುತಿದ್ದು, ಹೊರರಾಜ್ಯಗಳಿಗೆ ಅದು ರಫ್ತಾಗುತ್ತಿದೆ. ಈ ನಿಟ್ಟಿನಲ್ಲಿ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದರೆ ರೈತರಿಗೂ ಹೆಚ್ಚಿನ ಲಾಭ ದೊರೆಯುವುದರ ಜೊತೆಗೆ ಜಿಲ್ಲೆಯಲ್ಲಿ ಆಹಾರ ಉತ್ಪನ್ನ ಕೈಗಾರಿಕೆಗಳು ಇನ್ನೂ ಹೆಚ್ಚು ಅಭಿವೃದ್ಧಿಗೊಳ್ಳುತ್ತವೆ ಎಂದರು.

ಸಭೆಯಲ್ಲಿ ಹಾಜರಿದ್ದ ಎಫ್.ಕೆ.ಸಿ.ಸಿ. ನಿರ್ದೇಶಕರಾದ ಕಿರಣ್ ಹಾಗೂ ಇತರೆ ಉಧ್ಯಮಿಗಳು ಮಾತನಾಡಿ ರಫ್ತು ನಿಯಮಗಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದು, ಕಳೆದಬಾರಿ ಇದ್ದ ನಿಯಮಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕಾಫಿ ರಫ್ತುದಾರರು, ಕೈಗಾರಿಕೋದ್ಯಮಿಗಳು, ಎಫ್.ಕೆ.ಸಿ.ಸಿ. ಪ್ರತಿನಿಧಿಗಳು ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here