ದೇವಾಲಯಗಳ ಆಸ್ತಿ ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ

0

ಹಾಸನ ಜಿಲ್ಲೆಯಲ್ಲಿನ ಎಲ್ಲಾ ದೇವಾಲಯಗಳ ಆಸ್ತಿ ವಿವರಗಳನ್ನು ಆಯಾ ಗ್ರಾಮ ಪಂಚಾಯ್ತಿಗಳಿಂದ ಪಡೆದು ಸರ್ವೆ ಮಾಡಿಸಿ ಬೇಲಿ ಹಾಕುವ ಮೂಲಕ ದೇವಾಲಯಗಳ ಆಸ್ತಿ ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಮುಜರಾಯಿ ಸ್ವತ್ತುಗಳ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಎಲ್ಲಾ ತಾಲ್ಲೂಕು ತಹಶೀಲ್ದಾರರುಗಳು ಆರಾಧನ ಯೋಜನೆಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೇ ದೇವಾಲಯಗಳಿಗೆ ಸಂಬಂಧಿಸಿದ ಆಸ್ತಿಯನ್ನು ಗುರುತಿಸಿದ್ದು, ಅತಿಕ್ರಮಣ ಮಾಡಲಾಗಿರುವ ಆಸ್ತಿಯನ್ನು ಅಳತೆ ಮಾಡಿಸಿ, ದೇವಾಲಯಗಳ ದುಡ್ಡನ್ನು ಬಳಸಿ ಆಸ್ತಿಯ ಸುತ್ತ ಬೇಲಿ ನಿರ್ಮಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಆರಾಧನಾ ಯೋಜನೆಯಲ್ಲಿ ಮಂಜೂರು ಮಾಡಲಾಗಿರುವ ಅನುಧಾನವನ್ನು ದೇವಾಲಯಗಳ ರಿಪೇರಿ, ಪೈಂಟಿಂಗ್, ವಿದ್ಯುತ್ ವ್ಯವಸ್ಥೆ ಹಾಗೂ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಹಾಗೂ ಕ್ರಿಯಾ ಯೋಜನೆ ತಯಾರಿಸಿ ಆಯಾ ಕ್ಷೇತ್ರಗಳ ಶಾಸಕರುಗಳ ಮಾರ್ಗದರ್ಶನದಂತೆ ರಿಪೇರಿ ಮಾಡಿಸುವಂತೆ ಅವರು ಸೂಚಿಸಿದರು.
ದೇವಾಲಯಗಳ ಚಿಕ್ಕ ದುರಸ್ಥಿಗಾಗಿ ಜೀರ್ಣೋದ್ಧಾರದಲ್ಲಿ ಮಂಜೂರಾಗಿರುವ ಅನುಧಾನಕ್ಕೆ ತಕ್ಕಂತೆ 15 ದಿನದೊಳಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಪಿ.ಡಬ್ಲೂ.ಡಿ ಅಥವಾ ನಿರ್ಮಿತಿ ಕೇಂದ್ರಕ್ಕೆ ಹಣ ನೀಡಿ ನಿಯಮಾನುಸಾರ ಕೆಲಸ ಮಾಡಿಸುವಂತೆ ಜಿಲ್ಲಾಧಿಕಾರಿಯವರು ತಹಶೀಲ್ದಾರರಿಗೆ ಸೂಚನೆ ನೀಡಿದರು.
ದೇವಾಲಯಗಳ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗಳಿಂದ ಕಲೆ ಹಾಕಿ ಖಾತೆ ಮತ್ತು ಚೆಕ್‍ಬಂದಿಗಳ ಪ್ರಕಾರ ಒತ್ತುವರಿ ಆಗಿದೆಯೇ ಇಲ್ಲವೇ ಎಂಬುದರ ಪರಿಶೀಲನೆ ನಡೆಸಿ ಧರ್ಮ ದತ್ತಿ ಇಲಾಖೆ ಕಳುಹಿಸಿಕೊಡುವಂತೆ ಆರ್. ಗಿರೀಶ್ ಅವರು ತಹಶೀಲ್ದಾರರುಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಉಪ ವಿಭಾಗಾಧಿಕಾರಿಗಳಾದ ಗಿರೀಶ್ ನಂದನ್, ಬಿ.ಎ. ಜಗದೀಶ್, ತಹಶೀಲ್ದಾರ್‍ಗಳಾದ ಶಿವಶಂಕರಪ್ಪ, ರೇಣುಕುಮಾರ್, ನಟೇಶ್, ಧರ್ಮ ದತ್ತಿ ತಹಶೀಲ್ದಾರರಾದ ದಿನೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here