ಹಾಸನ: ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವ ಘಟನೆ ಹಾಸನ ತಾಲ್ಲೂಕಿನ ಉದ್ದೂರು ಗ್ರಾಮದಲ್ಲಿ ನಡೆದಿದೆ.
ಹಾಸನ ಲೋಕಸಭೆ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಭಾಷಣ ಮಾಡುತ್ತಿದ್ದ ವೇಳೆ, ಇಷ್ಟು ದಿನ ಎಲ್ಲಿ ಹೋಗಿದ್ದೀರಿ ಎಂದು ಉದ್ದೂರು ಗ್ರಾಮದ ರಾಜೇಗೌಡ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆ ವೇಲೆ ಕೆಲವು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದ್ದು, ಎರಡು ಕಡೆಯವರು ದೂರು ಕೊಡಲು ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆ ಎದುರು ಜಮಾವಣೆಯಾದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹಾಸನ ತಾಲ್ಲೂಕಿನ ಉದ್ದೂರು ಗ್ರಾಮದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಆರ್ ಎಸ್ ಎಸ್ ನಲ್ಲಿ ಅಜಗಜಾಂತರ ವ್ಯತ್ಯಾಸ: ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಆರ್ ಎಸ್ ಎಸ್ ಕುರಿತು ಮಾಜಿ ಸಿಎಂ ಕುಮಾರಣ್ಣ ಹೇಳಿರುವುದರಲ್ಲಿ ತಪ್ಪೇನಿದೆ, ಕೆಲವು ದಿನಗಳ ಹಿಂದೆ ಒಂದು ವಿಡಿಯೋ ನೋಡಿದ್ದೆ. ತುಮಕೂರಿನ ಬಿಜೆಪಿ ಮುಖಂಡ ಆರ್ ಎಸ್ ಎಸ್ ನವರು ಭ್ರಷ್ಟರೆಂದು ಬೈದಿದ್ದಾರೆ. ಆರ್ ಎಸ್ ಎಸ್ ಏನು ಅಂತಾ ಅವರ ಪಕ್ಷದವರೇ ತಿಳಿಸಿದ್ದಾರೆ.
ವಿಡಿಯೋದಲ್ಲಿ ಆರ್ ಎಸ್ ಎಸ್ ಬಣ್ಣವನ್ನು ಜಗಜಾಹಿರಾತು ಮಾಡಿದ್ದಾರೆ. ಕತ್ತಲು ಎಲ್ಲಿ ಇರುತ್ತೋ, ಬೆಳಕು ಅಲ್ಲೇ ಇರುತ್ತದೆ. ಜನ ಬರೀ ಬೆಳಕು ನೋಡುವುದು ಬಿಟ್ಟು ಕತ್ತಲು ನೋಡಬೇಕಾಗುತ್ತದೆ, ಎಂದು ಮಾರ್ಮಿಕವಾಗಿ ಮಾತನಾಡಿದರು.
1970ರಲ್ಲಿ ಆರ್ ಎಸ್ ಎಸ್ ಸಂಘಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭೇಟಿ ನೀಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿ, 1970ರಲ್ಲಿ ಇದ್ದ ಆರ್ ಎಸ್ ಎಸ್ ಬೇರೆ, ಈಗಿರುವ ಆರ್ ಎಸ್ ಎಸ್ ಬೇರೆ.
ಅಂದಿಗೂ- ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ, ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.ಈಗಿರುವವ ಆರ್ ಎಸ್ ಎಸ್ ನವರು ಅಧಿಕಾರದ ವ್ಯಾಮೋಹವಿರುವವರಾಗಿದ್ದಾರೆ. ಹಿಂದುತ್ವ ಉಳಿಸಬೇಕೆನ್ನುವ ಆರ್ ಎಸ್ ಎಸ್ ಹಿಂದೆ ಇತ್ತು. ಅದರ ವ್ಯತ್ಯಾಸವನ್ನು ಅವರು ಮೊದಲು ತಿಳಿದುಕೊಳ್ಳಲಿ, ಎಂದು ತಿರುಗೇಟು ನೀಡಿದರು.
ಆರ್ ಎಸ್ ಎಸ್ ಎಂದರೆ ಏನು, ಹಿಂದೆ ಆರ್ ಎಸ್ ಎಸ್ ಹೇಗಿತ್ತು, ಹೇಗೆ ಬೆಳೆದು ಬಂದಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ. ಈಗ ಯಾರೂ ಬಿಜೆಪಿ ಅಂತಾ ಹೇಳುತ್ತಿಲ್ಲ. ಕೆಲವು ದಿನಗಳಲ್ಲಿ ಬಿಜೆಪಿ ಹೆಸರು ಹೋಗಿ ಆರ್ ಎಸ್ ಎಸ್ ಆಗುತ್ತದೆ, ಎಂದರು.