Hassan Taluks

ಕಾಲು ಮತ್ತು ಬಾಯಿ ಜ್ವರದ ಬಗ್ಗೆ ಎಚ್ಚರ ವಹಿಸಿ: ಲಸಿಕೆ ಹಾಕಿಸಿ

By Hassana News

September 30, 2020

ಕಾಲು ಮತ್ತು ಬಾಯಿ ಜ್ವರವು ಗೊರಸುಳ್ಳ ಸಾಕು ಪ್ರಾಣಿಗಳಲ್ಲಿ ಅಂದರೆ ದನ, ಎಮ್ಮೆ, ಕುರಿ, ಮೇಕೆ, ಹಂದಿಗಳಲ್ಲಿ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಇದಕ್ಕೆ ಸಕಾಲದಲ್ಲಿ ಲಸಿಕೆ ಹಾಕಿ ನಿಯಂತ್ರಿಸದಿದ್ದರೆ, ಜಾನುವಾರುಗಳು ಸಾವನ್ನಪ್ಪುವುದರ ಜೊತೆಗೆ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ.ಕಾಲು ಮತ್ತು ಬಾಯಿ ಜ್ವರ ರೋಗದಿಂದ ವಯಸ್ಕ ಜಾನುವಾರುಗಳಲ್ಲಿ ಸಾವು ಸಂಭವಿಸುವುದು ಕಡಿಮೆ ಆದರೆ ಕರುಗಳು ಯಾವುದೇ ರೋಗದ ಚಿಹ್ನೆಗಳು ಇಲ್ಲದೆ ಮರಣ ಹೊಂದುತ್ತವೆ. ವಯಸ್ಕ ಜಾನುವಾರುಗಳಲ್ಲಿ ಕಾಲು ಮತ್ತು ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳ್ಳುತ್ತವೆ. ಇದರಿಂದ ಜಾನುವಾರುಗಳು ಮೇವು, ನೀರು ಸೇವಿಸದೇ ಸೊರಗಿ ಸಾವು ಉಂಟಾಗುವ ಸಂಭವವಿರುತ್ತದೆ.ಕಾಲು ಮತ್ತು ಬಾಯಿ ಜ್ವರ ಕಂಡುಬಂದಂತಹ ಜಾನುವಾರುಗಳಲ್ಲಿ ಹಾಲಿನ ಉತ್ಪತ್ತಿ ಕುಂಠಿತವಾಗುತ್ತದೆ ಹಾಗೂ ಸಂತಾನೋತ್ಪತ್ತಿ ಕುಂಠಿತವಾಗುವ ಸಂಭವವಿರುತ್ತದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿ ಜನ್ಯ ಉತ್ಪನ್ನಗಳನ್ನು (ಅಂದರೆ ಹಾಲು, ಮಾಂಸ ಇತರೆ) ರಪ್ತು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಬಹಳ ನಷ್ಟ ಉಂಟಾಗುತ್ತದೆ.ಈ ದೃಷ್ಟಿಯಿಂದ ರೋಗ ನಿಯಂತ್ರಣ ಹಾಗೂ ರೋಗ ನಿರ್ಮೂಲನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆದಕಾರಣ ಭಾರತ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೋಗ ನಿಯಂತ್ರಣಕ್ಕೆ ಆರ್ಥಿಕ ಸಹಾಯ ನೀಡುತ್ತಿದೆ. ಪ್ರತಿ ಆರು 6 ತಿಂಗಳಿಗೊಮ್ಮೆ ಭಾರತ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿ ಅನುಸರಿಸಿ ಈಗಾಗಲೇ 8 ವರ್ಷಗಳಿಂದ ದನ, ಎಮ್ಮೆ ಮತ್ತು ಹಂದಿಗಳಿಗೆ ಸಾಮೂಹಿಕವಾಗಿ ಕಾಲು ಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಜಂಟಿಯಾಗಿ ಲಸಿಕಾ ಕಾರ್ಯಕ್ರಮದ ವೆಚ್ಚವನ್ನು ಭರಿಸಲಾಗುತ್ತಿತ್ತು. ಆದರೆ 11 ಸೆಪ್ಟೆಂಬರ್ 2019ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಗಳು ಈ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದಲೇ ಭರಿಸುವುದಾಗಿ ಘೋಷಿಸಿರುತ್ತಾರೆ. ಅದೇ ರೀತಿ ಈ ಬಾರಿಯೂ 17ನೇ ಸುತ್ತಿನ ಕಾರ್ಯಕ್ರಮವನ್ನು (ಮೊದಲನೇ ಸುತ್ತಿನ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮ) ಅಕ್ಟೋಬರ್ 2 ರಿಂದ ನವೆಂಬರ್ 15 ರವರೆಗೆ 45 ದಿನಗಳು ನಡೆಸಲು ಸೂಚಿಸಿರುತ್ತಾರೆ.ಲಸಿಕೆ ಹಾಕಲು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳು: ಪ್ರತಿ ಹಳ್ಳಿಗಳಲ್ಲಿ ಮೈಕ್ರೋ ಮ್ಯಾಪಿಂಗ್ ಕೈಗೊಳ್ಳಲಾಗಿದ್ದು, ಬಯಲು ಪ್ರದೇಶದಲ್ಲಿ 100 ರಿಂದ 120 ರಾಸುಗಳಿಗೆ ಒಂದು ಬ್ಲಾಕ್‍ನಂತೆ, ಮಲೆನಾಡು ಪ್ರದೇಶದಲ್ಲಿ 60 ರಿಂದ 70 ರಾಸುಗಳಿಗೆ ಒಂದು ಬ್ಲಾಕ್‍ನಂತೆ ಪಟ್ಟಿ ಮಾಡಿದ್ದು ಸದರಿ ಪಟ್ಟಿಯನ್ನು ಅಗತ್ಯಾನುಸಾರ ಪರಿಷ್ಕರಿಸಿ ಲಸಿಕಾ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು.20ನೇ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿನ ಎಂಟು ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿರುವ ದನಗಳು, ಎಮ್ಮೆಗಳು ಸೇರಿ ಒಟ್ಟು 6,56,156 ಜಾನುವಾರುಗಳಿರುತ್ತವೆ. ಜಿಲ್ಲೆಯಲ್ಲಿರುವ ಎಲ್ಲಾ ದನ, ಎಮ್ಮೆಗಳಿಗೆ ಕಡ್ಡಾಯವಾಗಿ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗುವುದು. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು, ಅನಾರೋಗ್ಯದಿಂದ ಬಳಲುತ್ತಿರುವ ರಾಸುಗಳು ಮತ್ತು ತುಂಬು ಗರ್ಭಾವಸ್ಥೆಯಲ್ಲಿರುವ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಸುಗಳಿಗೂ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 212 ಪಶುವೈದ್ಯಕೀಯ ಸಂಸ್ಥೆಗಳಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪಶುವೈದ್ಯಾಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಾಧಿಕಾರಿಗಳು, ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು ಹಾಗೂ ತರಬೇತಿ ನೀಡಲಾಗಿರುವ ಡಿ ದರ್ಜೆ ನೌಕರರನ್ನು ಲಸಿಕಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಾದ್ಯಂತ 48 ತಂಡಗಳನ್ನು ರಚಿಸಲಾಗಿದ್ದು, ಪಶುವೈದ್ಯಾಧಿಕಾರಿಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಲಸಿಕಾ ತಂಡಗಳಿಗಾಗಿ ಹಾಸನ ಹಾಲು ಒಕ್ಕೂಟದಿಂದ 43 ವಾಹನಗಳನ್ನು ಒದಗಿಸಲು ಕೋರಲಾಗಿದೆ. ಸದರಿ ವಾಹನಗಳ ಬಾಡಿಗೆಯನ್ನು ಹಾಸನ ಹಾಲು ಒಕ್ಕೂಟವು ಭರಿಸಲಿದೆ. ಲಸಿಕಾ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಕ್ಟೋಬರ್ 2 ರಿಂದ ನವೆಂಬರ್ 15 ರವರೆಗೆ 45 ದಿನಗಳು ಕಾಲ ನಡೆಯಲಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆ, ಸಿರಿಂಜ್‍ಗಳು, ನೀಡಲ್‍ಗಳನ್ನು ಈಗಾಗಲೇ ಸಂಸ್ಥೆಗಳಿಗೆ ಒದಗಿಸಲಾಗಿದೆ. ಲಸಿಕೆ ಶೇಖರಣೆಗಾಗಿ ಜಿಲ್ಲೆಯ ಎಲ್ಲಾ ಸಂಸ್ಥೆಗಳಲ್ಲಿ ರೆಫ್ರಿಜರೇಟರ್ ವ್ಯವಸ್ಥೆ ಇದ್ದು, ಹಾಸನ, ಅರಸೀಕೆರೆ ಮತ್ತು ಹೊಳೆನರಸೀಪುರ ತಾಲ್ಲೂಕು ಕೇಂದ್ರಗಳಲ್ಲಿ ವಾಕ್-ಇನ್-ಕೂಲರ್ ವ್ಯವಸ್ಥೆ ಇರುತ್ತದೆ. ಸರಬರಾಜು ಆದ ಲಸಿಕೆಯನ್ನು ವ್ಯವಸ್ಥಿತವಾಗಿ ಸಂಗ್ರಹಣೆ ಹಾಗೂ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.ಅರಸೀಕೆರೆ, ಹಾಸನ ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿರುವ ವಾಕ್-ಇನ್-ಕೂಲರ್‍ಗಳಿಗೆ ಲಸಿಕೆ ಸರಬರಾಜು ಮಾಡಿ ಅಲ್ಲಿಂದ ಜಿಲ್ಲೆಯ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ ಮರುವಿತರಣೆ ಮಾಡಲಾಗುತ್ತದೆ. ಎಲ್ಲಾ ಸಂಸ್ಥೆಗಳಿಗೆ ಕರಪತ್ರ, ಪೋಸ್ಟರ್, ಬ್ಯಾನರ್‍ಗಳ ಮುಖಾಂತರ ಲಸಿಕಾ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಹಾಸನದ ಆಕಾಶವಾಣಿ ಮೂಲಕ ರೈತ ಬಾಂಧವರಿಗೆ ಮಾಹಿತಿಯನ್ನು ಬಾನುಲಿಯ ಮುಖಾಂತರ ಪ್ರಚಾರ ಮಾಡಲಾಗುವುದು. ಸ್ಥಳೀಯ ಜಿಲ್ಲಾ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಚಾರ ಮಾಡಲಾಗುವುದು, ಜಿಲ್ಲೆಯ ಸ್ಥಳೀಯ ದೂರದರ್ಶನದ ಮೂಲಕವೂ ಪ್ರಚಾರ ಮಾಡಲಾಗುವುದು.ದಿನನಿತ್ಯ ಲಸಿಕಾ ಕಾರ್ಯಕ್ರಮ ನಡೆದ ಬಗ್ಗೆ ಪ್ರಗತಿ ವರದಿಯನ್ನು ತಾಲ್ಲೂಕುಗಳಿಂದ ಪಡೆದು ಕೇಂದ್ರ ಕಛೇರಿಯಿಂದ ಒದಗಿಸಲಾಗುವ ಪೋರ್ಟಲ್‍ನಲ್ಲಿ ಕ್ರೋಢೀಕರಿಸಿ ರಾಜ್ಯ ಮಟ್ಟಕ್ಕೆ ಸಲ್ಲಿಸಲಾಗುವುದು. ಲಸಿಕೆ ಹಾಕಿದಾಗ ಜಾನುವಾರುಗಳಲ್ಲಿ ಅಪರೂಪದ ಸಂದರ್ಭಗಳಲ್ಲಿ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ತುರ್ತು ಚಿಕಿತ್ಸೆ ನೀಡಲು ಪ್ರತಿ ತಂಡವು ಅವಶ್ಯವಿರುವ ತುರ್ತು ಜೀವರಕ್ಷಕ ಔಷಧಿಗಳನ್ನು ಹೊಂದಿರುತ್ತದೆ. ಲಸಿಕಾ ಕಾರ್ಯಕ್ರಮವು ಇದುವರೆವಿಗೆ 16 ಸುತ್ತುಗಳಲ್ಲಿ ನಡೆದಿದ್ದು, ಎಲ್ಲಾ ಸುತ್ತುಗಳಲ್ಲಿಯೂ ಹಾಸನ ಜಿಲ್ಲೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದ್ದು, ಈ ಬಾರಿ ಶೇ. 100 ರಷ್ಟು ಪ್ರಗತಿಯನ್ನು ಸಾಧಿಸಲು ಕ್ರಮವಹಿಸಲಾಗುವುದು.ಲಸಿಕಾ ಕಾರ್ಯಕ್ರಮವು ಯಶಸ್ವಿಯಾಗಿರುವುದರ/ಪರಿಣಾಮಕಾರಿಯಾಗಿರುವುದರ ಬಗ್ಗೆ ಪರಿಶೀಲಿಸಲು ಜಂಟಿ ನಿರ್ದೇಶಕರು,(ರಾಜ್ಯವಲಯ), ಪಶುಪಾಲನಾ ಇಲಾಖೆ, ಮೈಸೂರು ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ. ಬಾಹ್ಯ ಮೂಲ ಪರಿಶೀಲನೆಗಾಗಿ ಪಶುವೈದ್ಯಕೀಯ ಮಹಾವಿದ್ಯಾಲಯದ ಒರ್ವ ತಜ್ಞರನ್ನು ನಿಯೋಜಿಸಲಾಗುತ್ತದೆ. ಜಿಲ್ಲೆಯ ಆಯ್ದ 13 ಹಳ್ಳಿಗಳಲ್ಲಿನ ಹಸು, ಎಮ್ಮೆಗಳ ಸೀರಂ ಮಾದರಿಗಳನ್ನು ಲಸಿಕಾ ಪೂರ್ವ ಮತ್ತು ಲಸಿಕೆ ಹಾಕಿದ 28 ದಿನಗಳ ನಂತರ ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗುವುದು. ಈ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ಲಸಿಕೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿರುವುದರ ಮಾಹಿತಿಯನ್ನು ಪಡೆಯಲಾಗುವುದು.