ಗ್ರಾಮ ಪಂಚಾಯಿತಿ ಚುನಾವಣೆ : ನಾಮಪತ್ರಗಳ ಪರಿಶೀಲನೆ ವೇಳೆ ಎಚ್ಚರವಹಿಸಲು ಸೂಚನೆ

0

ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಇಂದು ಎಲ್ಲಾ ತಹಶಿಲ್ದಾರರು ಹಾಗೂ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಅರಕಲಗೂಡು,ಚನ್ನರಾಯಪಟ್ಟಣ, ಹಾಸನ ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ನಾಮಪತ್ರ ಸಲ್ಲಿಕೆಗೆ ಡಿ.11 ರಂದು ಕಡೆ ದಿನವಾಗಿದೆ.ಡಿ 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅತ್ಯಂತ ಸೂಕ್ಷ್ಮ ವಾಗಿ ಗಮನಿಸಿ ಜವಾಬ್ದಾರಿ ನಿಭಾಯಿಸುವಂತೆ ಅವರು ನಿರ್ದೇಶನ‌ ನೀಡಿದರು.

ನಾಮಪತ್ರಗಳ ಅರ್ಹತೆ ಹಾಗೂ ಲಾಭದಾಯಕ ಹುದ್ದೆಗಳಲ್ಲಿ ಇರುವವರ ಬಗ್ಗೆ ಗಮನಹರಿಸಿ ಎಂದು ಅವರು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸ್ಥಳೀಯ ಗ್ರಾ.ಪಂ ಪಿ.ಡಿ.ಓ ಗಳ ಸಹಾಯ ಪಡೆದು ಹಳ್ಳಿಗಳಲ್ಲಿ ಡಂಗೂರ ಸಾರಿಸಿ .ನಿರ್ಭಿತಿಯಿಂದ ನಾಮಪತ್ರ ಸಲ್ಲಿಸುವ ಬಗ್ಗೆ ,ಚುನಾವಣಾ ಪಾವಿತ್ರ್ಯತೆ ಹಾಗೂ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ ಸ್ಥಾನಗಳನ್ನು ಹರಾಜಿನ ಮೂಲಕ ಆಯ್ಕೆ ಮಾಡುವಂತಿಲ್ಲ .ಯಾರೂ ಕೂಡ ಬೆದರಿಕೆಗೆ ಒಳಗಾಗದಂತೆ ವಿಶ್ವಾಸ ಮೂಡಿಸಿ ಎಂದು ಆರ್ .ಗಿರೀಶ್ ಹೇಳಿದರು.

ಗ್ರಾಮಗಳಲ್ಲಿ ಚುನಾವಣಾ ಅಕ್ರಮ ಅಥವಾ ಬೆದರಿಸುವ ಪ್ರಕರಣಗಳು ಕಂಡುಬಂದಿದ್ದಲ್ಲಿ ಆ ಬಗ್ಗೆ ವಿಡಿಯೋ ಅಥವಾ ಇನ್ನಾವುದಾದರೂ ದಾಖಲೆ ಸಂಗ್ರಹಿಸಿ ಕ್ರಿಮಿನಲ್ ಕೇಸ್ ದಾಖಲಿಸಿ‌ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ವಿಕಲಚೇತನರಿಗೆ ಮತದಾನದ ದಿನದಂದು ಮತದಾನ ಮಾಡಲು ಅಗತ್ಯ ನೆರವು ನೀಡಬೇಕಿದ್ದು,ಇದಕ್ಕೆ ಯಾವ ಯಾವ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ, ವಾಹನ ವ್ಯವಸ್ಥೆ ಬೇಕಿದೆ ಎಂಬುದನ್ನು ಪಟ್ಟಿ ಮಾಡಿ ಅದಕ್ಕೆ ಪೂರಕವಾಗಿ ಕ್ರಮವಹಿಸಿ ಎಂದರು.

ಕೋವಿಡ್ 19 ಸೋಂಕಿತರಿಗೂ ಮತದಾನಕ್ಕೆ ಅವಕಾಶ:
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೋವಿಡ್ ಸೋಂಕಿತರಿಗೆ ಪಿ.ಪಿ ಕಿಟ್ ಧರಿಸಿ ಮತ ಚಲಾಯಿಸಲು ಅವಕಾಶ ಇದೆ .ಕಡೆ ಒಂದು ಗಂಟೆ ಅವಧಿಯಲ್ಲಿ ಬಂದು‌ ಮತ ಹಾಕಬಹುದಾಗಿದೆ.
ಆದರೆ ಅಂತಹವರು‌ ಮೊದಲೆ ನೊಂದಾಯಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಅಂತಿಮ ಅಭ್ಯರ್ಥಿಗಳ ಪಟ್ಟಿ ಯನ್ನು ಸಿದ್ದಪಡಿಸಿ ಸೇವಾ ಮತದಾರರಿಗೆ ನಿಗಧಿತ ಅವಧಿಯೊಳಗೆ ಅಂಚೆ ಮತಪತ್ರಗಳನ್ನು ಒದಗಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಪ್ರತಿ ಗ್ರಾಮಗಳಲ್ಲಿ ವಿಕಲಚೇತನರಿಗೆ ಮತದಾನಕ್ಕೆ ಮಾಡಲಾಗುವ ಸೌಲಭ್ಯಗಳು, ಕೋವಿಡ್ ಸೋಂಕಿತರಿಗೆ ಇರುವ ಮತದಾನದ ಅವಕಾಶಗಳು , ನಾಮಪತ್ರ ಸಲ್ಲಿಕೆ ಸೇರಿದಂತೆ ನಿರ್ಭಿತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಲು ಇರುವ ಅವಕಾಶ ಹಾಗೂ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಿ ಡಂಗೂರ ಸಾರಿಸಿ ಎಂದು ಹೇಳಿದರು‌.

ಸೇವಾ ಮತದಾರರಿಗೆ ಮತದಾನಕ್ಕೆ ಅವಕಾಶ,ಮತ ಪತ್ರಗಳ ಮುದ್ರಣ, ಮತಗಟ್ಟೆಗಳಲ್ಲಿ ಸೌಲಭ್ಯ ವ್ಯವಸ್ಥೆ ,ನಾಮಪತ್ರ ಪರಿಶೀಲನೆ ವೇಳೆ ಅನುಸರಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಅವರು ವಿವರಿಸಿದರು.

ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಎಲ್ಲಾ ತಹಶಿಲ್ದಾರರ ಹಾಗೂ ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here