ಚೆನ್ನಮ್ಮನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುದು ಅವಶ್ಯಕ: ಆರ್. ಗಿರೀಶ್

0

ಬ್ರಿಟೀಷರ ವಿರುದ್ಧ ಧ್ವನಿ ಎತ್ತುವ ಮೂಲಕ ಸ್ವಾಭಿಮಾನದ ಪ್ರತೀಕವಾಗಿರುವ ಕಿತ್ತೂರಿನ ವೀರ ಮಹಿಳೆ ರಾಣಿ ಚನ್ನಮ್ಮನ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದು ಅತ್ಯಾವಶ್ಯಕ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇಂದಿನ ಪೀಳಿಗೆಯಲ್ಲಿ ದೇಶಾಭಿಮಾನ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅನೇಕ ದೇಶಭಕ್ತರ ಆದರ್ಶಗಳನ್ನು ಅವರಿಗೆ ತಿಳಿಸುವುದು ಅಗತ್ಯವಾಗಿದೆ ಎಂದರು.

ರಾಣಿ ಚೆನ್ನಮ್ಮ ಸಮಾಜದಲ್ಲಿ ಮಹಿಳೆಯರೂ ಕೂಡ ಪುರುಷರಿಗೆ ಸರಿಸಮಾನ ಎಂಬ ಸಂದೇಶವನ್ನು ಸಾರಿ ಅದನ್ನು ಸಾಧಿಸಿ ತೋರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಜಯಂತಿಗಳು ಮಹಾಪುರುಷರ ಸಾಧನೆಗಳು ಹಾಗೂ ಅವರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆಗಳ ನೆನಪುಗಳನ್ನು ಮರುಕಳಿಸುವುದಕ್ಕಾಗಿ ಆಚರಿಸಲಾಗುತ್ತದೆ. ಅವರ ಆದರ್ಶಗಳನ್ನು ಯುವಪೀಳಿಗೆ ಮರೆಯದೆ ತಮ್ನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಕೇವಲ 15 ವರ್ಷ ವಯಸ್ಸಿಗೇ ಮದುವೆಯಾಗಿ ಗಂಡ ಹಾಗೂ ಮಗುವನ್ನು ಕಳೆದುಕೊಂಡು, ದತ್ತು ಮಗುವನ್ನು ಪಡೆದು ರಾಜ್ಯದ ಆಳ್ವಿಕೆ ನಡೆಸಿ, ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರೂ, ಧೈರ್ಯಗೆಡದೆ ಅವರ ವಿರುದ್ಧ ಹೋರಾಡಿ ಜಯಗಳಿಸಿ, ಎರಡನೇ ಬಾರಿಗೆ ತನ್ನವರ ಕುತಂತ್ರದಿಂದ ಬಲಿಯಾದ ಚೆನ್ನಮ್ಮನ ಕೀರ್ತಿ ಅಪಾರ. ಹಾಗಾಗಿಯೇ ಇಂದಿಗೂ ಸಹ ಪಠ್ಯಪುಸ್ತಕಗಳಲ್ಲಿ ಅವರ ಇತಿಹಾಸವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ ಎಂದರು.

ವೀರಶೈವ ಲಿಂಗಾಯತ ಸಮುದಾಯದ ಪ್ರಧಾನ ಕಾರ್ಯದರ್ಶಿ ಭುವನಾಕ್ಷ ಅವರು ಮಾತನಾಡಿ ಬ್ರಿಟೀಷರು ನಮ್ಮನ್ನು ದಾಸ್ಯದಲ್ಲಿಟ್ಟಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಧ್ವನಿ ಎತ್ತುವ ಸಾಹಸ ಮಾಡಿದ ಕೀರ್ತಿ ರಾಣಿ ಚೆನ್ನಮ್ಮನಿಗೆ ಸಲ್ಲುತ್ತದೆ. ಹಾಗಾಗಿ ಮುಂದಿನ ಪೀಳಿಗೆಗೆ ರಾಣಿ ಚನ್ನಮ್ಮನ ಆದರ್ಶಗಳು ದಾರಿದೀಪವಾಗಬೇಕು ಎಂದರು.

ಸಮಾಜ ಮುಖಂಡರಾದ ಬಸವರಾಜು ಅವರು ಮಾತನಾಡಿ ರಾಣಿ ಚೆನ್ನಮ್ಮನ ತ್ಯಾಗ ಅಪಾರ. ಸಲ್ಲದ ತೆರಿಗೆಯನ್ನು ವಿಧಿಸಿ ಭಾರತೀಯರನ್ನು ದಾಸ್ಯಕ್ಕೆ ಎಳೆಯುತ್ತಿದ್ದ ಬ್ರಿಟೀಷರ ವಿರುದ್ಧ ಹೋರಾಡಿ ಮಡಿದು, ಸ್ವಾಭಿಮಾನಕ್ಕೆ ಪ್ರತೀಕವಾದ ವೀರ ಮಹಿಳೆ. ಅವರ ಆದರ್ಶಗಳಿಂದಲೇ ಇಂದು ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಂ ಶಿವಣ್ಣ ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here