ಟೆಲಿಕಾಂ ಸಂಪರ್ಕ ವ್ಯವಸ್ಥೆಗೆ ತೊಂದರೆಯಾಗದಂತೆ ಕ್ರಮವಹಿಸಿ: ಆರ್. ಗಿರೀಶ್

0

ಹಾಸನ ಜಿಲ್ಲೆಯಲ್ಲಿನ ಟೆಲಿಕಾಂ ಸಂಪರ್ಕ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಟೆಲಿಕಾಂ ಸಮಿತಿಗಳ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಿವಿಧ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ಪಿ.ಡಬ್ಲ್ಯೂ.ಡಿ ಕಾಮಗಾರಿ, ಎತ್ತಿನಹೊಳೆ ಕಾಮಗಾರಿ ಹಾಗೂ ಮತ್ತಿತರ ಕಾಮಗಾರಿಗಳ ಕೆಲಸ ನಡೆಯುತ್ತಿದ್ದು, ಟೆಲಿಕಾಂ ಸಂಪರ್ಕ ವ್ಯವಸ್ಥೆಗಳಿಗೆ ಅಡಚಣೆಯಾಗದಂತೆ, ಎರಡು ಸಂಸ್ಥೆಗಳು ಚರ್ಚಿಸಿ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಅವರು ತಿಳಿಸಿದರು.

ರಸ್ತೆ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಟೆಲಿಕಾಂ ಸಂಪರ್ಕ ವ್ಯವಸ್ಥೆಗೆ ಸಹಾಯಕವಾಗುವಂತೆ ಚೇಂಬರ್‍ಗಳ ವ್ಯವಸ್ಥೆ ಮಾಡುವಂತೆ ಹಾಗೂ ಟೆಲಿಕಾಂ ಟವರ್‍ಗಳಿಗೆ ಸಮರ್ಪಕ ವಿದ್ಯತ್ ವ್ಯವಸ್ಥೆ ಕಲ್ಪಿಸುವಂತೆ ಅವರು ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳಿಗೆ ಸೂಚಿಸಿದರು.

ಟೆಲಿಕಾಂ ಟವರ್‍ಗಳಿಗೆ ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಸೇವೆ ನೀಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ಕಟ್ಟಾಯ ಅರಣ್ಯ ಭಾಗದ ರಸ್ತೆ ಕಾಮಗಾರಿಯಲ್ಲಿ ಬಿ.ಎಸ್.ಎನ್.ಎಲ್ ನೆಟ್‍ವರ್ಕ್ ಲೈನ್‍ಗಳಿಗೆ ತೊಂದರೆಯಾಗಿದ್ದು, ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ತಿಳಿಸಿದರು.

ಬಿ.ಎಸ್.ಎನ್.ಎಲ್. ಸಂಸ್ಥೆಯ ಅಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳಿಂದ ನೆಟ್‍ವರ್ಕ್ ಲೈನ್‍ಗಳಿಗೆ ಹಾನಿಯಾಗಿದ್ದು, ಕಾಮಗಾರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಸಿ. ಚಂದ್ರಶೇಖರ್, ನಗರಸಭೆ ಪೌರಾಯುಕ್ತರು, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಹಾಗೂ ಟೆಲಿಕಾಂ ಸಮಿತಿಗಳ ಅಧಿಕಾರಿಗಳು ಹಾಜರಿದ್ದರು.
*

LEAVE A REPLY

Please enter your comment!
Please enter your name here