ಮೊದಲ ಹಂತದ ಗ್ರಾ.ಪಂ ಚುನಾವಣೆಯಲ್ಲಿ 5640 ನಾಮಪತ್ರಗಳು ಸಲ್ಲಿಕೆ

0

ಹಾಸನ : ಮೊದಲನೇ ಹಂತದಲ್ಲಿ ಚುನಾವಣೆ ನಡೆಯುವ ಹಾಸನ, ಅರಕಲಗೂಡು, ಚನ್ನರಾಯಪಟ್ಟಣ ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ 1677 ಸದಸ್ಯ ಸ್ಥಾನಗಳಿಗೆ ಒಟ್ಟು 5640 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ .

ಗ್ರಾಮ ಪಂಚಾಯತ್ ಚುನಾಚಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ವತಿಯಿಂದ ಸ್ಥಳೀಯರ ಮನವೊಲಿಕೆ ಹಾಗೂ ಅರಿವು ಮಾಡಿಸುವ ಪ್ರಕ್ರಿಯೆ ನಡೆಸಿದರೂ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಹೊಂಗಡಹಳ್ಳಿ ಹಾಗೂ ಹೆಗ್ಗದ್ದೆ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 26 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308 ರನ್ವಯ ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ 267 ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಕ್ತಾಯವಾಗದ 12 ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಪೂರ್ಣ ಹಾಗೂ ಭಾಗಶಃ ಪ್ರಮಾಣದಲ್ಲಿ ಸೇರ್ಪಡೆಗೊಂಡಿರುವ 10 ಗ್ರಾಮ ಪಂಚಾಯಿತಿಗಳಿರುವುದರಿಂದ ಒಟ್ಟಾರೆ 22 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ 245 ಗ್ರಾಮ ಪಂಚಾಯಿತಿಗಳ ಒಟ್ಟು 3352 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆಯನ್ನು ಘೋಷಿಸಿದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಅರಸೀಕೆರೆ, ಬೇಲೂರು, ಆಲೂರು ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಡಿ. 11ರಿಂದ ನಾಮಪತ್ರಗಳನ್ನು ಸ್ವೀಕರಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದೆ
ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಶ್ರೀಮತಿ ಶಾಂತಲಾ ಕೆ.ಟಿ, ಜಂಟಿ ನಿರ್ದೇಶಕರು, ರೇಷ್ಮೆ ಇಲಾಖೆ, ಬೆಂಗಳೂರು ರವರನ್ನು ರಾಜ್ಯ ಚುನಾವಣಾ ಆಯೋಗವು ನೇಮಕ ಮಾಡಿದ್ದು, ವೀಕ್ಷಕರು ವರದಿ ಜಿಲ್ಲೆಯಲ್ಲಿ ಮಾಡಿರುತ್ತಾರೆ ಎಂದರು.
ಡಿ. 22 ರಂದು ಮೊದಲನೇ ಹಂತದ ಹಾಸನ, ಅರಕಲಗೂಡು, ಚನ್ನರಾಯಪಟ್ಟಣ ಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಒಟ್ಟು 1021 ಮತಗಟ್ಟೆಗಳಲ್ಲಿ ಹಾಗೂ ಡಿ. 27 ರಂದು ಎರಡನೇ ಹಂತದ ಅರಸೀಕೆರೆ, ಬೇಲೂರು, ಆಲೂರು ಮತ್ತು ಹೊಳೆನರಸೀಪುರ ತಾಲ್ಲೂಕಿನಲ್ಲಿ ಒಟ್ಟು 982 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು ನಡೆಯಲಿದ್ದು, ಆಯಾ ತಾಲ್ಲೂಕುಗಳಿಗೆ ಅಂದಾಜು 8813 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲು ನೇಮಕ ಮಾಡಲು ಸಿದ್ಧಪಡಿಸಲಾದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ವಿಕಲಾಂಗ ಚೇತನ ಮತದಾರರನ್ನು ಮತದಾನ ಕೇಂದ್ರಕ್ಕೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾರರಿಗೆ ಮತದಾನ ಮಾಡಲು ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಲಾಗಿರುತ್ತದೆ. ಪ್ರಸ್ತುತ ಕೋವಿಡ್-19 ಸೋಂಕಿನ ಕಾರಣದಿಂದ ಮುಂಜಾಗ್ರತಾ ಕ್ರಮವಹಿಸಿ, ಕೋವಿಡ್ ಸೋಂಕಿತರನ್ನು ಗುರುತಿಸಿ, ಸೋಂಕಿತರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಡೆಯ ಒಂದು ಗಂಟೆ ಅವಕಾಶ ನೀಡಲಾಗಿರುತ್ತದೆ. ಕೋವಿಡ್-19 ಸೋಂಕಿತ ಮತದಾರರನ್ನು ಗುರುತಿಸಿ, ಮತದಾನ ಕೇಂದ್ರಕ್ಕೆ ಕರೆತರಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿರುತ್ತದೆ. ಕೋವಿಡ್ ಸೋಂಕಿತರು ಹಾಗೂ ವಿಕಲಾಂಗ ಚೇತನ ಮತದಾರರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಚುನಾವಣಾಧಿಕಾರಿಗಳ ಬಳಿ ನೋಂದಾಯಿಸಿಕೊಳ್ಳತಕ್ಕದ್ದು ಎಂದು ಸೂಚಿಸಿದರು.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸಬೇಕಾದ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ, ಮಹಿಳಾ ಮೀಸಲಾತಿ, ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು, ಪ್ರಮುಖವಾಗಿ ಕೋವಿಡ್-19 ಸೋಂಕಿನ ಕಾರಣದಿಂದ ಮುಂಜಾಗ್ರತಾ ಕ್ರಮವಹಿಸಿ ಮತದಾನ ಮಾಡುವುದು. ಕೋವಿಡ್ ಸೋಂಕಿತರಿಗೂ ಸಹ ಮತದಾನ ಮಾಡಲು ಅವಕಾಶ ಕಲ್ಪಿಸಿರುವ ಬಗ್ಗೆ ಅಭ್ಯರ್ಥಿಗಳು ಹಾಗೂ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ಕಾಗಿ ರೇಡಿಯೋ, ದೂರದರ್ಶನ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಜಾಹಿರಾತುಗಳ ಮೂಲಕ ಅಲ್ಲದೆ ಗ್ರಾಮಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸುವುದರ ಮೂಲಕ, ಬೀದಿ ನಾಟಕಗಳನ್ನು ಏರ್ಪಡಿಸುವ ಮೂಲಕ ಅಭ್ಯರ್ಥಿಗಳಲ್ಲಿ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗಳನ್ನು ಆಯೋಜಿಸುವಂತೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ. ಸಾರ್ವಜನಿಕರಿಲ್ಲಿ ಅರಿವು ಮೂಡಿಸಲು ಜಿಲ್ಲೆಯಲ್ಲಿ ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದರು.
ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ನಿರ್ಭಿತಿಯಿಂದ ಮತ ಚಲಾಯಿಸಲು, ಚುನಾವಣೆಗೆ ಸ್ಪರ್ಧಿಸುವ ವಿದ್ಯಾರ್ಹತೆ, ಮಹಿಳೆಯರಿಗೆ ಶೇಕಡ 50% ಮೀಸಲಾತಿ ಹಾಗೂ ಸಾಮಾನ್ಯ ಮಾಹಿತಿಗಳನ್ನು ಒಳಗೊಂಡಂತೆ, ಮತದಾರರಿಗೆ/ಚುನಾವಣೆಗೆ ಸ್ಪರ್ಧಿಸುವವರಿಗೆ ಅರಿವು ಮೂಡಿಸಲು ಹಲವು ಭಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಪ್ರಕಟಣೆಗಾಗಿ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರಚಾರ ಕಾರ್ಯವನ್ನು ನಿರ್ವಹಿಸಲಾಗುತ್ತಿರುತ್ತದೆ ಎಂದು ಹೇಳಿದರು.
ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಮತದಾರರ ಎಡಗೈ ಹೆಬ್ಬರಳಿಗೆ ಹಾಕಲಾಗುವುದು. ಮತದಾರರು ಮತ ಚಲಾಯಿಸಲು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಅದರ ಬದಲು ಪರ್ಯಾಯ 22 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಬಹುದಾಗಿರುತ್ತದೆ. ಪರ್ಯಾಯ ದಾಖಲೆಗಳ ಪಟ್ಟಿ ಲಗತ್ತಿಸಿದೆ ಎಂದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನಂತೆ ಡಿ. 13ರಂದು ಕೊನೆಯ ವಿಶೇಷ ಆಂದೋಲನಾ – “ಮಿಂಚಿನ ನೋಂದಣಿ” ದಿನವಾಗಿರುತ್ತದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಅರ್ಹರಿರುವ ಅಂದರೆ ಜ.1 ಕ್ಕೆ 18 ವರ್ಷ ಪೂರ್ಣಗೊಳ್ಳುವ ಮತದಾರರು ನೋಂದಾಯಿಸಿಕೊಂಡು ಅಂದು ತಮ್ಮ ಮತಗಟ್ಟೆಗೆ ಭೇಟಿ ನೀಡಿ ಮತಗಟ್ಟೆ ಹಂತದ ಅಧಿಕಾರಿಗಳ ಸಹಾಯದೊಂದಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದು ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಇದೇ ವೇಳೆ ಕೊರೋನಾ ವೈರಸ್ ಸೋಂಕಿನ ಕಾರಣ ಆರೊಗ್ಯ ಸಮಸ್ಯೆ ಎದುರಿಸುತ್ತಿರುವ ದೇಶದ ನಾಗರೀಕರಿಗೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲವಾದುರಿಂದ, ರಕ್ತದ ಒತ್ತಡ, ಡಯಬಿಟೀಸ್ ಸೇರಿದಂತೆ ಹಲವು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಹಲವರು ಪ್ರತಿ ತಿಂಗಳು ವೈದ್ಯರ ತಪಾಸಣೆ ಬಳಿಕ ಔಷಧಿ ಖರೀದಿ ಮಾಡುವ ಅನಿವಾರ್ಯತೆ ಇದೆ, ಆದರೆ ಕೊರೋನಾ ವೈರಸ್ ಸೋಂಕಿನ ಕಾರಣದಿಂದಾಗಿ ರೋಗಿಗಳು ಆಸ್ಪತ್ರೆಗೆ ಹೋಗುವುದು ಕಷ್ಟವಾಗಿದೆ. ಈ ಸಮಸ್ಯಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಇ-ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಹಾಗೂ ಪತ್ರಿಕಾ ಮತ್ತು ಮಾದ್ಯಮ ದವರು ಹಾಜರಿದ್ದರು.

LEAVE A REPLY

Please enter your comment!
Please enter your name here