ಶ್ರಮವಿಲ್ಲದೆ ಬಂದಿದ್ದ 16 ಲಕ್ಷ ರೂಪಾಯಿಗಾಗಿ ಹೈಟೆಕ್ ಸಿನಿಮಾ ಕಥೆ ಸೃಷ್ಟಿಸಿದ ಭೂಪ

0

ಬೇಲೂರು: ಯಾವುದೇ ಶ್ರಮವಿಲ್ಲದೆ ಕೈ ಸೇರಿದ್ದ 16 ಲಕ್ಷ ರೂ. ಜೇಬಿಗಿಳಿಸಿಕೊಳ್ಳಲು ಹೈಟೆಕ್ ಸಿನಿಮಾ ಕಥೆ ಸೃಷ್ಟಿಸಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಅರೇಹಳ್ಳಿ ನಿವಾಸಿ ಮಹಮದ್ ತಾರಿಕ್ (38) ಬಂಧಿತ ಆರೋಪಿ. ಸಕಲೇಶಪುರ ತಾಲೂಕು ಬಾಳೆಗದ್ದೆ ನಿವಾಸಿ ದಿನೇಶ್ ಎಂಬುವರಿಗೆ ಸೇರಿದ್ದ 16.80 ಲಕ್ಷ ರೂ. ಲಪಟಾಯಿಸಲು ಮಹಮದ್ ವ್ಯವಸ್ಥಿತ ಯೋಜನೆ ರೂಪಿಸಿದ್ದ. ತಾನೇ ಸೃಷ್ಟಿಸಿದ ಕಥೆಯಲ್ಲಿ ಸಿಲುಕಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಡಿ. 2 ರಂದು ದಿನೇಶ್ ಅವರನ್ನು ಭೇಟಿಯಾಗಿದ್ದ ಮಹಮದ್ ತಾರಿಕ್ ಕಾಳು ಮೆಣಸನ್ನು ಮಾರಾಟ ಮಾಡಿಕೊಡುತ್ತೇನೆಂದು ಹೇಳಿದ್ದನು. ಆತನ ಮಾತು ನಂಬಿ ದಿನೇಶ್ ಕಾಳು ಮೆಣಸನ್ನು ಕೊಟ್ಟಿದ್ದರು. ಚಿಕ್ಕಮಗಳೂರಿನಲ್ಲಿ ಮೆಣಸು ಮಾರಾಟ ಮಾಡಿದ್ದ ಆತ ವಾಪಸ್ ಬರುವಾಗ ರಾತ್ರಿ ವೇಳೆ ತಾಲೂಕಿನ ಫಾತೀಮಾಪುರದ ಬಳಿ ಕಾರು ಅಪಘಾತವಾಗಿದ್ದು ಅಪರಿಚಿತರು ಬಂದು ಹಣ ತೆಗೆದುಕೊಂಡು ಹೋಗಿದ್ದಾರೆ. ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರವಾಣಿ ಮೂಲಕ ದಿನೇಶ್ ಅವರನ್ನು ಸಂಪರ್ಕಿಸಿ ಹೇಳಿದ್ದನು.

ಇದರಿಂದ ಆತಂಕಗೊಂಡ ದಿನೇಶ್ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಹಮದ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ದುಡ್ಡು ಲಪಟಾಯಿಸುವುದಕ್ಕಾಗಿ ಸುಳ್ಳು ಕಥೆ ಸೃಷ್ಟಿಸಿದ್ದೇನೆಂದು ಬಾಯ್ದಿಟ್ಟಿದ್ದಾನೆ. ಆತನಿಂದ ಹಣ ಪಡೆದಿರುವ ಪೊಲೀಸರು ದಿನೇಶ್‌ಗೆ ತಲುಪಿಸಿದ್ದಾರೆ. ಕಾಫಿ, ಮೆಣಸು ಮಾರಾಟ ಮಾಡಿಕೊಡುವುದಾಗಿ ಯಾರಾದರೂ ಬಂದರೆ ಮೋಸ ಹೋಗಬಾರದು ಎಂದು ಬೇಲೂರು ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್‌ ಹಾಗೂ ಅರೇಹಳ್ಳಿ ಠಾಣೆ ಪಿಎಸ್‌ಐ ಮಹೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅರೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here