Aero India 2021

0

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

* ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದಲ್ಲಿ ಆತ್ಮನಿರ್ಭರ ಭಾರತ ಪರಿಕಲ್ಪನೆ ಅನಾವರಣ

* ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ ಕಲರವ ನಡೆಯಲಿದ್ದು, ಯಲಹಂಕ ವಾಯುನೆಲೆ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಏಷ್ಯಾದ ಅತಿದೊಡ್ಡ ಪ್ರದರ್ಶನವಾಗಿರುವ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಈಗಾಗಲೇ‌ ಅಧಿಕೃತ ಚಾಲನೆ ನೀಡಿದ್ದು, ‘ಆತ್ಮ ನಿರ್ಭರ ಭಾರತ’ ಮತ್ತು ‘ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳು, ಯುದ್ಧ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಅಬ್ಬರಿಸುತ್ತಿವೆ. ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಡಿವಿ ಸದಾನಂದಗೌಡ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್‌ ರಾವತ್‌ ಹಾಗೂ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಫೆಬ್ರವರಿ 5ರವರೆಗೆ ನಡೆಯಲಿರುವ ಪ್ರತಿಷ್ಠಿತ ಏರೋ ಇಂಡಿಯಾದಲ್ಲಿ 78 ವಿದೇಶಿ ಕಂಪನಿಗಳು ಸೇರಿ 600ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ.

* ವಿವಿಧ 29 ದೇಶಗಳ ಪ್ರತಿನಿಧಿಗಳು ಏರೋ ಇಂಡಿಯಾದಲ್ಲಿ ಭಾಗಿ.

* ಸೂರ್ಯ ಕಿರಣ್ ಯುದ್ಧ ವಿಮಾನ ಹಾಗೂ ಯುದ್ಧ ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನ.

* ಬಾನಂಗಳದಲ್ಲಿ ದೇಶಿ ನಿರ್ಮಿತ ತೇಜಸ್ ಅಬ್ಬರ.

* ರಫೇಲ್ ಗೋಲ್ಡನ್ ಆರೋ ಬ್ರಹ್ಮಾಸ್ತ್ರ ಫಾರ್ಮೇಶನ್ ತಂಡದಿಂದ ವೈಮಾನಿಕ ಪ್ರದರ್ಶನ.

‘ಯಾವುದೇ ಬಾಹ್ಯ ದಾಳಿಗಳನ್ನು ಎದುರಿಸಲು ಭಾರತ ಸಿದ್ಧʼ

ಭಾರತದ ರಕ್ಷಣಾ ಕ್ಷೇತ್ರವನ್ನು ಅತ್ಯಂತ ಸದೃಢ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ದೇಶೀಯ ರಕ್ಷಣಾ ಉದ್ದಿಮೆಗಳಿಗೆ ಬಲ ತುಂಬಿ ಈ ಗುರಿ ತಲುಪುವುದು ನಮ್ಮ ಉದ್ದೇಶ ಎಂದರು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಯಾವುದೇ ಬಾಹ್ಯ ದಾಳಿಗಳನ್ನು ಎದುರಿಸಲು ಭಾರತ ಸಿದ್ಧವಾಗಿದ್ದು, ನಮ್ಮ ರಕ್ಷಣಾ ಪಡೆಗಳ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.

‘ರಕ್ಷಣಾ ಕ್ಷೇತ್ರದ ಆಧುನೀಕರಣಕ್ಕೆ 30 ಮಿಲಿಯನ್‌ ಯುಎಸ್‌ ಡಾಲರ್‌’

ಆತ್ಮ ನಿರ್ಭರ ಭಾರತ ಅಭಿಯಾನ ಅಡಿಯಲ್ಲಿ ದೇಶದ ರಕ್ಷಣಾ ಕ್ಷೇತ್ರವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದಕ್ಕಾಗಿ 30 ಮಿಲಿಯನ್ ಅಮೆರಿಕನ್ ಡಾಲರ್ ಹಣ ಮೀಸಲಿರಿಸಲಾಗಿದೆ. ಜಾಗತಿಕ ರಕ್ಷಣಾ ಪಾಲುದಾರಿಕೆಯಲ್ಲಿ ಭಾರತದ ಇರುವಿಕೆಯನ್ನು ವಿಶ್ವ ಗಮನಿಸುತ್ತಿದ್ದು, ರಕ್ಷಣಾ ಸಹಭಾಗಿತ್ವಕ್ಕೆ ಉತ್ಸುಕವಾಗಿವೆ. ಭಾರತ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿದ್ದು, ಜಾಗತಿಕ ರಕ್ಷಣಾ ಸಹಭಾಗಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಬಸವಣ್ಣ, ಸರ್‌ಎಂವಿ ನೆನೆದ ರಾಜನಾಥ್‌ ಸಿಂಗ್‌

ಏರೋ ಇಂಡಿಯಾ ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಬಸವಣ್ಣ ಹಾಗೂ ಸರ್‌ಎಂ ವಿಶ್ವೇಶ್ವರಯ್ಯ ಅವರನ್ನು ನೆನೆದರು. ಅದಲ್ಲದೇ ಏರೋ ಇಂಡಿಯಾಗೆ ಕರ್ನಾಟಕ‌ ಸರ್ಕಾರದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ರಾಜನಾಥ್ ಸಿಂಗ್, ಏಷ್ಯಾದ ಅತ್ಯಂತ ದೊಡ್ಡ ಏರೋ ಶೋ ಹಮ್ಮಿಕೊಳ್ಳುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ ಎಂದರು.

ಏರೋ ಇಂಡಿಯಾ ಕರ್ನಾಟಕದ ಹೆಮ್ಮೆ- ಬಿಎಸ್‌ವೈ

ಏರೋ ಇಂಡಿಯಾ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆಯುತ್ತಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಕೊರೊನಾ ಹಾವಳಿ ನಡುವೆ ಏರೋ ಇಂಡಿಯಾ ನಡೆಯುತ್ತಿದ್ದು, ರಾಜ್ಯ ಸರ್ಕಾರದ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ವಿಧ್ಯುಕ್ತ ಚಾಲನೆ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಏರೋ ಇಂಡಿಯಾಗೆ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್‌ ರಾವತ್‌, ಭೂಸೇನೆ, ವಾಯುಸೇನೆ, ನೌಕಾಸೇನೆ ಮುಖ್ಯಸ್ಥರು ಉಪಸ್ಥಿತರಿದ್ದರು.

ವಾಯುಸೇನೆಗೆ ಎಲ್‌ಸಿಎ ಸೇರ್ಪಡೆ

ವಾಯುಸೇನೆಗೆ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್ಎಎಲ್) ನಿರ್ಮಿತ ಲಘು ಯುದ್ಧ ವಿಮಾನ (ಎಲ್ಸಿ‌ಎ) ಅಧಿಕೃತ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಯುಸೇನೆಗೆ ಎಲ್‌ಸಿಎಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದರು.

LEAVE A REPLY

Please enter your comment!
Please enter your name here