ದನ‌ ಕಾಯುವವನು IAS ಮಾಡುತ್ತಾನೆ ಎಂಬ ಸಾಲಿನ ಹಿಂದಿನ ಅರ್ಥ ತಿಳಿಯದೆ ಹೇಳಿಕೆಯನ್ನು ನೆಗೆಟಿವ್ ಆಗಿ ತೆಗೆದುಕೊಂಡರು ಎ ಮಂಜು ಮಾಜಿ ಸಚಿವ ಸ್ಪಷ್ಟನೆ

0

ಮೈಸೂರು ರೋಹಿಣಿ ಸಿಂದೂರಿ ವಿಷಯವಾಗಿ ಕಳೆದವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎ ಮಂಜು ಈ ಕೆಳಗಿನಂತೆ ಸ್ಪಷ್ಟನೆ ಕೊಟ್ಟು ತಮ್ಮ ಖಾತೆಯಲ್ಲಿ ತಿಳಿಸಿದ್ದಾರೆ

” ಸಾರ್ವಜನಿಕರ ಗಮನಕ್ಕೆ…..

ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟಂತಹ ನನ್ನ ಹೇಳಿಕೆಯಲ್ಲಿನ ವಿಚಾರದ ಮೂಲ ಉದ್ದೇಶದ ಕುರಿತು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ.

‘ದನ‌ ಕಾಯುವವನು IAS ಮಾಡುತ್ತಾನೆ’ ಎಂಬ ಸಾಲಿನ ಹಿಂದಿನ ಅರ್ಥ ತಿಳಿಯದೆ ನನ್ನ ಹೇಳಿಕೆಯನ್ನು ನೆಗೆಟಿವ್ ಆಗಿ ತೆಗೆದುಕೊಂಡು ಹಲವಾರು ಜನರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರಿಗೆ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ.

ದನ ಕಾಯುವ ಕಾಯಕವು ಅತ್ಯಂತ ಸರ್ವ ಶ್ರೇಷ್ಠವಾದ ಕಾಯಕವಾಗಿದೆ. ದನ ಕಾಯುವ ಕೆಲಸ ಮಾಡುವವರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಹೆಮ್ಮೆ ಇದೆಯೇ ಹೊರತು ಅವರ ಬಗ್ಗೆ ಹಗುರವಾದ ಮಾತುಗಳನ್ನು ಆಡುವಷ್ಟು ಮೂರ್ಖತನ ನನ್ನಲಿಲ್ಲ.

ಸ್ವತಃ ನಾವುಗಳೇ ಬಾಲ್ಯದಲ್ಲಿ ದನ ಕಾಯುತ್ತಿದ್ದವರು. ನಮ್ಮ ಅಪ್ಪ ದನ ಕಾಯುವ ರೈತನೇ ಆಗಿದ್ದ. ಅಂತಹವನ ಮಗನಾಗಿ ನಾನು ಇಂದು ಸಾರ್ವಜನಿಕ ಕ್ಷೇತ್ರದಲ್ಲಿದ್ದುಕೊಂಡು ಮಂತ್ರಿಯಾಗಿ ಸೇವೆ ಸಲ್ಲಿಸುವ ಮಟ್ಟಿಗೆ ಬೆಳೆದಿದ್ದೇನೆ.

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು ‘ಓರ್ವ ದನ ಕಾಯುವ’ ಕಾಯಕ ಮಾಡುವವನಿಗೂ IAS ಮಾಡಿಕೊಳ್ಳುವಂತಹ ಸ್ವಾತಂತ್ರ್ಯ ಕೊಟ್ಟಿದೆ. ಹಾಗೆ ನೋಡಿದರೆ ಅವರಲ್ಲಿರುವ ಕಾಯಕ ನಿಷ್ಠೆ, ತಾಳ್ಮೆ, ಗೌರವ, ಸಾಮಾನ್ಯ ತಿಳುವಳಿಕೆ ನಿಜಕ್ಕೂ ಹೆಮ್ಮೆ ಪಡುವಂತಹದ್ದಾಗಿದೆ‌. ಅವರಲ್ಲಿರುವ ಈ ವಿವೇಕ, ತಾಳ್ಮೆ, ತಿಳುವಳಿಕೆ ಇಂದಿನ ಕೆಲವು ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿರುವ ಹೇಳಿಕೆಯನ್ನು ಬೇರೆಯದೇ ರೂಪ ಕೊಡುವ ಅರ್ಥದಲ್ಲಿ ಬಳಕೆ ಮಾಡಲಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ‌.

ನನ್ನ ಇದುವರೆಗಿನ ಹೋರಾಟದ ಜೀವನದಲ್ಲಿ ಎಂದೂ ದ್ವೇಷದ ರಾಜಕಾರಣ ಮಾಡಿದವನಲ್ಲ. ಯಾವ ಅಧಿಕಾರಿಗಳ ಬಗ್ಗೆಯೂ ಹಗುರವಾದ ಮಾತುಗಳನ್ನು ಆಡಿದವನಲ್ಲ. ಇಂದಿಗೂ ಬಹಳಷ್ಟು ಅಧಿಕಾರಿಗಳ ಜೊತೆಗೆ ಒಡನಾಟ ಹೊಂದಿರುವ ನಾನು ಅವರ ಕಾರ್ಯ ಕ್ಷಮತೆಯ ಬಗ್ಗೆ ಗೌರವಿಸುತ್ತಾ ಬಂದಿದ್ದೇನೆ. ಇತ್ತೀಚಿಗೆ ನಡೆದ ಮೈಸೂರು ಜಿಲ್ಲೆಯಲ್ಲಿನ ಬೆಳವಣಿಗೆ ಆಧರಿಸಿ ಮಾತ್ರವೇ ಹೇಳಿಕೆ ಕೊಟ್ಟಿದ್ದೇ ಹೊರತು ಮತ್ತಿನ್ನಾವುದೇ ದುರುದ್ದೇಶವನ್ನು ಇಟ್ಟುಕೊಂಡು ಮಾತನಾಡಿರುವುದಿಲ್ಲ.

ಆಡು ಭಾಷೆಯ ಶೈಲಿಯಲ್ಲಿ ಕೊಟ್ಟಂತಹ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಈ ಮೂಲಕ ತಮಗೆ ತಿಳಿಸುತ್ತಿದ್ದೇನೆ ” .

– ಎ. ಮಂಜು
ಮಾಜಿ ಸಚಿವ, ಕರ್ನಾಟಕ ಸರ್ಕಾರ

ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ

LEAVE A REPLY

Please enter your comment!
Please enter your name here