ಅನರ್ಹರು ಬಿ.ಪಿ.ಎಲ್ ಕಾರ್ಡ್ ಹಿಂದಿರುಗಿಸುವಂತೆ ಸೂಚನೆ

0

ಹಾಸನ : ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ (ಬಿ.ಪಿ.ಎಲ್) ಹಿಂದಿರುಗಿಸುವಂತೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಈ ನಾಲ್ಕು ವರ್ಗಗಳಿಗೆ ಸೇರುವ ಕುಟುಂಬಗಳು ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಪಡೆಯಲು(ಬಿ.ಪಿ.ಎಲ್) ಅರ್ಹರಿರುವುದಿಲ್ಲ.
ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.

2011 ರ ಜನಗಣತಿಯಲ್ಲಿ ಹಾಸನ ಜಿಲ್ಲೆಯಲ್ಲಿ 4,33,453 ಕುಟುಂಬಗಳು ದಾಖಲಾಗಿದ್ದು, 2021 ಆಗಸ್ಟ್ ಮಾಹೆಯವರೆಗೆ ಜಿಲ್ಲೆಯಲ್ಲಿ 23,466 ಅಂತ್ಯೋದಯ ಅನ್ನ ಯೋಜನೆ ಮತ್ತು 4,23,204 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 4,46,670 ಕುಟುಂಬಗಳಿಗೆ ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿ ನೀಡಲಾಗಿದೆ. ಜೊತೆಗೆ 38,256 ಕುಟುಂಬಗಳಿಗೆ ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಬಲರು ಮತ್ತು ಇತರ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಪದೇ ಪದೇ ಮನವಿ ಮಾಡಲಾಗಿದೆ. ಈ ಮನವಿಗೆ ಕೆಲವರು ಸ್ಪಂದಿಸಿ ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಆದ್ಯತೇತರ ಪಡಿತರ ಚೀಟಿ ಪಡೆದಿರುತ್ತಾರೆ.
ಆದ್ದರಿಂದ ಮತ್ತೊಮ್ಮೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ತಾಲ್ಲೂಕಿನ ತಹಸೀಲ್ದಾರರಿಗೆ ಒಪ್ಪಿಸಿ ಆದ್ಯತೇತರ (ಎ,ಪಿ.ಎಲ್) ಪಡಿತರ ಚೀಟಿ ಪಡೆಯಲು ಕೋರಿದೆ.

ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977 ರ ಹಾಗೂ ಐ.ಪಿ.ಸಿ ಕಲಂ ಗಳಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಹಾಗೂ ಹಂಚಿಕೆ ಪಡೆದ ಆಹಾರಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ಅನಧಿಕೃತವಾಗಿ ಪಡಿತರ ಚೀಟಿ ಪಡೆದ ತಿಂಗಳಿನಿಂದ ವಸೂಲು ಮಾಡಲಾಗುವುದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here