ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಒಂದು ಮನೆಯ ಮಹಡಿಯಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣದ ಚೆನ್ನಿಗರಾಯ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಿ.ಎನ್. ಚಂದನ(18) ಮೃತ ದುರ್ದೈವಿ.

ಮನೆಯ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಚಂದನ ತಲೆ ನೀರಿನ ಸಂಪಿಗೆ ತಾಗಿ, ಕಿವಿ ಮತ್ತು ತಲೆಯ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಸ್ಥಳೀಯ ಪುರಸಭೆ ನಾಮ ನಿರ್ದೆಶನ ಸದಸ್ಯ ಹಾಗೂ ಕಲಾವಿದ ನಂಜುಂಡ ಮೈಮ್ ಅವರ ಪುತ್ರಿಯಾಗಿರುವ ಚಂದನ, ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯಳಾಗಿದ್ದಳು. ಅತ್ಯಂತ ಪ್ರತಿಭಾವಂತೆಯಾಗಿದ್ದ ವಿದ್ಯಾರ್ಥಿನಿ ಸಾವಿನಿಂದ ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ ಚನ್ನರಾಯಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವು ಹೀಗೆಯೇ ಘಟಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೇಗಾದರೂ ಬರಬಹುದು ಎಂಬುದಕ್ಕೆ ಆಯುಧಪೂಜೆ, ವಿಜಯದಶಮಿ ಆಚರಣೆ ಸಂಭ್ರಮ ದಲ್ಲಿದ್ದ ಚಂದನಾಳ ದಾರುಣ ಸಾವು ಕಣ್ಣ ಮುಂದಿನ ನಿದರ್ಶನವಾಗಿದೆ.