ಹಾಸನ : ಕೊರೋನಾ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಹಾಗೂ ಕಟ್ಟಡ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಟ್ಟಡ ಕಾಮಗಾರಿಯನ್ನು ನಡೆಸುವ ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಸೂಚನೆ

0

ಹಾಸನ : ಕಟ್ಟಡ ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ. ರವಿಕಾಂತ ರವರು ಭೇಟಿ ನೀಡಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಹಾಗೂ ಕಟ್ಟಡ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಟ್ಟಡ ಕಾಮಗಾರಿಯನ್ನು ನಡೆಸುವ ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಹೊರ ರಾಜ್ಯದ ವಲಸಿಗರು ಮತ್ತು ವಲಸೆ ಕಾರ್ಮಿಕರಿಗೆ ಕೋವಿಡ್ – 19 ವ್ಯಾಧಿ ಸಮಯದಲ್ಲಿ ಸ್ಥಳೀಯವಾಗಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ನಿಯಂತ್ರಣ ಕ್ರಮಗಳು ಮತ್ತು ಲಸಿಕೆ ಕುರಿತು ಕಟ್ಟಡ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕೋವಿಡ್ -19 ಬಗ್ಗೆ ಅರಿವನ್ನು ಮೂಡಿಸುವಂತೆ ನಿರ್ದೇಶನವನ್ನು ನೀಡಲಾಗಿತ್ತು ಅದರಂತೆ ನಗರದ ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು , ಕಾಲೇಜು ವಿದ್ಯಾರ್ಥಿ ನಿಲಯ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಸ್ಥಳಗಳಿಗೆ ಇಂದು ಭೇಟಿ ನೀಡಿದರು.
ಕಟ್ಟಡ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿನ ಸ್ಥಳೀಯ ಕಾರ್ಮಿಕರೊಂದಿಗೆ ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರ ಬಗ್ಗೆ ಹಾಗೂ ಅವರಿಗೆ ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಕಾರ್ಮಿಕರಿಂದ ಮತ್ತು ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದು ಅವರಿಗೆ ಕೋವಿಡ್ – 19 ನಿಯಂತ್ರಣ ಕುರಿತು ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ವಚ್ಚತೆ ಬಗ್ಗೆ ಮತ್ತು ಲಸಿಕೆಯ ಉಪಯೋಗದ ಕುರಿತು ಹಾಗೂ ಸರ್ಕಾರ ನಿಯಮಗಳ ಬಗ್ಗೆ ಸ್ಥಳೀಯವಾಗಿ ಅರಿವನ್ನು ಮೂಡಿಸಿದರು.


ಕಾಮಗಾರಿಯ ಸ್ಥಳಗಳಲ್ಲಿ ಸುಮಾರು 450 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು 45 ವರ್ಷಕ್ಕೂ ಮೇಲ್ಪಟ್ಟ ಕಾರ್ಮಿಕರು 75 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಲಸಿಕೆಯನ್ನು ಪಡೆಯದ ಕಾರ್ಮಿಕರ ಮಾಹಿತಿಯನ್ನು ಪಡೆದು ಸರ್ಕಾರದಿಂದ ನೀಡಲಾಗುವ ಉಚಿತ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕೆಂದು, ಲಸಿಕೆ ಹಾಕಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಮತ್ತು ಮುಂಬರುವ ದಿನಗಳಲ್ಲಿ 18 ವರ್ಷಕ್ಕೂ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಪ್ರತಿಯೊಬ್ಬ ನಾಗರೀಕರ ಆರೋಗ್ಯ ಮತ್ತು ಜೀವದ ಹೊಣೆಗಾರಿಕೆಯು ಸರ್ಕಾರದ್ದಾಗಿದ್ದು ಅದಕ್ಕೆ ಸರ್ಕಾರವು ರೂಪಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here