ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಕರ್ನಾಟಕ ಸರ್ಕಾರದ ಕೋವಿಡ್ ಪ್ಯಾಕೇಜ್ ರೂ. 3000 ಪಡೆಯುವುದು ಹೇಗೆ?

0

ಕೊರೊನಾ ಎರಡನೇ ಅಲೆಯನ್ನು ತಡೆಯುವ ಉದ್ದೇಶದಿಂದ ಕರ್ನಾಟಕದಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ ತಿಂಗಳ ಮೂರನೇ ವಾರದಿಂದಲೇ ಆರಂಭವಾದ ನಿರ್ಬಂಧಗಳು ಜೂನ್ ಮೊದಲ ವಾರದ ತನಕ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ. ಅದಿನ್ನೂ ಮುಂದಕ್ಕೆ ಹೋಗುವ ಸಾಧ್ಯತೆ ಕೂಡ ಇದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೋವಿಡ್- 19 ಪ್ಯಾಕೇಜ್ ಘೋಷಣೆ ಮಾಡಿದ್ದು, ಇದೀಗ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಪ್ಯಾಕೇಜ್ಗೆ ಅಪ್ಲೈ ಮಾಡುವುದಕ್ಕೆ ಲಿಂಕ್ ದೊರೆಯುತ್ತಿದೆ. ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಈ ಬಗ್ಗೆ ಈಗ ಮಾಹಿತಿ ಲಭ್ಯವಿದೆ ಅಷ್ಟೇ ಅಲ್ಲ. ಇದಕ್ಕಾಗಿ ಏನೆಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ ಎಂಬ ಬಗ್ಗೆ ವಿವರಣೆಯನ್ನು ಇಲ್ಲಿ ಹಂತಹಂತವಾಗಿ ನೀಡಲಾಗುತ್ತಿದೆ.

ಹಂತ 1: ಸೇವಾಸಿಂಧು ಪೋರ್ಟಲ್ ಲಾಗ್ ಇನ್ ಆಗಬೇಕು.

ಹಂತ 2: ಮುಖಪುಟ ಎಂಬುದರ ಆಯ್ಕೆ ಮೇಲೆ ಕ್ಲಿಕ್ ಮಾಡಿದಲ್ಲಿ, ಮೇಲ್ಭಾಗದಲ್ಲಿ ಇರುವಂಥ ಕೋವಿಡ್-19 ಎರಡನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಆಟೋರಿಕ್ಷಾ ಚಾಲಕರು , ಟ್ಯಾಕ್ಸಿ ಚಾಲಕರು ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪರಿಹಾರ ವಿತರಣೆ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಆಯ್ಕೆ ಮಾಡಬೇಕು.

ಹಂತ 3: ಅರ್ಜಿದಾರರ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಡಿ.ಎಲ್. ಹಾಗೂ ಅದರ ವ್ಯಾಲಿಡಿಟಿ, ಬ್ಯಾಡ್ಜ್ ಸಂಖ್ಯೆ, ಲಾಕ್ಡೌನ್ಗಿಂತ ಮುಂಚೆ ಚಲಾಯಿಸುತ್ತಿದ್ದ ವಾಹನಕ್ಕೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ವಿವರಗಳು ಹೀಗೆ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಮಾಹಿತಿಯನ್ನು ಕೆಂಪು ನಕ್ಷತ್ರ ಚಿಹ್ನೆಯಲ್ಲಿ ತೋರಿಸಲಾಗಿದೆ. ಅವನ್ನೆಲ್ಲ ಭರ್ತಿ ಮಾಡಬೇಕು.

ಹಂತ 4: ಘೋಷಣೆ ಇರುವಂಥ ಸ್ಥಳದಲ್ಲಿ ಚೌಕಾಕಾರದ ಗುರತುಗಳಿದ್ದು, ಅದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕ್ಲಿಕ್ ಮಾಡಬೇಕು.

ಹಂತ 5: ದೃಢೀಕರಣಕ್ಕಾಗಿ ಆರಂಕಿಯ ಸಂಖ್ಯೆಗಳಿರುತ್ತವೆ. ಅದನ್ನು ಟೈಪ್ ಮಾಡಿ, ದೃಢೀಕರಿಸಿದ ನಂತರ Submit ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಅಂದ ಹಾಗೆ, ಕೋವಿಡ್ ಪ್ಯಾಕೇಜ್ ಪರಿಹಾರ ಧನವು ಚಾಲನೆ ಪರವಾನಗಿ ಪ್ರಮಾಣಪತ್ರ ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ DBT (ನೇರ ಅನುಕೂಲ ವರ್ಗಾವಣೆ) ಮೂಲಕವೇ ಸಂದಾಯ ಆಗುತ್ತದೆ. ಕೆಲವು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಹೊಂದಿದ್ದು, ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆಯನ್ನು ಎದುರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಆದ್ದರಿಂದ ನಕಲು ಅಥವಾ ದುಪ್ಪಟ್ಟು ಪಾವತಿ ಆಗದಂತೆ ಅವರ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ ಮಾತ್ರ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ, ವರ್ಗಾಯಿಸಬೇಕು.

ಈ ಪ್ಯಾಕೇಜ್ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ಮಧ್ಯವರ್ತಿಗಳ ಅಗತ್ಯ ಇಲ್ಲ. ನೇರವಾಗಿ ಆನ್ಲೈನ್ನಲ್ಲಿ ಅರ್ಜಿ ಹಾಕಬಹುದು. Mozilla Firefox ಅಥವಾ Google Chrome ಬ್ರೌಸರ್ ಬಳಸಿ, ಅರ್ಜಿ ಸಲ್ಲಿಸುವುದು ಉತ್ತಮ. ಇನ್ನೂ ಏನಾದರೂ ಪ್ರಶ್ನೆಗಳು ಅಥವಾ ಅನುಮಾನಗಳು ಅಥವಾ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 8088304855, 6361799796, 9380204364, 9380206704 ಇವುಗಳನ್ನು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ಮಧ್ಯೆ ಸಂಪರ್ಕಿಸಬಹುದು.

ಅರ್ಜಿ ಸಲ್ಲಿಕೆ ನಂತರ ಅದು ಮುಂದಿನ ಹಂತಕ್ಕೆ ಹೋಗುತ್ತದೆ. ಎಲ್ಲ ಪರಿಶೀಲಿಸಿ, ಸರಿಯಾಗಿದೆ ಎಂದಾದಲ್ಲಿ ಪರಿಹಾರ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ. ಈ ಹಣಕ್ಕಾಗಿ ಯಾರ ಪ್ರಭಾವ, ಮಧ್ಯಸ್ತಿಕೆ, ಸಹಾಯ ಏನೂ ಅಗತ್ಯ ಇಲ್ಲ. ಆದ್ದರಿಂದ ಚಾಲಕರು ಸಂಬಂಧಪಟ್ಟ ಅರ್ಜಿ ಸಲ್ಲಿಸಿದರೆ ಸಾಕು.

LEAVE A REPLY

Please enter your comment!
Please enter your name here