Breaking News

ಹಾಸನ: ಪಾರ್ಟಿ ವೇಳೆ ನಡೆದ ಜಗಳ ಹಿನ್ನೆಲೆ : ಗುಹೆಕಲ್ಲಮ್ಮ ದೇವಾಲಯ ಬಳಿ ಕೊಲೆಗೆ ಯತ್ನ

By

October 01, 2022

ಹಾಸನ: ಪಾರ್ಟಿ ವೇಳೆ ನಡೆದ ಜಗಳ ಹಿನ್ನೆಲೆ, ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಗುಹೆಕಲ್ಲಮ್ಮ ದೇವಾಲಯ ಬಳಿ ಗುರುವಾರ ಸಂಜೆ ನಡೆದಿದೆ.

ಇದಕ್ಕೂ ಮುನ್ನ ನಗರದ ಹೊರ ವಲಯದಲ್ಲಿರುವ ಕೆಂಚಟ್ನಹಳ್ಳಿ ಜಲಧಿ ಡಾಬಾದಲ್ಲಿ ವಿಜಯನಗರ ಬಡಾವಣೆಯ ಅಖಿಲ್ ಡಿ.ಎ ಎಂಬುವರು ಸ್ನೇಹಿತರಾದ ಪಾಳ್ಯದ ಅಪ್ಪು ಅವರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು.

ಮಧ್ಯಾಹ್ನ 2.30ರ ವೇಳೆ ಅದೇ ಪಾರ್ಟಿಗೆ ಬಂದಿದ್ದ ನಾರಿಹಳ್ಳಿ ಕೊಪ್ಪಲಿನ ಅಭಿ ಎಂಬಾತ ಸಣ್ಣಪುಟ್ಟ ವಿಚಾರದಲ್ಲಿ ಜಗಳ ತೆಗೆದು ಮಾತಿಗೆ ಮಾತು ಬೆಳೆದು, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ ಎನ್ನಲಾಗಿದೆ.

ಇದೇ ಜಿದ್ದಿನಿಂದ ಸಂಜೆ 7.30ರಲ್ಲಿ ಗುಹೆಕಲ್ಲಮ್ಮ ದೇವಸ್ಥಾನದ ಬಳಿ ಅಖಿಲ್ ಸಿಗರೇಟ್‌ ಸೇದುತ್ತಿದ್ದಾಗ, ಅಲ್ಲಿಗೆ ಬಂದ ಅಭಿ ಚಾಕುವಿನಿಂದ ಅಖಿಲ್‌ ಎದೆ ಮಧ್ಯೆ ಭಾಗಕ್ಕೆ ತಿವಿದು ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಯತ್ನಿಸಿದ್ದಾನೆ. ಬಲಭಾಗದ ಭುಜ ಮತ್ತು ಮೂಗಿನ ಹತ್ತಿರಕ್ಕೆ ಗಾಯವಾಗಿದೆ. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.