ಹಾವಿನ ವಿಷ ಚುಚ್ಚಿಸಿ ಪತ್ನಿಯ ಹತ್ಯೆ ಪ್ರಕರಣ: ಪತಿ ಸಹಿತ ಏಳು ಆರೋಪಿಗಳು ಖುಲಾಸೆ ಉಡುಪಿ/ಹಾಸನ : ಹೆಬ್ರಿ ತಾಲೂಕಿನ ಬೆಳಂಜೆ ತೆಂಕೋಲದಲ್ಲಿ ಕಳೆದ 12 ವರ್ಷಗಳ ಹಿಂದೆ ಹಾವಿನ ವಿಷವನ್ನು ಚುಚ್ಚಿಸಿ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಪತಿ ಸುರೇಶ್ ಪ್ರಭು ಸಹಿತ ಇತರರನ್ನು ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.ಪ್ರಕರಣ ಹಿನ್ನೆಲೆ: ಹೊಸನಗರ ತಾಲೂಕು ಹಿಲಕುಂಜಿಯ ಭಾಗೀರಥಿ ಅವರು ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ. ಸುರೇಶ್ ಪ್ರಭು ಅವರನ್ನು 1999ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು.2010ರ ಜ.6ರಂದು ಹೆಬ್ರಿಯಲ್ಲಿ ಭಾಗೀರಥಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಸಂಬಂಧ ಪತಿ ಡಾ. ಸುರೇಶ್ ಪ್ರಭು ಅವರು, ತನ್ನ ಪತ್ನಿಗೆ ವಿಷದ ಹಾವು ಕಚ್ಚಿದೆ ಮೃತಪಟ್ಟಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಸಾವಿನ ಬಗ್ಗೆ ಮೃತ ಭಾಗೀರಥಿ ಅವರ ಸಹೋದರ ಅನುಮಾನ ವ್ಯಕ್ತಪಡಿಸಿ ಎನ್.ವಿ. ಕುಮಾರ್ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು.
ಸಿಎಂ ಉಡುಪಿ ಎಸ್ಪಿಗೆ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದರು. ಡಿಸಿಐಬಿ ಇನ್ಸ್ಪೆಕ್ಟರ್ ಗಣೇಶ್ ಹೆಗ್ಡೆ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.ಘಟನೆಗೆ ಸಂಬಂಧಿಸಿ ಮೃತರ ಪತಿ ಸುರೇಶ್ ಪ್ರಭು ಹಾಗೂ ಇತರೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು 57 ಸಾಕ್ಷ್ಯಾಧಾರಗಳನ್ನು ಒಳಗೊಂಡಿರುವ ದೋಷರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದಂತೆ ಹಾಸನದ ವೈದ್ಯ ಡಾ. ಸುರೇಶ್ ಪ್ರಭು ಹಾಗೂ ಮೃತ ಭಾಗೀರಥಿಯ ದಂಪತಿಯಾಗಿದ್ದು, ಇವರ ದಾಂಪತ್ಯದಲ್ಲಿ ಹೊಂದಾಣಿಕೆ ಬಾರದೇ ವೈಮನಸ್ಸು ಉಂಟಾಗಿದ್ದರಿಂದ ಅವರು ವಿಚ್ಛೇದನ ನೀಡಲು ನಿರ್ಧರಿಸಿದ್ದರು. ಭಾಗೀರಥಿ ಇದಕ್ಕೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿಯು ತಾನು ಬೇರೆ ಮದುವೆಯಾಗಿ ನೆಮ್ಮದಿಯಿಂದ ಇರಬೇಕಾದ್ರೆ ಭಾಗೀರಥಿ ಸಾಯಲೇ ಬೇಕೆಂದುಕೊಂಡು ಕೊಲೆಗೆ ನಿರ್ಧರಿಸಿದ್ದ ಎಂದು ಆರೋಪಿಸಲಾಗಿತ್ತು.ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ ವಾದಿಸಿದ್ದರು.
ಆರೋಪ ಏನು..?ಪತ್ನಿಯನ್ನು ಹತ್ಯೆಗೈಯುವುದಕ್ಕೆ ನಿರ್ಧರಿಸಿದ್ದ ಡಾ. ಸುರೇಶ್ ಪ್ರಭು ತನ್ನ ಸ್ನೇಹಿತ ಮಂಜ ಯಾನೆ ಮಂಜುನಾಥ್ ನೊಡನೆ ಈ ಬಗ್ಗೆ ಚರ್ಚಿಸಿದ್ದ. ಈ ಬಗ್ಗೆ ಮಂಜ ಭಾಗೀರಥಿಯನ್ನು ನಾಗರಹಾವಿನ ವಿಷವನ್ನು ಇಂಜೆಕ್ಷನ್ ನಲ್ಲಿ ಚುಚ್ಚಿ ಕೊಲೆಗೈಯುವ ಸಲಹೆ ಕೊಟ್ಟಿದ್ದ ಎನ್ನಲಾಗಿದೆ. ಅಲ್ಲದೇ ಇದರಿಂದ ಆಕೆ ನಾಗರ ಹಾವು ಚುಚ್ಚಿಯೇ ಮೃತಪಡುತ್ತಾಳೆ ಎಂದು ಎಲ್ಲರೂ ನಂಬುವುದಾಗಿ ತಿಳಿಸಿ ಅದಕ್ಕೆ ಬೇಕಾದ ರೀತಿಯ ಸ್ಕೆಚ್ ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಆ ಬಳಿಕ ಮಂಜುನಾಥ್ ಹಾಗೂ ನಿರಂಜನ್ ರಾಜ್ ಅರಸ್ ಯಾನೆ ಅಚ್ಚನಿ ಸೇರಿಕೊಂಡು ಏಡ್ಸ್ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನಾಗರಹಾವಿನ ವಿಷ ಬೇಕಿದೆ ಎಂದು ತಮ್ಮ ಪರಿಚಯದ ಹಾಸನದ ಹಾವಾಡಿಗ ಕೇಶವನಲ್ಲಿ ಸುಳ್ಳು ಹೇಳಿ ನಂಬಿಸಿ ಅವನಿಂದ ವಿಷವನ್ನು ಸಂಗ್ರಹಿಸಿ ಸುರೇಶ್ ಪ್ರಭುವಿಗೆ ತಂದುಕೊಟ್ಟಿದ್ದರು. ಸ್ನೇಹಿತ ಮಂಜುನಾಥ್ ಜ.6ರಂದು ಕೊಟ್ಟ ವಿಷವನ್ನು ಪಡೆದ ಸುರೇಶ್ ಪ್ರಭು ಒಂದು ಸೀರಿಂಜ್ ಗೆ ಸ್ವಲ್ಪ ಲೋಡ್ ಮಾಡಿ ತಾನೇ ಇಟ್ಟುಕೊಂಡು ಉಳಿದ ವಿಷಯವನ್ನು ಸಣ್ಣ ಬಾಟಲಿ ಹಾಗೂ ಇನ್ನೊಂದು ಸಿರಿಂಜ್ ಅನ್ನು ಮಂಜುನಾಥನಿಗೆ ನೀಡಿ ಆತನೊಡನೆ ಕಾರಿನಲ್ಲಿ ನಿರಂಜನ್ ರಾಜ್ ಅರಸ್, ಬಸವೇಗೌಡ, ಪರಮೇಶ ಅವರೊಂದಿಗೆ ಹಾಸನದಿಂದ ಚಿಕ್ಕಮಗಳೂರು ಮಾರ್ಗವಾಗಿ ಹೆಬ್ರಿ ಸಮೀಪದ ಸೋಮೇಶ್ವರಕ್ಕೆ ಕರೆದುಕೊಂಡು ಬಂದು ಕಾದು ನಿಲ್ಲುವಂತೆ ಸೂಚಿಸಿದ್ದರು.ಸೋಮೇಶ್ವರ ತಲುಪಿದ ಬಳಿಕ
ಮಂಜುನಾಥ ನಾಗರಹಾವಿನ ವಿಷವನ್ನು ಸಿರೀಂಜ್ ಗೆ ಲೋಡ್ ಮಾಡಿ ನಿರಂಜನ್ ರಾಜ್ ಅರಸ್ ಗೆ ನೀಡಿ ಭಾಗೀರಥಿಯನ್ನು ಚುಚ್ಚಿ ಕೊಲೆ ಮಾಡುವಂತೆ ತಿಳಿಸಿದ್ದ. ಶಿವಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ-ಸೋಮೇಶ್ವರ ಮಾರ್ಗವಾದಿ ಕರೆದುಕೊಂಡು ಬಂದು ಸೋಮೇಶ್ವರದಿಂದ ಮಡಾಮಕ್ಕಿ ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸುಮಾರು 8.30ರಿಂದ 9 ಗಂಟೆ ವೇಳೆಗೆ ನಿರ್ಜನ ಸ್ಥಳದಲ್ಲಿ ನಾಗರಹಾವಿನ ವಿಷ ತುಂಬಿದ್ದ ಇಂಜೆಕ್ಷನ್ ಚುಚ್ಚಿದ್ದರು ಎಂದು ಆರೋಪಿಸಲಾಗಿತ್ತು.ಭಾಗೀರಥಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 2 ಸಿರಿಂಜ್, ಖಾಲಿಯಾದ ನಾಗರಹಾವಿನ ವಿಷದ ಸಣ್ಣ ಬಾಟಲಿ ಹಾಗೂ ಟವೆಲ್ ಗಳನ್ನು ಅಲ್ಲಿ ರಸ್ತೆ ಪಕ್ಕದ ಕಾಡಿನಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದರು. ಆ ಬಳಿಕ ಸುರೇಶ್ ಪ್ರಭು ಭಾಗೀರಥಿಗೆ ವಿಷದ ಹಾವು ಕಚ್ಚಿದೆ ಎಂದು ಹೇಳಿ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.