ಆನೆ-ಮಾನವ ಸಂಘರ್ಷ: ಹಾಸನ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9480817460 ಅಥವಾ ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ.

0

ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ಮುಖ್ಯಮಂತ್ರಿ ಸಮ್ಮತಿ

ಬೆಂಗಳೂರು/ಹಾಸನ :  ಆನೆ – ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಡಿ 11 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾಸನ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಹಾಸನ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ತೀರ್ಮಾನದಂತೆ ಮಾನವ ಜೀವ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ. ಗಳಿಗೆ, ಶಾಶ್ವತ ಅಂಗವಿಕಲತೆಗೆ ನೀಡುವ ಪರಿಹಾರವನ್ನು 5 ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳಿಗೆ, ಭಾಗಶಃ ಅಂಗವಿಕಲತೆಗೆ ನೀಡುವ ಪರಿಹಾರವನ್ನು 2.5 ಲಕ್ಷ ರೂ. ಗಳಿಂದ 5  ಲಕ್ಷ ರೂ.ಗಳಿಗೆ, ಗಾಯಗೊಂಡವರಿಗೆ ನೀಡುವ ಪರಿಹಾರ ಮೊತ್ತ 30 ಸಾವಿರ ರೂ. ಗಳಿಂದ 60 ಸಾವಿರ ರೂ. ಗಳಿಗೆ, ಆಸ್ತಿ ಹಾನಿಗೆ ಪರಿಹಾರ ಮೊತ್ತ 10 ಸಾವಿರ ರೂ. ಗಳಿಂದ 20 ಸಾವಿರ ರೂ. ಗಳಿಗೆ ಹಾಗೂ

ಜೀವ ಹಾನಿ ಅಥವಾ ಶಾಶ್ವತ ಅಂಗವಿಕಲತೆಯ ಪ್ರಕರಣಗಳಿಗೆ ನೀಡುವ ಕುಟುಂಬ ಮಾಸಾಶನದ ಮೊತ್ತ ಮಾಸಿಕ ರೂ. 2,000 ದಿಂದ 4,000 ರೂ. ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಇದಲ್ಲದೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನೂ ದ್ವಿಗುಣಗೊಳಿಸಲು ನಿರ್ಧರಿಸಲಾಯಿತು.
ಹಾಸನ, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಕಾರ್ಯಪಡೆಗಳಿಗೆ ಅಗತ್ಯ ಮಾನವ ಸಂಪನ್ಮೂಲ, ಉಪಕರಣಗಳು, ನಿಯಂತ್ರಣ ಕೊಠಡಿ ಹಾಗೂ ವಾಹನ ಸೌಲಭ್ಯಗಳನ್ನು ಒದಗಿಸಲಾಗಿದ್ದು,

ಹಾಸನ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9480817460 ಅಥವಾ ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ.


ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ನೀಡಿದ ವರದಿಯನ್ವಯ ಹಾಸನ ಪ್ರದೇಶದಲ್ಲಿ 65 ಆನೆಗಳಿದ್ದು, ಆಲೂರು-ಸಕಲೇಶಪುರ-ಬೇಲೂರು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳನ್ನು ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಇನ್ನಷ್ಟು ಆನೆಗಳು ಬರದಂತೆ ತಡೆಗಟ್ಟಲು ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದಕ್ಕಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪಾಲಕರು ಸ್ಥಳೀಯ ಅಧಿಕಾರಿಗಳು, ಪರಿಸರ ವಿಜ್ಞಾನ ಕೇಂದ್ರ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ನೆರವಿನಿಂದ ಕಾರ್ಯಾಚರಣೆಯ ವಿಸ್ತೃತ ಯೋಜನೆಯನ್ನು ತಯಾರಿಸಲಿದ್ದು, ಸಕಲೇಶಪುರ-ಬೇಲೂರು ಪ್ರದೇಶದಲ್ಲಿ  ಅತಿ ಹೆಚ್ಚು ತೊಂದರೆಗೆ ಕಾರಣವಾಗಿರುವ 8 ಆನೆಗಳ ಹಿಂಡನ್ನು ಆದ್ಯತೆಯ ಮೇರೆಗೆ ಸೆರೆ ಹಿಡಿಯಲು ನಿರ್ಧರಿಸಲಾಯಿತು. ಇದರೊಂದಿಗೆ

ಸಮಸ್ಯೆ ಸೃಷ್ಟಿಸುವ ಗಂಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನಗಳ ಮೇಲೆ ನಿಗಾ ಇಡುವ ಮೂಲಕ ಮಾನವರಿಗೆ ಅವುಗಳಿಂದ ಹಾನಿಯಾಗುವುದನ್ನು ತಡೆಗಟ್ಟಲು ನಿರ್ಧರಿಸಲಾಯಿತು. ಈಗಾಗಲೇ 23 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಹಾಗೂ ಆನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ನೆರವಾಗುವಂತೆ ಹಾಸನ ಅರಣ್ಯ ವಿಭಾಗದ ಕಟ್ಟೆಪುರ ಹಾಗೂ ಮೂಡಿಗೆರೆಯಲ್ಲಿ ಆನೆ ಶಿಬಿರ ಸ್ಥಾಪಿಸಲು ತೀರ್ಮಾನಿಸಲಾಯಿತು.
ಹಾಸನ ಜಿಲ್ಲೆ ಅರಣ್ಯ ಪ್ರದೇಶದಲ್ಲಿ 9.7 ಕಿ. ಮೀ. ನಷ್ಟು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಲಾಗಿದ್ದು, ಈ ವರ್ಷ 11.5 ಕಿ.ಮೀ. ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಹೇಮಾವತಿ ಹಿನ್ನೀರಿನ ಉದ್ದಕ್ಕೂ 25 ಕಿ.ಮೀ. ನಷ್ಟು ರೈಲ್ವೆ ಬ್ಯಾರಿಕೇಡ್ ನಿರ್ಮಾಣವನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು.  ಇದರಿಂದ

ಕೊಡಗು ಕಡೆಯಿಂದ ಆನೆಗಳ ಸಂಚಾರವನ್ನು ತಡೆಯಬಹುದಾಗಿದೆ. ಇದರೊಂದಿಗೆ ಶಾಶ್ವತ ಕಾವಲುಗೋಪುರಗಳು, ಮೋಟರೈಸ್ಡ್ ಬೋಟ್ಗಳು, ನೈಟ್ ವಿಷನ್ ಬೈನಾಕ್ಯುಲರ್ ಗಳು, ಲಾಂಗ್ ರೇಂಜ್ ಸರ್ಚ್ ಲೈಟ್ಗಳನ್ನು ಅಳವಡಿಸಲಾಗುವುದು.
ಮಾನವ- ಆನೆ ಸಂಘರ್ಷ ನಿವಾರಣಾ ಸಮಿತಿಯನ್ನು ಹಾಸನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲು ನಿರ್ಧರಿಸಲಾಯಿತು. ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಮಿತಿ ಸದಸ್ಯರಾಗಿದ್ದು, ಹಾಸನದ ಡಿಸಿಎಫ್ ಇದರ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ರಸ್ತೆ ಬದಿ ಪೊದೆಗಳನ್ನು ತೆಗೆಯುವುದು, ಕಪ್ಪು ಸ್ಥಳಗಳಲ್ಲಿ ಬೀದಿ ದೀಪ ಅಳವಡಿಕೆ ಹಾಗೂ

ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೊಡಗು ಫೌಂಡೇಷನ್ ಮಾದರಿಯಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷವನ್ನು ನಿರ್ವಹಿಸಲು ಒಂದು ಫೌಂಡೇಷನ್ ಸ್ಥಾಪಿಸಲು ತೀರ್ಮಾನಿಸಲಾಯಿತು.
ರೈತರ ಭೂಮಿಯಲ್ಲಿ ಸೌರವಿದ್ಯುತ್ ಬೇಲಿ ನಿರ್ಮಿಸಲು ಶೇ. 50:50ರ ಅನುಪಾತದ ಯೋಜನೆಯ ಷರತ್ತನ್ನು ಸಡಿಲಿಸಿ, ವೈಯಕ್ತಿಕ ಬೇಲಿ ನಿರ್ಮಾಣಕ್ಕೆ ಸರ್ಕಾರದ ಪಾಲನ್ನು ಶೇ. 60ಕ್ಕೆ ಹೆಚ್ಚಿಸಲು ಹಾಗೂ ಅರಣ್ಯದ 5 ಕಿ.ಮೀ. ಸುತ್ತಳತೆಯ ಷರತ್ತನ್ನು ಸಡಿಲಿಸಲು ತೀರ್ಮಾನಿಸಲಾಯಿತು. ಅರಣ್ಯದ ಅಂಚಿನಲ್ಲಿ ಸಾಮೂಹಿಕ ಬೇಲಿ ನಿರ್ಮಿಸಲು ಅನುಮೋದನೆ ನೀಡಲಾಯಿತು. ಇದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ನುಡಿದರು.
ಸಭೆಯಲ್ಲಿ ಅಬಕಾರಿ ಸಚಿವ ಹಾಗೂ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ,ಅರಣ್ಯ , ಪರಿಸರ ಹಾಗೂ ವನ್ಯಜೀವಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here