ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

0

ನಮ್ಮ ಸುತ್ತಮುತ್ತ ಕಾಣಲು ಸಿಗುವ ಹಸಿರು ಕಾನನವೇ ಪರಿಸರ. ಹಸಿರುಟ್ಟು ಮಲಗಿರುವ ಗಿರಿಯ ಸಾಲು, ಹಸಿರು ಸೀರೆಗೆ ಬಿಳಿ ಸೆರಗಿನಂಚಿನ ಬೆಟ್ಟದ ತಪ್ಪಲು, ಎಲ್ಲಿಂದಲೋ ಹನಿಹನಿಯಾಗಿ ಕೇಳಿಬರುವ ಇನಿದನಿಯ ಹಕ್ಕಿಗಳ ಹಾಡು, ಅಲ್ಲಲ್ಲಿ ದನಗಾಹಿಗಳ ಕೂಗು ಇವೆಲ್ಲವೂ ಪರಿಸರದ ಅವಿಭಾಜ್ಯ ಅಂಗ. ಈ ರೀತಿ ವಿಶಿಷ್ಟ ಆಗುವ ವೈವಿಧ್ಯಮಯ ಪರಿಸರದಲ್ಲಿ ಆನಂದಿಸುವುದೇ ಸಂಭ್ರಮ. ಈ ಸಂಭ್ರಮ ಹಲವಾರು ತಲೆಮಾರು ಅನುಭವಿಸಲಿಕ್ಕಾಗಿಯೇ ಪ್ರತಿವರ್ಷ ಜೂನ್-5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಪರಿಸರವನ್ನು ಉಳಿಸುವಲ್ಲಿ ಸರ್ಕಾರ, ಸಮಾಜ ಮತ್ತು ನಮ್ಮಗಳ ಜವಾಬ್ದಾರಿ ಪ್ರಮುಖವಾದದ್ದು. ಪರಿಸರಕ್ಕೆ ಸಂಬಂಧಿಸಿ ವರ್ಷದಲ್ಲಿ 28 ದಿನಗಳನ್ನು ಮೀಸಲಿಡಲಾಗಿದೆ.

ಪ್ರಸ್ತುತ ವರ್ತಮಾನದಲ್ಲಿ ಪರಿಸರ ಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಆಧುನಿಕ ತಂತ್ರಜ್ಞಾನ, ವಿಜ್ಞಾನದ ಅಭಿವೃದ್ಧಿಯಾದಂತೆ ಮಿತಿಮೀರಿದ ವಾಹನಗಳು, ಕೈಗಾರಿಕೆಗಳು ಉಗುಳುವ ಹೊಗೆಯಿಂದಾಗಿ ಕ್ಲೋರೋಫ್ಲೋರೋ ಕಾರ್ಬನ್ಗಳು ಮತ್ತು ಬ್ರೋಮೋಫ್ಲೋರೋ ಕಾರ್ಬನ್ಗಳು ಅಗಾಧ ಪ್ರಮಾಣದಲ್ಲಿ ವಾಯುಮಂಡಲಕ್ಕೆ ಬಿಡುಗಡೆಯಾಗಿ ಪರಿಸರ ಮಾಲಿನ್ಯ ತೀವ್ರವಾಗುತ್ತಿದೆ. ಇದರ ಪರಿಣಾಮ ಕೇವಲ ಜನರ ಮೇಲಲ್ಲದೆ ಜೀವಸಂಕುಲಕ್ಕೆ ಕುತ್ತಾಗಿದೆ. ನಗರೀಕರಣಕ್ಕೋ ಅಥವಾ ಕೈಗಾರಿಕರಣಕ್ಕೋ ಸಮೃದ್ಧಿಯ ಅರಣ್ಯಗಳನ್ನು ಕಡಿಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾದ ಕಾರ್ಬನ್ ಸಂಯುಕ್ತಗಳನ್ನು ಗಿಡಮರಗಳು ಹೀರಿಕೊಳ್ಳಲು ಆಸ್ಪದವೇ ಇಲ್ಲದೇ ಓಝೋನ್ ಒಡಲು ಬರಿದಾಗುತ್ತಿದೆ. ಹೀಗಾಗಿ ಅಲ್ಟ್ರಾವೈಲೇಟ್ ವಿಕಿರಣವನ್ನು ಹೀರಿಕೊಳ್ಳುವ/ತಡೆಯುವ ಅದರ ಸಾಮರ್ಥ್ಯವು ಕುಸಿಯುವುದರಿಂದ ಅಪಾಯಕಾರಿ ಅಲ್ಟ್ರಾವೈಲೇಟ್ ವಿಕಿರಣ ಭೂಮಿಗೆ ತಲುಪುವ ಹಾದಿ ಸಲೀಸಾಗುತ್ತದೆ. ಪರಿಣಾಮವೇನೆಂದರೆ ಜಾಗತಿಕ ತಾಪಮಾನ ಏರಿಕೆ.ಈ ವಿಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಕಣ್ಣಿನ ಪೊರೆ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಕುಸಿತ ಹಾಗು ಶರೀರದ ಡಿ.ಎನ್.ಎ ಗೆ ಹಾನಿಯಾಗಿ ಚರ್ಮದ ಕ್ಯಾನ್ಸರ್ ನಂಥ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲ ಮಾನವನ ಸ್ವಯಂ ಕೃತ ಅಪರಾಧದ ಫಲಶ್ರುತಿ ಎಂದರೆ ತಪ್ಪಲ್ಲ.

ಸಂಪನ್ಮೂಲಗಳು ನಾಶವಾಗುವುದು ಜೊತೆಗೆ ಪರಿಸರ ಮಾಲಿನ್ಯಕ್ಕೆ ನಾಶಕ್ಕೆ ಪ್ರಮುಖ ಕಾರಣಗಳಲ್ಲಿ ಗಣಿಗಾರಿಕೆಯು ಒಂದು. ಇದರೊಂದಿಗೆ ಹಸಿರು ಕ್ರಾಂತಿ ಕೇವಲ ಹೈಬ್ರೀಡ್ ಬೀಜಗಳು ಹಾಗು ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತವಾಗಿದೆ. ಇವುಗಳಿಗೆ ಅತಿ ಹೆಚ್ಚು ನೀರು ಬೇಕು ಅದನ್ನು ಪೂರೈಸಲು ಅಂತರ್ಜಲವನ್ನು ಮೇಲೆತ್ತಿ ಮೇಲೆತ್ತಿ ಚೆಲ್ಲಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹಸಿರುಕ್ರಾಂತಿಯ ಸ್ವರ್ಗ ಎಂದು ಕರೆಸಿಕೊಳ್ಳುವ ಪಂಜಾಬಿನ ಲೂಧಿಯಾನ. ಈ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಪ್ರತಿವರ್ಷ 0.8 ಮೀಟರ್ ಅಷ್ಟು ಕೆಳಕ್ಕೆ ಹೋಗುತ್ತಿದೆ. ಇಂದು ಹಲವಾರು ನದಿಗಳು ಬತ್ತಿಹೋಗಿದೆ ಇದಕ್ಕೆ ಕಾರಣ ಜಾಗತಿಕ ತಾಪಮಾನ ಏರಿಕೆ ಹಾಗೂ ಇದರ ಮೂಲ ಪರಿಸರ ಮಾಲಿನ್ಯ ಈ ರೀತಿ ಪರಿಸರ ಮಾಲಿನ್ಯಕ್ಕೆ ಮಾನವರಾಗಿ ನಮ್ಮ ಕೊಡುಗೆ ಅಪಾರವಿದೆ ಇದರ ಕುರಿತು ನಮ್ಮನ್ನು ಜಾಗೃತಗೊಳಿಸಿದ ಹಲವರಲ್ಲಿ ಸಾಲುಮರದ ತಿಮ್ಮಕ್ಕ, ಸುಂದರಲಾಲ್ ಬಹುಗುಣ, ಜಗ್ಗಿ ವಾಸುದೇವ್ ಇನ್ನೂ ಮುಂತಾದವರು ಇವರೆಲ್ಲ ಆದರ್ಶ ನಾಗರೀಕರು ಎಂದರೆ ತಪ್ಪಾಗಲಾರದು.

ಪರಿಸರ ಮಾಲಿನ್ಯ ತಡೆಗಟ್ಟಲು ಉತ್ತಮ ನಾಗರೀಕರಾಗಿ ನಾವು ಮಾಡಬೇಕಾದ ಕಾರ್ಯಗಳೆಂದರೆ;
* ಸಾವಯವ ಕೃಷಿಗೆ ಆದ್ಯತೆ ನೀಡಿ, ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಕ್ರಿಮಿನಾಶಕಗಳನ್ನು ಕೃಷಿಯಲ್ಲಿ ತಗ್ಗಿಸೋಣ.
*ಮಳೆನೀರು ನೀರು ಕೊಯ್ಲು ಯೋಜನೆ ಮತ್ತು ಇಂಗು ಗುಂಡಿಗಳನ್ನು ಸ್ಥಾಪಿಸಬೇಕು.
* ಈ ಲಾಕ್ ಡೌನ್ ಸಮಯದಲ್ಲಿ ಹಸಿರು ಸೃಷ್ಟಿಸುವತ್ತ ಹೆಜ್ಜೆ ಇಡಬೇಕು.
* ಕಾಂಕ್ರೀಟ್ ಕಾಡು ಸೃಷ್ಟಿಸುವುದನ್ನು ಬಿಟ್ಟು ಹಸಿರು ಗುರುಗಳಾಗಬೇಕು. ಕೃಷಿರುಷಿಗಳಿಗೆ ಪ್ರೋತ್ಸಾಹ ನೀಡುತ್ತ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿರಿಸಿ ಕೊಳ್ಳಬೇಕು.
* ಬಳಸಿ ಎಸೆಯುವ ವಸ್ತುಗಳಾದ ಪ್ಲಾಸ್ಟಿಕ್ ತಟ್ಟೆ,ಲೋಟ,ಪೆನ್ನು, ಚೀಲಗಳ ಬದಲಿಗೆ ದೀರ್ಘ ಕಾಲ ಬಾಳಿಕೆ ಬರುವ ಪರ್ಯಾಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು.
* ಕೈಗಾರಿಕೆಗಳಿಗೆ ಮತ್ತು ವಾಹನಗಳಿಗೆ ಕಡಿಮೆ ಮಲಿನಕಾರಕ ಇಂಧನಗಳನ್ನು ಬಳಸಬೇಕು. ಹಾಗು ವಾಹನಗಳ ಇಂಜಿನ್ ಅನ್ನು ಉತ್ತಮ ಸ್ಥಿತಿಯಲ್ಲಿಡಬೇಕು.
*ಅನವಶ್ಯಕವಾಗಿ ಟಿವಿ, ಫ್ರಿಜ್, ಎಸಿ ಬಳಸಬಾರದು ಇದರಿಂದ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚುತ್ತದೆ.
* ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಉತ್ತಮ ಬಳಕೆ ಮಾಡಿಕೊಳ್ಳಬೇಕು. ಮೋಟಾರ್ ಸೈಕಲ್ ಬದಲು ಸೈಕಲ್ ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಪರಿಸರ ಮಾಲಿನ್ಯ ತಡೆಯಲು ಸಹಾಯವಾಗುತ್ತದೆ.
*ಜಾಗೃತಿ ಮೂಡಿಸುವ ಸಲುವಾಗಿ ಚಿತ್ರಕಲೆ, ಪ್ರಬಂಧ, ಲೇಖನ, ಬೀದಿ ನಾಟಕಗಳು ಮತ್ತು ಲಾವಣಿ ಗಳಂತಹ ಚಟುವಟಿಕೆ ಹಮ್ಮಿಕೊಳ್ಳುವುದು.

ನದಿ, ಬೆಟ್ಟ, ಸಮುದ್ರ, ಅರಣ್ಯ, ಪ್ರಾಣಿ, ಈ ತೆರನಾದ ಪರಿಸರದ ಹಾಸುಹೊಕ್ಕುಗಳಿಗೆ ಧಾರ್ಮಿಕ ಸ್ಥಾನಮಾನ ನೀಡಿ ಸಂರಕ್ಷಣೆಗೆ ಹಿಂದಿನಿಂದಲೂ ಒತ್ತು ನೀಡಿದ್ದೇವೆ. ಪರಿಸರ ಮಾಲಿನ್ಯ ಪ್ರಪಂಚದಾದ್ಯಂತ ಕಳವಳಕಾರಿ ಸಮಸ್ಯೆಯಾಗಿದೆ. ಇದರಿಂದ ಹೊರಬರಲು ನಾಗರೀಕರಾಗಿ ನಾವೆಲ್ಲರೂ ಕಾಯಾ-ವಾಚಾ-ಮನಸಾ ಪರಿಸರವನ್ನು ಸಂರಕ್ಷಿಸಬೇಕು ಮನೆಗೊಂದು ಮರ ಊರಿಗೊಂದು ವನ ಎಂಬುದನ್ನು ಖಚಿತಪಡಿಸಬೇಕು. ಮಾನವ ಜಾತಿಯ ಹಾಗೆಯೇ ಈ ಭೂಮಿಯಲ್ಲಿರುವ ಎಲ್ಲಾ ಸಸ್ಯ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ‘ನಾವು ಬದುಕೋಣ ಇತರ ಜೀವಿಗಳನ್ನು ಬದುಕಲು ಬಿಡೋಣ. ಮುಂದಿನ ಪೀಳಿಗೆಗೆ ಉತ್ತಮ ಪ್ರಾಕೃತಿಕ ಸಂಪನ್ಮೂಲ ನೀಡೋಣ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಇಲ್ಲವಾದರೆ ತಪ್ಪದು ಭವಣೆ.

LEAVE A REPLY

Please enter your comment!
Please enter your name here