ಅಂಗಾಂಶ ಆಲೂಗಡ್ಡೆ ತಂತ್ರಜ್ಞಾನವನ್ನು ಜಿಲ್ಲೆಯ ರೈತರಿಗೆ ಪರಿಚಯಿಸಲು ಹಾಗೂ ಪ್ರೋತ್ಸಾಹಿಸಲು ವಿಶೇಷ ಪ್ಯಾಕೇಜ್

0

ಹಾಸನ ಸೆ.24 :  ಜಿಲ್ಲೆಯಲ್ಲಿ ಅಂಗಾಂಶ ಆಲೂಗಡ್ಡೆ ತಂತ್ರಜ್ಞಾನವನ್ನು ಪರಿಚಯಿಸಲು ಈಗಾಗಲೇ ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಗ್ಗೆ ಚರ್ಚಿಸಲು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ), ಹಾಸನ ಕಛೇರಿಯಲ್ಲಿ ಸಭೆಯನ್ನು ಸೆ.23 ರಂದು ಆಯೋಜಿಸಲಾಗಿತ್ತು.

ಸದರಿ ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ), ಹಾಸನ ರವರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು, ಯೋಜನಾ ನಿರ್ವಾಹಕರು,  ಬೆಂಗಳೂರು, ತಾಂತ್ರಿಕ ಸಹಾಯಕರು, ಸಂಸ್ಥೆ ಬೆಂಗಳೂರು ರವರು, ಅಂಗಾಂಶ ಆಲೂಗಡ್ಡೆ ಬೆಳೆ ಬೆಳೆದು ಯಶಸ್ವಿಯಾಗಿರುವ ರೈತರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿರುತ್ತಾರೆ.

ಸದರಿ ಸಭೆಯನ್ನು ಉದ್ದೇಶಿಸಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ), ಹಾಸನ ರವರು ಮಾತನಾಡಿ ಅಂಗಾಂಶ ಆಲೂಗಡ್ಡೆ ಸಸಿ ತಂತ್ರಾಜ್ಞಾನದಿಂದ 2020ರ ಹಿಂಗಾರು ಮತ್ತು 2021ರ ಮುಂಗಾರು ಹಂಗಾಮಿನಲ್ಲಿ ಬಹಳಷ್ಟು ರೈತರು ಆಲೂಗಡ್ಡೆ ಬೆಳೆದು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿರುತ್ತಾರೆ ಎಂದು ತಿಳಿಸಿದರು. ಈ ಸಭೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ಅನೇಕ ರೈತರು ಈ ತಂತ್ರಜ್ಞಾನದಿಂದ ಆಲೂಗಡ್ಡೆ ಉತ್ತಮ ರೀತಿಯಲ್ಲಿ ಉತ್ಪಾದನೆಯಾಗಿರುವ ಬಗ್ಗೆ ಮಾಹಿತಿ ನೀಡಿ ಸಂತಸ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ), ಹಾಸನ ರವರು ಮಾತನಾಡುತ್ತ ಈ ತಂತ್ರಜ್ಞಾನವನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಲು 64 ಎಕರೆ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಯಾಗಿದ್ದು, ಪ್ರತಿ ಎಕರೆಗೆ ರೂ. 30,000/- ಸಹಾಯಧನ ನೀಡಲು ಅವಕಾಶವಿದ್ದು, ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಲಾಗುವುದು ಎಂದು ತಿಳಿಸಿದರು. ಇನ್ನು ಈ ತಂತ್ರಜ್ಞಾನದ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ಕಾರ್ಯಕ್ರಮ ರೂಪುಗೊಳಿಸುವುದಾಗಿ ತಿಳಿಸಿದರು.

ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿ ಕಾವಲು ಮುಖ್ಯಸ್ಥರಾದ ಡಾ|| ಹೆಚ್. ಅಮರನಂಜುಂಡೇಶ್ವರ ರವರು ರೈತರೊಂದಿಗೆ ಚರ್ಚಿಸಿದಾಗ ಆಲೂಗಡ್ಡೆಯಲ್ಲಿ ಹಸಿರು ಬಣ್ಣದ ಗೆಡ್ಡೆಗಳು ಬಂದಿರುವ ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಸಿರು ಬಣ್ಣದ ಗೆಡ್ಡೆಗಳು ಬಾರದಂತೆ ಮಾಡಲು ಕಾಲಕಾಲಕ್ಕೆ ಗಿಡಗಳ ಬುಡಕ್ಕೆ ಮಣ್ಣು ಏರಿಸುವುದರಿಂದ ಹಸಿರು ಗೆಡ್ಡೆಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದರು. ಮುಂದಿನ ದಿವಸಗಳಲ್ಲಿ  ತಾಂತ್ರಿಕತೆಯಿಂದ ಉತ್ಪಾದಿಸಲಾಗುವ ಆಲೂಗೆಡ್ಡೆ ಬೀಜಗಳನ್ನು ಶೇಖರಿಸಲು ಶೀಥಲಗೃಹಗಳ ಅವಶ್ಯಕತೆಯಿದೆ ಎಂದು ತಿಳಿಸಿದರು.

ಶ್ರೀ ರವೀಂದ್ರನಾಥ್ ರೆಡ್ಡಿ, ಯೋಜನಾ ನಿರ್ವಾಹಕರು, IP ಸಂಸ್ಥೆ ಬೆಂಗಳೂರು, ರವರು ಮಾತನಾಡಿ  ಸಸಿಗಳನ್ನು ಉತ್ಪಾದಿಸುವ ನರ್ಸರಿದಾರರು ಹಸಿರು ಮನೆಯಲ್ಲಿ ಯಾವ ರೀತಿಯಲ್ಲಿ ಸಸ್ಯೋತ್ಪಾದನೆ ಮಾಡಲು ಸಿದ್ದತೆಗಳನ್ನು ನಡೆಸಲು ಮತ್ತು ಉತ್ಪಾದಿಸುವ ಸಸಿಗಳನ್ನು ಮಾರಾಟ ಮಾಡುವ ಬಗ್ಗೆ ಸಸಿಗಳಿಗೆ ಇರುವ ಬೇಡಿಕೆ  ಬಗ್ಗೆ ರೈತರಿಗೆ ವಿವರಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಶ್ರೀ ಧನಂಜಯ.ಬಿ.ಎನ್. ತಾಂತ್ರಿಕ ಸಹಾಯಕರು, IZ ಸಂಸ್ಥೆ ಬೆಂಗಳೂರು ರವರು ರವರು ಮಾತನಾಡಿ,  ತಾಂತ್ರಿಕತೆಯ ಬಗ್ಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದು ಇನ್ನು ಹೆಚ್ಚಿನ ಮಟ್ಟದಲ್ಲಿ ಸಫಲವಾಗಬೇಕಾದರೆ ರೈತರು ತಾಕಿನಲ್ಲಿ ಯಶಸ್ವಿಯಾಗಿ ಬೆಳೆ ಬೆಳೆಯಬೇಕು. ಆದ್ದರಿಂದ ಆಸಕ್ತ ರೈತರನ್ನು ಬೆಳೆ ಬೆಳೆಯಲು ಆಯ್ಕೆ ಮಾಡುವುದು ಇಲಾಖಾ ಅಧಿಕಾರಿಗಳು/ IZ  ಸಂಸ್ಥೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಿಸಿದರು. ಸಭೆಯಲ್ಲಿ  ಎಲ್ಲರು ಚರ್ಚಿಸಿ ಜಿಲ್ಲೆಯಲ್ಲಿ ಅವಶ್ಯವಿರುವ ಶೀಥಲ ಗೃಹವನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಮುಂದಿನ ಹಂಗಾಮುಗಳಲ್ಲಿ ಈ ತಂತ್ರಜ್ಞಾನವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಜನಪ್ರಿಯಗೊಳಿಸಲು ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ/ಬಹುಮಾನಕ್ಕೆ ಅರ್ಜಿ ಆಹ್ವಾನ
ಹಾಸನ ಸೆ.24 :  ರೇಷ್ಮೆ ಇಲಾಖೆ ವತಿಯಿಂದ ಪ್ರಗತಿಪರ ಪುರುಷ ಮಹಿಳಾ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರು 2020 – 21 ನೇ ಸಾಲಿನ ಅತ್ಯುತ್ತಮ ಸಾಧನೆಗೈದ ಒಬ್ಬರಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ರೇಷ್ಮೆ ಕೃಷಿ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪುರುಷ ರೇಷ್ಮೆ ಬೆಳೆಗಾರರು (ರಾಜ್ಯ ಮಟ್ಟದಲ್ಲಿ) ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ಹಾಗೂ ಮಹಿಳಾ ರೇಷ್ಮೆ ಬೆಳೆಗಾರರು (ರಾಜ್ಯ ಮಟ್ಟದಲ್ಲಿ) ಪ್ರಥಮ ಬಹುಮಾನ 25 ಸಾವಿರ, ದ್ವಿತೀಯಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ. ದ್ವಿ ತಳಿ ಬಿತ್ತನೆ ವಲಯದಲ್ಲಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ಪವಮಾನ 5 ಸಾವಿರ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 5 ಸಾವಿರ ನೀಡಲಾಗುವುದು.

ಮಾರ್ಗಸೂಚಿಗಳು: ರೇಷ್ಮೆ ಬೆಳೆಗಾರರು ಕನಿಷ್ಠ ಒಂದು ಎಕರೆ ಹಿಪ್ಪುನೇರಳೆ ವಿಸ್ತೀರ್ಣ ಹೊಂದಿರಬೇಕು. ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು, ಒಬ್ಬರು ಒಂದಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲ್ಲಿ ಅವರಿಗೆ ಗರಿಷ್ಠಮಟ್ಟದ  ಬಹುಮಾನ ನೀಡಲಾಗುವುದು.

ರಾಜ್ಯ ಅಥವಾ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹರಾಗಲು ನೂರು ಮೊಟ್ಟೆಗೆ ಸರಾಸರಿ ಇಳುವರಿ 65 ಕೆಜಿ ಗಿಂತ ಕಡಿಮೆ ಇರಬಾರದು ಹಾಗೂ ಒಂದು ಎಕರೆಗೆ ಗೂಡಿನ ಸರಸರಿ ಉತ್ಪಾದಕತೆ 500 ಕೆಜಿ ಗಳಿಗಿಂತ ಕಡಿಮೆ ಇರಬಾರದು.

ಪ್ರತಿ ಎಕರೆಗೆ ಅತಿ ಹೆಚ್ಚು ಗೂಡು ಉತ್ಪಾದನೆ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ದ್ವಿತಳಿ ಬಿತ್ತನೆ ಪ್ರದೇಶದ ಪ್ರಶಸ್ತಿಗೆ ಅರ್ಹರಾಗಲು 100 ಮೊಟ್ಟೆಗೆ ಸರಾಸರಿ ಇಳುವರಿ ಸಂಖ್ಯೆಯಲ್ಲಿ 30,000ಕ್ಕಿಂತ ಮತ್ತು ತೂಕದಲ್ಲಿ 50 ಕೆ.ಜಿ.ಗಿಂತ ಕಡಿಮೆ ಇರಬಾರದು ಹಾಗೂ ಒಂದು ಎಕರೆಗೆ ವಾರ್ಷಿಕ ಕನಿಷ್ಠ 400 ಕೆ.ಜಿ ಬಿತ್ತನೆ ಗೂಡು ಉತ್ಪಾದಿಸಿರಬೇಕು. ನೀಡಿರುವ ಮಾಹಿತಿಯಲ್ಲಿ ಯಾವುದೇ ಲೋಪದೋಷಗಳಿಗೆ ರೇಷ್ಮೆ ಬೆಳೆಗಾರರೇ  ಜವಾಬ್ದಾರರಾಗಿರುತ್ತಾರೆ.

ಬಹುಮಾನ ಪಡೆಯಲು ರೇಷ್ಮೆ ಬೆಳೆಗಾರರು ನಿಗದಿತ ನಮೂನೆಯಲ್ಲಿ ದಾಖಲಾತಿಗಳೊಡನೆ ಸಂಬಂಧಪಟ್ಟ ತಾಂತ್ರಿಕ ಸೇವಾ ಕೇಂದ್ರದ ಕಚೇರಿಗೆ ಸಲ್ಲಿಸಲು ಕಡೆಯ ಸೆ. 30 ಸಲ್ಲಿಸ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಉತ್ಪನ್ನಾಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಧಿಕಾರಿ ಕರೆ
ಹಾಸನ ಸೆ.24 : ಸ್ಥಳೀಯವಾಗಿರುವ  ಕಚ್ಚಾ ವಸ್ತು, ಕೃಷಿ ಉತ್ಪನ್ನ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಹೆಚ್ಚು ಕೈಗಾರಿಕೆ ಸ್ಥಾಪಿಸಿ ಉತ್ಪಾದನೆ ಮಾಡಿ  ವಿದೇಶಗಳಿಗೆ ರಫ್ತು ವಹಿವಾಟು ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಕರೆ ನೀಡಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಾಲಯ,  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ರಪ್ತುದಾರರ ಸಮಾವೇಶ ಮತ್ತು  ರಪ್ತು ಉತ್ಪನ್ನಗಳ ವಸ್ತು ಪ್ರದರ್ಶನ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ಸಣ್ಣ  ಉತ್ಪಾದನೆ ವಲಯದಲ್ಲಿ ಹೆಚ್ಚಿನ ಅವಕಾಶ ಇದೆ ಮಾಹಿತಿ  ಪಡೆದು ಉದ್ಯಮ ಸ್ಥಾಪಿಸದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಪ್ತು ಹೆಚ್ಚಳದ ಉದ್ದೇಶದಿಂದ ಅನೇಕ ಯೋಜನೆಗಳನ್ನೂ  ಜಾರಿಗೆ ತಂದಿವೆ ಇದರ ಅನುಕೂಲ ಪಡೆದುಕೊಳ್ಳಲು ಯುವಕರು ಮುಂದೆ ಬರಬೇಕು ಎಂದರು.
ಜಿಲ್ಲೆಯಲ್ಲಿ ಅನೇಕ  ಕೈಗಾರಿಕೆಗಳು ಹಾಗೂ ಉತ್ಪಾದನಾ ಘಟಕಗಳು ಇದ್ದು, ಇವುಗಳ ಬೆಳೆಯುವುದರಿಂದ ಸ್ಥಳೀಯರಿಗೆ ಹೆಚ್ಚು ಉದ್ಯೋಗವೂ ಸಹ ದೊರೆತಂತ್ತಾಗುತ್ತದೆ  ಎಂದು ಅವರು ತಿಳಿಸಿದರು.
    ಭಾತರವೂ ಹಲವು ಶತಮಾನಗಳಿಂದ ರಫ್ತು ನಡೆಸುತ್ತಿದ್ದು, ನಮ್ಮ ದೇಶದ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ಇದನ್ನು ಸದ್ಬಳಕೆ ಮಾಡಿ ಪ್ರಗತಿ ಕಾಣಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಕೈಗಾರಿಕೆಯಲ್ಲಿ ರಫ್ತು ಆಧಾರಿತ ತರಬೇತಿಗಳನ್ನು ಆಯೋಜಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅರಸೀಕೆರೆ ಹಾಗೂ ಚನ್ನರಾಯಪಟ್ಟಣದಲ್ಲಿ ಸಹ ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಯೋಚಿಸಲಾಗಿದ್ದು ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಮಹಾಂತಪ್ಪ ಅವರು ಮಾತನಾಡಿ ಅನೇಕ ವರ್ಷಗಳಿಂದ  ಕೈಗಾರಿಕೆಗೆ ಮೀಸಲಿಟ್ಟಿರುವ  ಭೂಮಿ ಬಳಕೆಯಾಗದೆ ಬಿದ್ದಿದ್ದು ಹೊಸ ಉದ್ದಿಮೆ ಸ್ಥಾಪಿಸಲು ಜಿಲ್ಲಾಧಿಕಾರಿ  ಅವಕಾಶ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸುಮಾರು 125 ಹೆಚ್ಚು ಸಣ್ಣ ಕೈಗಾರಿಕೆಗಳು ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತವೆ ಅದಕ್ಕೆ ಕೈಗಾರಿಕಾ ಪ್ರದೇಶದಲ್ಲಿ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳ ಮನವಿ ಮಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದಿನೇಶ್ ಅವರು ಮಾತನಾಡಿ ಒಂದು ದೇಶ ಹೆಚ್ಚು ಅಭಿವೃದ್ಧಿಗೆ ಕೈಗಾರಿಕೆಗಳು ಅತಿಮುಖ್ಯ  ಎಂದರು.
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಅದರಂತೆ ಎಲ್ಲಾ ಕೈಗಾರಿಕಾ ಕೇಂದ್ರ ಹೋಗಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಹಾಸನ ಜಿಲ್ಲಾ  ವಾಣಿಜ್ಯೋದ್ಯಮ ಸಂಸ್ಥೆಯ  ದನ್ ಪಾಲ್ ಅವರು ಮಾತನಾಡಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಆಲೂಗಡ್ಡೆ  ಇಂತಹ ಬೆಳೆಗಳ ಕೃಷಿ ಉತ್ಪನ್ನ ಆಧಾರಿತ  ಕೈಗಾರಿಕೆಗಳು ಹೆಚ್ಚಾಗಬೇಕು ಎಂದರು.
ಭಾರತಿ ಅಸೋಸಿಯೇಟ್ಸ್ ವಿನೋದ್  ಅವರು ಮಾತನಾಡಿ ಪ್ರಸ್ತುತ ಆನ್ ಲೈನ್ ಸೇವೆ ಹೆಚ್ಚಿರುವುದರಿಂದ ರಫ್ತು ಗಾರಿಕೆಯು ಬಹಳ ಸುಲಭವಾಗಿದೆ ಇದರ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಹಾಸನದ ಉದ್ಯಮಿ ಮತ್ತು ಎಫ್.ಕೆ.ಸಿ.ಸಿ.ಐ. ಇನ್ಫ್ರಾಸ್ಟ್ರಕ್ಟರ್ ಛೇರ್ಮನ್ ಹೆಚ್.ಎ. ಕಿರಣ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶರಾದ ಯೋಗೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್  ಹಾಗೂ ಮತ್ತಿತರರು ಹಾಜರಿದ್ದರು.

#ರೈತಮಿತ್ರ_ಹಾಸನ್_ನ್ಯೂಸ್ #ರೈತಮಿತ್ರ #hassan #hassannews #farmersnewshassan #farmers

LEAVE A REPLY

Please enter your comment!
Please enter your name here