ಪರಿಸರ ಸ್ನೇಹಿ ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಹಾಸನ ಜಿಲ್ಲಾಧಿಕಾರಿ ಸೂಚನೆ

0

ಹಾಸನ ಸೆ.22 : ಮುಂಬರುವ ದೀಪಾವಳಿ ಸಂದರ್ಭ ಸಾರ್ವಜನಿಕರ ಸುರಕ್ಷತೆಯ ಮಾನದಂಡ ಅನುಸರಿಸಿ ಪರಿಸರ ಸ್ನೇಹಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು.

  ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ದೀಪಾವಳಿ ಹಬ್ಬ ಆಚರಣೆಯ ಸಲುವಾಗಿ ತಾತ್ಕಾಲಿಕ ಪಟಾಕಿ ಮಾರಾಟ ಪರವಾನಗಿ ನೀಡುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ 45 ಪಟಾಕಿ  ಮಳಿಗೆಗೆ ಅವಕಾಶ ಕಲ್ಪಿಸಿದ್ದು, ನಾಲ್ಕು ದಿನಗಳ ಕಾಲ ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.

ಪ್ರತಿ ಮಳಿಗೆಗಳ ನಡುವೆ ನಿರ್ದಿಷ್ಟ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಮಳಿಗೆಗಳಲ್ಲಿ ಸುರಕ್ಷತಾ ವ್ಯವಸ್ಥೆಗೆ ಕ್ರಮ ವಹಿಸಿ ಹಸಿರು ಪಟಾಕಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

  ಪಟಾಕಿ ಮಾರಾಟಕ್ಕೆ ಮುನ್ನ ಹಾಗೂ  ನಂತರದ ನಾಲ್ಕು ದಿನಗಳ ಕಾಲ ನಿರಂತರವಾಗಿ ಪೌರಾಯುಕ್ತರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು, ಅಗ್ನಿಶಾಮಕ ಅಧಿಕಾರಿ, ಯುವ ಸಬಲೀಕರಣ ಮತ್ತು ಇಲಾಖೆ  ಕಡ್ಡಾಯವಾಗಿ ಮಳಿಗೆಗಳ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಟಾಕಿ ಖರೀದಿಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪರಿಶೀಲಿಸಿ  ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅವರು ಹೇಳಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್ ನಂದಿನಿ ಅವರು ಮಾತನಾಡಿ ಯಾವುದೇ ಅವಗಡಗಳು ಸಂಭವಿಸದಂತೆ ಎಲ್ಲಾ ನಿಯಮಗಳನ್ನು ಪಾಲಿಸಿ ಪಟಾಕಿ ಮಾರಾಟ ಮಾಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ. ಎ ಜಗದೀಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ನಗರಸಭೆಯ ಪೌರಾಯುಕ್ತರಾದ ಕೃಷ್ಣ ಮೂರ್ತಿ, ತಹಶೀಲ್ದಾರ್ ನಟೇಶ್,  ಅಗ್ನಿಶಾಮಕ ಠಾಣಾಧಿಕಾರಿ ರಂಗನಾಥ್, ಜಿಲ್ಲಾ ಪಟಾಕಿ ವರ್ತಕರ ಸಂಘದ ಅಧ್ಯಕ್ಷರು ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here