ಅತ್ಯಾಚಾರಿಗಳ ಬಿಡುಗಡೆಗೆ ಖಂಡನೆಕ್ಷಮಾದಾನ ರದ್ದು ಮಾಡಿ ಶಿಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನೆ
ಹಾಸನ: ದಶಕದ ಹಿಂದೆ 11 ಜನರು ಬಿಲ್ಕಿಸ್‌ಭಾನು ಎಂಬ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದವರನ್ನು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಗಳಮುಖಿಯರು ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.ನ್ಯಾಯಾಲಯ ಮೇಲ್ಮನವಿಗೆ ಸ್ಪಂದಿಸಿ ಬಿಡುಗಡೆ ಮಾಡಿರುವುದು ಒಂದು ದೊಡ್ಡ ದುರಂತ. ಕೂಡಲೇ ಆರೋಪಿಗಳನ್ನು ವಾಪಸ್ ಜೈಲಿಗೆ ಕಳುಹಿಸಿ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿಯೂ ಜೈಲಿನಿಂದ ಹೊರ ಬಂದಿರುವುದನ್ನು ನೋಡಿದರೆ,
ನಮ್ಮ ಸಮಾಜದ ಹೆಣ್ಣು ಮಕ್ಕಳಿಗೆ ಯಾವ ರೀತಿ ರಕ್ಷಣೆ ಸಿಗುತ್ತದೆ ಎಂದು ಪ್ರಶ್ನಿಸಿದರು. ನೊಂದವರ ಬದುಕು ಹೇಗಿರುತ್ತದೆ ಎಂಬುದರ ಬಗ್ಗೆ ಸರಕಾರವೂ ಯೋಚಿಸಬೇಕು. ಗುಜರಾತ್‌ನಲ್ಲಿ 10 ವರ್ಷಗಳ ಹಿಂದೆ 11 ಜನರು ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಸಂತ್ರಸ್ತೆಯನ್ನು ಕೊಲೆ ಮಾಡಿದ್ದರು. ಇಂತಹ ಅತ್ಯಾಚಾರಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡಿರುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು. ಅತ್ಯಾಚಾರಿಗಳಿಗೆ ಜೈಲು ಶಿಕ್ಷೆ ಆಗಲೇಬೇಕು. ಸಮೂಹ ಕೊಲೆಪಾತಕರಿಗೆ ನೀಡಿರುವ ಕ್ಷಮಾದಾನ ರದ್ದುಗೊಳಿಸಬೇಕು ಎಂದು ಒತ್ತಾಯಿದರು.ಅತ್ಯಾಚಾರ ಮಾಡುವ ಸಂಸ್ಕೃತಿ ನಮ್ಮದಲ್ಲ. ಕೊಲ್ಲುವುದು ನಮ್ಮ ಧರ್ಮವಲ್ಲ. ಪ್ರೀತಿ, ಮಮತೆ, ಶಾಂತಿ ಎಂಬುದು ಭಾರತದ ಉಸಿರಾಗಬೇಕು. 11 ಮಂದಿ ಅಪರಾಧಿಗಳಿಗೆ ನೀಡಿರುವ ಕ್ಷಮಾಧಾನ
ಜೀವ ಸಂಕುಲಕ್ಕೆ ಮಾಡಿರುವ ಅವಮಾನ ಎಂದರು.ಕೊಲೆಪಾತಕರನ್ನು ಬೆಂಬಲಿಸುವುದನ್ನು ಮೊದಲು ನಿಲ್ಲಿಸಬೇಕು. ಅವರನ್ನು ಸನ್ಮಾನಿಸುವುದು ನಮ್ಮಗಳ ಸಂಸ್ಕಾರವಲ್ಲ, ಜಾತಿ ಧರ್ಮದ ಹೆಸರಲ್ಲಿ ನಡೆಸುತ್ತಿರುವ ಅತ್ಯಾಚಾರ ನಿಲ್ಲಲೇಬೇಕು, ಕೋಮುವಾದ ಕೊನೆಯಾಗಿ ಮಾನವೀಯತೆ ಉಳಿಯಬೇಕು ಎಂದು ಮನವಿ ಮಾಡಿದರು.ದಲಿತ ಮಹಿಳೆಯರ ಮೇಲೆ ನಡೆಸುತ್ತಿರುವ ಅತ್ಯಾಚಾರ, ಮುಸಲ್ಮಾನರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಿ, ದಲಿತರು, ಅಲ್ಪ ಸಂಖ್ಯಾತರು, ಮಹಿಳೆಯರುಈ ನೆಲದ ಪ್ರಜೆಗಳಾಗಿದ್ದು, ಹೆಣ್ಣಿನ ಘನತೆ, ಸ್ವಾತಂತ್ರ, ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟ್ಟ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಿರುವುದು
ತಾರತಮ್ಯ ರಾಜಕಾರಣದ ಪ್ರತೀಕ ಎಂದು ದೂರಿದರು. ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಡೆಯುವ ಹಿಂಸೆ, ದೌರ್ಜನ್ಯ ಕೊನೆಯಾಗಿ ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕಿದೆ. ಸರಕಾರ ಈಗಲಾದರೂ ಎಚ್ಚೆತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಸಂಗಮ ಸಂಸ್ಥೆಯ ಅಶ್ವಥ್, ಪದ್ಮಾ, ಮರಿ ಜೋಸೆಫ್, ಆರ್‌ಪಿಐ ಸತಿಶ್, ನಾಗರಾಜು ಹೆತ್ತೂರ್ ಇತರರಿದ್ದರು.