ಹಾಸನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಾಸನ ತಾಲೂಕಿನ ಕಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 112 ತುರ್ತು ಸಹಾಯವಾಣಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
112 ಸಿಬ್ಬಂದಿಗಳಾದ ವೇಣು ಮತ್ತು ರಘು ಕುಮಾರ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ನಿ ಅವಗಡ, ಅಪಘಾತ, ಇನ್ನಿತರೆ ಯಾವುದೇ ತುರ್ತು ಪರಿಸ್ಥಿಯಲ್ಲಿ 112 ಸಹಾಯವಾಣಿ ದೇಶದಾದ್ಯಂತ ಚಾಲ್ತಿಯಲ್ಲಿದೆ. ಒಂದು ದೇಶ ಒಂದು ತುರ್ತು ಸಹಾಯವಾಣಿ ಎಂಬುದು ಎಲ್ಲಾ ಜನರಿಗೆ ಅರಿವು ಮೂಡಿಸುವ ಸಲುವಾಗಿ

ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮಿಷ ನಿಮಿಷಗಳಲ್ಲಿ ಕಷ್ಟದಲ್ಲಿ ಇರುವರರ ಜಾಗಕ್ಕೆ ತೆರಳಿ ಸ್ಪಂದಿಸುವ ಕಾರ್ಯ 112 ಯೋಜನೆ ಆಗಿದೆ. ಈ ಮೊದಲು ಪೊಲೀಸ್ , ಅಗ್ನಿ, ಆಂಬುಲೆನ್ಸ್ ಸೇವೆಗಳ ಸಹಾಯವಾಣಿ ಬೇರೆ ಬೇರೆ ಆಗಿತ್ತು. ಆದರೆ ಈಗ ಎಲ್ಲಾ ಸೇವೆಗಳು ಒಂದೇ ಪೋನ್ ನಂಬರ್ ನಲ್ಲಿ ದೊರೆಯಲಿದೆ. ದೂರುದಾರರ ಬಳಿ ಯಾವುದೇ ವಾಹನವಿಲ್ಲದೆ ಹೋದರೇ ಸ್ಥಳೀಯ ಪೊಲೀಸ್ ಠಾಣೆ ಗೆ ಇಲಾಖೆಯ 112 ವಾಹನದಲ್ಲೇ ತಂದು ಬಿಡಲಾಗುವುದು ಎಂದು ರೆಸ್ಪಾಂಡರ್ ರಘು ಕುಮಾರ್ ತಿಳಿಸಿದರು.

112 ಮೊದಲು ಯುರೋಪಿಯನ್ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು 112 ದೂರವಾಣಿ ಕರೆ ಸಂಖ್ಯೆಯನ್ನೆ ಏಕೆ ಆಯ್ಕೆ ಮಾಡಲಾಯಿತು ಎಂಬ ಇತಿಹಾಸವನ್ನು ಸವಿಸ್ತಾರವಾಗಿ ರೆಸ್ಪಾಂಡರ್ ವೇಣು ರವರು ಹೇಳಿದರು. ಪೊಲೀಸ್ ಎಂದರೆ ಭಯ ಪಡುವ ಅಗತ್ಯವಿಲ್ಲ. ಸ್ನೇಹಿತರಂತೆ ನಮ್ಮನ್ನು ಕಾಣಿ ಎಂದು ಕಿವಿಮಾತು ಹೇಳಿದರು.
ಹಾಸನ ಕಂಟ್ರೋಲ್ ರೂಂ ನ ಅರುಣ್ ಕುಮಾರ್ ಎಂ.ಪಿ ರವರು ನಿಜವಾದ ಆಪತ್ ಬಾಂಧವರು ಎಂದರೇ 112 ಸಿಬ್ಬಂದಿಗಳು. ನಾವು ಕಂಟ್ರೋಲ್ ರೂಂ ನಲ್ಲಿ ಹೇಳುವ ನಿರ್ದೇಶನ ಅನುಸರಿಸಿ 112 ಸಿಬ್ಬಂದಿ ಕ್ಷಣ ಮಾತ್ರದಲ್ಲಿ ನಿಮ್ಮ ಸಮಸ್ಯೆಗೆ ಸ್ಪಂದಿಸುವರು. 112 ಕರೆ ನೀವು ಮಾಡಿದಾಗ ಮೊದಲು

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕರೆ ಸ್ವೀಕರಿಸಿ ಮಾಹಿತಿ ಪಡೆದು ನಂತರದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಕ್ಷಣ ಮಾತ್ರದಲ್ಲಿ ಸಮಸ್ಯೆ ಮತ್ತು ದೂರುದಾರರ ಫೋನ್ ನಂಬರ್ ನೊಂದಿಗೆ ಈವೆಂಟ್ ಕಳುಹಿಸುತ್ತಾರೆ. ನಂತರದಲ್ಲಿ ಈ ಈವೆಂಟ್ ಅನ್ನು ಘಟನೆಗೆ ತೀರ ಹತ್ತಿರವಿರುವ 112 ವಾಹನಕ್ಕೆ ಈವೆಂಟ್ ಹಾಕಿ ಕಳುಹಿಸುತ್ತೇವೆ. ತಕ್ಷಣ ಘಟನಾ ಸ್ಥಳಕ್ಕೆ ಸಿಬ್ಬಂದಿ ಹೋಗುತ್ತಾರೆ ಎಂದು ಕಾರ್ಯ ಚಟುವಟಿಕೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯ ನುಡಿಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಸುಂದರಮ್ಮ ಅವರು ಮಾತನಾಡಿ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಲಿ, ನನಗೂ ಪೊಲೀಸ್ ಎಂದರೆ ಭಯವಿತ್ತು ಆದರೆ ಈಗ ಆ ಭಯ ಇಲ್ಲದಾಗಿದೆ ಎಂದರು.ಇದೆ ಸಂದರ್ಭದಲ್ಲಿ ರವಿ ಡಿ ಚನ್ನಣ್ಣನವರ್ ಅಭಿಮಾನಿ ಬಳಗದ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ತಮ್ಮನ್ನ ರೋಷನ್, ಅಂಚೆ ಇಲಾಖೆಯ ಪುಟ್ಟರಾಜು ಎಂ.ಕೆ, ಉದ್ಯಮಿ ತಮ್ಮಣ್ಣ, ಮಾರುತಿ ಸುಜುಕಿ ಕಂಪನಿಯ ಕಾರ್ತಿಕ್, ಸುನೀಲ್, ಉಪನ್ಯಾಸಕರಾದ ಹೇಮಂತ್ ಬಿ ಎಲ್,ತಿರ್ಥೇಶ ಎಸ್. ಎನ್, ಹಾಗೂ ರವಿ ಡಿ ಚನ್ನಣ್ಣನವರ್ ಅಭಿಮಾನಿ ಬಳಗದ ವಿನಯ್ ಹಾಜರಿದ್ದರು.