Arkalgud

ಅಪ್ರಾಪ್ತೆಗೂ ವರನಿಗೂ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸ , ರಾಮನಾಥಪುರ ಜಾತ್ರೆಗೆ ಹೋದವಳು ಬರಲೇ ಇಲ್ಲ

By Hassan News

December 01, 2022

ಹಾಸನ : ಮದುವೆಗೂ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಜೊತೆ ತೆರಳಿದ್ದ 16 ವರ್ಷದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ ನಡೆದಿದೆ. ಬಾಲಕಿಯ ಮೃತದೇಹದ ಮೇಲೆಹಾಗೂ ಕುತ್ತಿಗೆಯಲ್ಲಿ ಪೆಟ್ಟಾಗಿರುವ ಗಾಯದ ಗುರುತು ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ತಾಲೂಕಿನ ಕೂಡ್ಲೂರು ಗ್ರಾಮದ ದಿನೇಶ್ ಎಂಬಾತ ಚಪ್ಪಲಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಎರಡು ತಿಂಗಳ ಹಿಂದೆ ಸಮೀಪದ ಗ್ರಾಮವೊಂದರ ಅಪ್ರಾಪ್ತೆ ಬಾಲಕಿ ಜೊತೆ ಈತನಿಗೆ ಮದುವೆ ನಿಶ್ಚಯವಾಗಿ, ನಿಶ್ಚಿತಾರ್ಥ ಸಹ ನಡೆದಿತ್ತು. ಬಾಲಕಿ ವಯಸ್ಸು 18 ತುಂಬದೇ ಇದ್ದರೂ, ಹದಿನಾರನೇ ವಯಸ್ಸಿಗೇ ಆಕೆಯ ಪೋಷಕರು ಮದುವೆ ನಿಶ್ಚಯ ಮಾಡಿ ಬಿಟ್ಟಿದ್ದರು. ದುರಂತ ಎಂದರೆ

ವರ ಮಹಾಶಯ ದಿನೇಶ್‌ಗೂ, ಅಪ್ರಾಪ್ತೆಗೂ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ, ಹಾಳು ಬಡತನದ ಕಾರಣ ಬಾಲಕಿ ಮನೆಯವರು ಏನಾದರೂ ಆಗಲಿ ಮೊದಲು ಮಗಳ ಮದುವೆ ಆಗಲಿ ಎಂದು ದಿನೇಶ್ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದಾದ ಬಳಿಕ ದಿನೇಶ್ ಆಗಾಗ್ಗೆ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದ.ಜಾತ್ರೆಗೆಂದು ಹೋದವಳು

ಮರಳಿ ಬರಲಿಲ್ಲ:ನ.28 ರಂದು ಬಾಲಕಿ ಮನೆಗೆ ತೆರಳಿದ್ದ ದಿನೇಶ್, ಮಂಗಳವಾರ ರಾಮನಾಥಪುದಲ್ಲಿ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಷಷ್ಠಿ ಜಾತ್ರೆ ಇದೆ. ಅಲ್ಲಿಗೆ ಹೋಗಿ ಬರುತ್ತೇವೆ ಎಂದು ಹೇಳಿದ. ಇದಕ್ಕೆ ಮರು ಮಾತನಾಡದ ಅಪ್ರಾಪ್ತೆ ಮನೆಯವರು, ಮಂಗಳವಾರ ಮಧ್ಯಾಹ್ನ 2.30 ರ ಸುಮಾರಿಗೆ ಬಾಲಕಿಯನ್ನು ಭಾವೀ ಅಳಿಯನೊಂದಿಗೆ ಕಳಿಸಿಕೊಟ್ಟಿದ್ದರು. ಈ ನಡುವೆ ಏನು ನಡೆಯಿತು, ದಿನೇಶ್ ಏನು ಮಾಡಿದನೋ ಅವನಿಗೇ ಗೊತ್ತು, ಅಂದು 4 ಗಂಟೆಗೆ ಬಾಲಕಿ ಪೋಷಕರಿಗೆ ಕರೆ ಮಾಡಿದ ದಿನೇಶ್, ನಿಮ್ಮ ಮಗಳು ವಿಷ ಕುಡಿದಿದ್ದಾಳೆಂದು ತಿಳಿಸಿದ್ದಾನೆ. ನಂತರ ಆತ ಮತ್ತು ಕೆಲವರು ಬಾಲಕಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆಗಾಗಿ ದಾಖಲು ಮಾಡುವ ಮುನ್ನವೇ ಅಪ್ರಾಪ್ತೆ ಮೃತಪಟ್ಟಿದ್ದಳು. ಇದಾದ ಬಳಿಕ ಚಾಲಾಕಿ ದಿನೇಶ್ ವಿಷ ಸೇವಿಸಿದ್ದು,

ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಸಾವಿನ ಬಗ್ಗೆ ಅನುಮಾನ: ಬಾಲಕಿ ಮೃತದೇಹದ ವಿವಿಧೆಡೆ ಹಾಗೂ ಕುತ್ತಿಗೆಯಲ್ಲಿ ಗಾಯದ ಗುರುತುಗಳಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಮಕ್ಕಳ ಸಹಾಯವಾಣಿಗೆ ಅಪರಿಚಿತ ಕರೆಯೊಂದು ಬಂದಿದ್ದು, ಅದರ ಆಧಾರದ ಮೇಲೆ ಮೃತ ಬಾಲಕಿ ಪೋಷಕರಿಂದ ಮಾಹಿತಿ ಪಡೆದಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ,

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಕ್ಕಳ ದೌರ್ಜನ್ಯ ತಡೆ ವಿಶೇಷ ಪೊಲೀಸ್ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.ವ್ಯವಸ್ಥೆಯ ರಾಜಿಗೆ ಬಲಿಯಾಯ್ತೇ ಜೀವಬಾಲ್ಯ ವಿವಾಹ ಅಪರಾದ ಎಂದು ಗೊತ್ತಿದ್ದರೂ, ನತದೃಷ್ಟ ಬಾಲಕಿಯ ಪೋಷಕರು ಅದಕ್ಕೆ ಕ್ಯಾರೇ ಎನ್ನದೇ ದುಡುಕಿನ ನಿರ್ಧಾರ ಮಾಡಿ ಮದುವೆ ಮಾಡಲು ಅಣಿಯಾದರು. ಅದಕ್ಕಾಗಿ ನಿಶ್ಚಿತಾರ್ಥ ಸಹ ಮಾಡಿದರು. ಆದರೆ

ಈ ಮದುವೆಗೆ ಬಾಲಕಿಯ ಒಪ್ಪಿಗೆ ಇತ್ತೋ ಇಲ್ಲವೋ ಆಕೆಗೇ ಗೊತ್ತು. ಈ ನಡುವೆ ಜಾತ್ರೆಗೆಂದು ಕರೆದುಕೊಂಡು ಹೋದ ದಿನೇಶ ಮುಗ್ಧ ಬಾಲಕಿಗೆ ಏನು ಮಾಡಿದ ಎಂಬುದು ಖಾಕಿ ವಿಚಾರಣೆ ಬಹಿರಂಗ ಪಡಿಸಬೇಕಿದೆ. ಒಟ್ಟಿನಲ್ಲಿ ತಿಳಿದವರು ಮಾಡಿದ ತಪ್ಪು ಅಮಾಯಕ ಬಾಲಕಿ ಹೆಣವಾಗುವಂತೆ ಮಾಡಿದೆ. ಇದರ ಪೂರ್ವಾಪರ ಗೊತ್ತಿರುವ ದಿನೇಶನಿಂದಲೇ ಎಲ್ಲ ರಹಸ್ಯವೂ ಬಯಲಾಗಬೇಕಿದೆ.