Arsikere

ಹಸ್ತಕ್ಕೆ ಶಿವಲಿಂಗೇಗೌಡ ಅದ್ದೂರಿ ಎಂಟ್ರಿ ಕಾಂಗ್ರೆಸ್ ಘಟಾನುಘಟಿ ನಾಯಕರಿಂದ ಸ್ವಾಗತ : ಅರಸೀಕೆರೆಯಲ್ಲಿ ಜೆಡಿಎಸ್-ಬಿಜೆಪಿ ವಿರುದ್ಧ ಕಿಡಿಕಾರಿದ ನಾಯಕರು

By Hassan News

April 10, 2023

ಅರಸೀಕೆರೆ : ಅಧಿಕಾರ ನಶ್ವರ, ಶಿವಲಿಂಗೇಗೌಡರು ಮಾಡಿರುವ ಸಾಧನೆ ಅಜರಾಮರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ್ಣಿಸಿದರೇ ‌‌‌…ಭಾನುವಾರ ( 9.ಏಪ್ರಿಲ್ 2023 ) ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿ ಅವರು ಮಾತನಾಡಿದರು.ಶಿವಲಿಂಗೇಗೌಡರಿಗೆ 10 ವರ್ಷಗಳಿಂದ ಗಾಳ ಹಾಕುತ್ತಿದ್ದೆ. ಸಿದ್ದರಾಮಯ್ಯನವರೂ ಗಾಳ ಹಾಕುತ್ತಿದ್ದರು. ಆದರೆ

ಗಾಳಕ್ಕೆ ಬಿದ್ದಿರಲಿಲ್ಲ. ಕೊನೆಗೆ ಕ್ಷೇತ್ರದ ಜನರ ಅಭಿವೃದ್ಧಿಯ ಗಾಳಕ್ಕೆ ಬಿದ್ದಿದ್ದಾರೆ. ನಾನು ಕ್ಷೇತ್ರದ ಋಣ ತೀರಿಸಬೇಕು ಎಂದು ಸಂಕಲ್ಪ ಮಾಡಿ ಪಕ್ಷಕ್ಕೆ ಬಂದಿದ್ದಾರೆ ಎಂದರು.ನನಗೆ, ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ರಾಜಕಾರಣದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೇನೆ, ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ಸಹೋದರನನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ಇವೆಲ್ಲಾ ರಾಜಕಾರಣದಲ್ಲಿ ನಡೆದಿದೆ. ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದಿದ್ದಾಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿದೆವು. ಆದರೆ

ಅಧಿಕಾರವನ್ನು ಕುಮಾರಣ್ಣ ಉಳಿಸಿಕೊಳ್ಳಲಿಲ್ಲ. ನಾನು, ಶಿವಲಿಂಗೇಗೌಡರು ಸರ್ಕಾರ ಉಳಿಸಲು ಬಾಂಬೆಗೆ ಹೋಗಿ ಬೀದಿಯಲ್ಲಿ ನಿಂತು ಎಷ್ಟು ಹೋರಾಟ ಮಾಡಿದ್ದೇವೆ ಎಂದು ನಮಗೆ ಗೊತ್ತು ಎಂದು ಮೆಲುಕು ಹಾಕಿದರು.ರಾಜ್ಯ, ದೇಶದ ಹಿತಕ್ಕಾಗಿ ನಾವು ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಬೇಕು. ಮೇ 10 ರಂದು ಚುನಾವಣೆ ನಡೆಯುತ್ತಿದ್ದು, ಅದು ಕೇವಲ ಮತದಾನ ಮಾಡುವ ದಿನ ಮಾತ್ರವಲ್ಲ. ಕರ್ನಾಟಕದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿಯನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳುವ ದಿನ ಎಂದರು.

ನಾನು, ನೀವು, ಶಿವಲಿಂಗೇಗೌಡ್ರು ಕಾಣ್ತಿರೋ ಕನಸೆಲ್ಲಾ ಬರೀ ಕನಸಲ್ಲ, ಅದು ಸಾಮಾಜಿಕ ಬದ್ಧತೆಯ ಕನಸು, ಗ್ಯಾರಂಟಿಯ ಕನಸು. ನಾನು ಸಿದ್ದರಾಮಯ್ಯ ಇಬ್ಬರೂ ಗ್ಯಾರಂಟಿ ಕಾರ್ಡ್ಗೆ ಸಹಿ ಹಾಕಿದ್ದೇವೆ. ಅವೆಲ್ಲವನ್ನೂ ನಾನು ಅನುಷ್ಠಾನಕ್ಕೆ ತರದೇ ಹೋದ್ರೆ ಮತ್ತೊಮ್ಮೆ ಅರಸೀಕೆರೆಗೆ ಬಂದು ವೋಟ್ ಕೇಳೋದಿಲ್ಲ ಎಂದರು.ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅರಸೀಕೆರೆ ಕ್ಷೇತ್ರಕ್ಕೆ ಕುಡಿಯೋ ನೀರು ಸಿಕ್ಕಿದ್ದರೆ ಅದಕ್ಕೆ ಶಿವಲಿಂಗೇಗೌಡ ಕಾರಣ, ಬೇರೆ ಯಾರೂ ಅಲ್ಲ ಎಂದರು.ಜೆಡಿಎಸ್‌ನಲ್ಲಿ ಅವರಿಗೆ ಉಸಿರುಗಟ್ಟಿಸೊ ವಾತಾವರಣ ಇತ್ತು. ದೇವೇಗೌಡರ ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು, ಪ್ರಶ್ನೆ ಮಾಡಿದ್ರೆ ಯಾರೂ ಉಳಿಯಲ್ಲ ಎಂದರು.ಶಿವಲಿಂಗೇಗೌಡ ಹಾಲಿಗಾದರೂ, ಹಾಕಿ ನೀರಿಗಾದ್ರೂ ಹಾಕಿ ಅಂದಿದ್ದಾರೆ. ಹಾಲಿಗೆ ಹಾಕೋದು. ನಾವೆಲ್ಲ ನಿಮ್ಮ ಜೊತೆ ಇದೀವಿ, ನೀನು ಈಗ ನಮ್ಮ ಮನೆ ಸದಸ್ಯ. ನಿನ್ನ ಹಾಗೂ

ಕ್ಷೇತ್ರದ ಯೋಗಕ್ಷೇಮ ನೋಡಿಕೊಳ್ತೇವೆ ಎಂದು ಅಭಯ ನೀಡಿದರು.ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರಲ್ಲ, ಕೊಟ್ಟ ಮಾತು ಈಡೇರಿಸದಿದ್ದರೆ ನಿಮಗೆ ನಮಸ್ಕಾರ ಮಾಡಿ ನಿವೃತ್ತಿ ಆಗುತ್ತೇವೆ ಎಂದರು.ಶಿವಲಿಂಗೇಗೌಡ ಅವರನ್ನು ಅಭ್ಯರ್ಥಿ ಮಾಡುತ್ತೇವೆ, ನೀವು ಗೆಲ್ಲಿಸಿ ಎಂದು ಕರೆ ನೀಡಿದರು.ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಶಿವಲಿಂಗೇಗೌಡರು ಸಾಮಾಜಿಕ ಬದ್ಧತೆ ಇಟ್ಟುಕೊಂಡು ಪಕ್ಷ ಸೇರಿದ್ದಾರೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನ ಗೆಲ್ಲೋದಕ್ಕೆ ನಮ್ಮ ಪಕ್ಷ ಸೇರಿದ್ದಾರೆ ಎಂದರು.ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಶಿವಲಿಂಗೇಗೌಡ,

ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಂತೆ ನಾನೂ ಸೇರಬೇಕು ಎಂದು ನನ್ನ ಹಣೆಯಲ್ಲಿ ಬರೆದಿತ್ತು ಅಂತ ಕಾಣುತ್ತೆ, ಹಾಗೆಯೇ ಆಗಿದೆ ಎಂದರು.ನನ್ನ ಸ್ವಾರ್ಥಕ್ಕಾಗಿ ನಾನು ಕಾಂಗ್ರೆಸ್ ಸೇರಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಸೇರಿದ್ದೇನೆ. ಎತ್ತಿನ ಹೊಳೆ ಯೋಜನೆಗೆ ಅರಸೀಕೆರೆ ಸೇರಿಸಿದ್ದು ಸಿದ್ದರಾಮಯ್ಯ ಅವರು, ನಾನೀಗ ಇಬ್ಬರು ನಾಯಕರ ಮಡಿಲಿಗೆ ಬಂದಿದ್ದೇನೆ ಎಂದು ನುಡಿದರು.ಒಬ್ಬ ಪುಣ್ಯಾತ್ಮ ಅರಸೀಕೆರೆಯಲ್ಲಿ ಆಗಿರೋ ಎಲ್ಲಾ ಕೆಲಸ ಬಿಜೆಪಿಯದು ಎಂದಿದ್ದಾನೆ. ಪತ್ರ ಬರೆಸಿ ಮನೆ ಮನೆಗೆ ಕಳಿಸಿದ್ದಾನೆ ಎಂದು ಹೆಸರು ಹೇಳದೆ ಎನ್.ಆರ್.ಸಂತೋಷ್ ವಿರುದ್ಧ ಕಿಡಿ ಕಾರಿದರು. ಅಲ್ಲದೆ

ಬಿಜೆಪಿ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮ ಆಗಿಲ್ಲ ಎಂದರು.ಕ್ಷೇತ್ರದ ಮನೆ ಮನೆಗೆ ನೀರು ಕೊಟ್ಡಿದ್ದು ಕಾಂಗ್ರೆಸ್ ಸರ್ಕಾರ, ಸಿದ್ದರಾಮಣ್ಣ, ಎತ್ತಿನ ಹೊಳೆ ಯೋಜನೆ ಕೊಟ್ಟಿದ್ದೂ ಕೂಡ ಕೂಡ ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಹೇಳೋ ಸುಳ್ಳು ನಂಬಬೇಡಿ, ಅವರುಸಂಪೂರ್ಣ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಜರಿದರು.ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಡಿ.ಕೆ.ಸುರೇಶ್ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೀನಿ. ನನಗೂ 65 ವರ್ಷ ಆಗಿದೆ, ಹಾಲಲ್ಲಾದರೂ ಹಾಕಿ, ನೀರಲ್ಲಾದ್ರೂ ಹಾಕಿ ಎಂದರು. ಎಲ್ಲಿಗೆ ಹೋದ್ರೂ, ಅರಸೀಕೆರೆಗೆ ಈ ಬಾರಿಯಾದ್ರೂ ಮಂತ್ರಿಸ್ಥಾನ ಸಿಗುತ್ತಾ ಅಣ್ಣಾ ಅಂತ ಜನ ಕೇಳ್ತಾರೆ, ಏನ್ ಮಾಡ್ತೀರೋ ಮಾಡಿ, ನಿಮ್ಮ ಆಶೀರ್ವಾದ ಬೇಕು ಎಂದು ಕೇಳಿದರು.ಶಿವಲಿಂಗೇಗೌಡರನ್ನ ಬೆಳೆಸಿದ್ದೇನೆ ಅಂತಾರೆ. ಆಗ

ಪಕ್ಷದ ಮತಗಳು ಎಷ್ಟಿದ್ದವು ಈಗ 95 ಸಾವಿರಕ್ಕೆ ಮುಟ್ಟಿಸಿದ್ದೇನೆ ಎನ್ನುವ ಮೂಲಕ ಜೆಡಿಎಸ್ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.ನಾನು ಸಿದ್ದರಾಮಯ್ಯರನ್ನ ಹೊಗಳಿದ್ದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಯ್ತು.ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿ ಎಂದು ಹೋರಾಟ ಮಾಡಿದ್ರೆ ನಾಟಕ ಮಾಡಿದ ಅಂದ್ರು, ದೊಡ್ಡಗೌಡರ ಬಾಯಲ್ಲೇ ಆ ಮಾತು ಬಂದ ಮೇಲೆ ಈ ಪಕ್ಷದಲ್ಲಿ ಇರಕೂಡದು ಎಂದು ತೀರ್ಮಾನ ಮಾಡಿದೆ ಎಂದರು.