ಮತಗಟ್ಟೆ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ
ಹಾಸನ: ವಿಧಾನ ಸಭೆ ಚುನಾವಣಾ ಹಿನ್ನೆಲೆಯಲ್ಲಿ ಸಿಆರ್‌ಪಿ ಸೆಕ್ಷನ್ 144 ಅಡಿಯಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ 1997 ಮತಗಟ್ಟೆ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಮಧ್ಯರಾತ್ರಿ 12 ಗಂಟೆಯವೆರೆಗೆ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶಿಸಿದ್ದಾರೆ.
ಮತದಾನ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಮತದಾನ ಉದ್ದೇಶದಿಂದ ಮತದಾನ ಕಾರ್ಯಕ್ಕೆ ಬರುವ ಮತದಾರರನ್ನು ಹೊರತುಪಡಿಸಿ
ಇತರೆ ವ್ಯಕ್ತಿಗಳು ಸಕಾರಣವಿಲ್ಲದೆ ಐದು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಿದೆ.
ಯಾವುದೇ ಆಯುಧ ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ, ಲಾಠಿ ಅಥಾವ ದೈಹಿಕ ದಂಡನೆಗೆ ಕಾರಣವಾಗುವ ಅಥವಾ
ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ.
ಸಾರ್ವಜನಿಕರು ಯಾವುದೇ ಕೂಗುಗಳನ್ನು ಉಚ್ಚರಿಸುವುದು, ಚೇಷ್ಠೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಮಾಡುವುದು, ಪ್ರಕಟಣಾ ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ, ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಮತ್ತು ಆರಕ್ಷಕ ಸಿಬ್ಬಂದಿ ಕಾರ್ಯನಿರ್ವಹಣೆ ವೇಳೆ ಲಾಟಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.