ಹಾಸನ: ಪ್ರತಿ ತಿಂಗಳು ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಗೆ “35 ಸಾವಿರ ಲಂಚ” ಕೊಡಬೇಕಾ ಎಂದು ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಗಂಭೀರವಾಗಿ ಆರೋಪ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅಕ್ರಮ ಮದ್ಯ ಮತ್ತು ಲಂಚ ಪಡೆಯುತ್ತಿರುವ ಬಗ್ಗೆ ಗಂಭೀರವಾಗಿ ಅಬಕಾರಿ ಇಲಾಖೆ ಮೇಲೆ ಆರೋಪ ಮಾಡಿದ ಪ್ರಜ್ವಲ್ ರೇವಣ್ಣ ‘ಪ್ರತಿ ತಿಂಗಳು 35 ಸಾವಿರ ಲಂಚ ತಗೋತಿರಲ್ಲ,
ಅದನ್ನು ಕಡಿಮೆ ಮಾಡಿಸಿ ಅಂತ ಲಿಕ್ಕರ್ ಅಸೋಸಿಯೇಷನ್ ಅವರು ನನಗೆ ಒತ್ತಡ ಹಾಕುತ್ತಿದ್ದಾರೆ ಏನಿದು ನಿಮ್ಮದು ಇಲಾಖೆ..? ತಿಂಗಳಲ್ಲಿ ನಾಲ್ಕು ಪ್ರಕರಣ ದಾಖಲು ಮಾಡಿದ್ರೆ ಸಾಕಾ? ಪೊಲೀಸ್ ಇಲಾಖೆ ಪ್ರತಿ ತಿಂಗಳು 30ಕ್ಕೂ ಹೆಚ್ಚು ಪ್ರಕರಣವನ್ನು ದಾಖಲು ಮಾಡುತ್ತದೆ. ಅಂದರೆ ನಿಮ್ಮ ಕೆಲಸವನ್ನು ಪೊಲೀಸ್ ಇಲಾಖೆ ಯಾಕೆ ಮಾಡಬೇಕು? ನಿಮಗೆ ಸಹಾಯಕ್ಕೆ ಮಾತ್ರ ಅವರು ಇರೋದು ನಿಮ್ಮ ಕೆಲಸವನ್ನು ಅವರೇ ಮಾಡೋಕೆ ಅಲ್ಲ ಇರೋದು, ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.