ಮನೆ ಕುಸಿತ: ದಂಪತಿಗೆ ಗಾಯ
ಕೋಡಿ ಬಿದ್ದು ಬಿರುಕು ಬಿಟ್ಟ ಮೊಸಳೆ ಕೆರೆ ಏರಿ

0

ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಕೆಲವೆಡೆ ಬುಧವಾರ ರಾತ್ರಿ ಸಹ ಧಾರಾಕಾರವಾಗಿ ಮಳೆಯಾಗಿದ್ದರೆ, ಇನ್ನೂ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದೆ. ಉಳಿದ ಕಡೆ ಮೋಡಕವಿದ ವಾತಾವರಣ ಮುಂದುವರಿದಿದೆ.


ಇಬ್ಬರಿಗೆ ಗಾಯ:


ಎರಡು ವಾಸದ ಮನೆಗಳ ಗೋಡೆ ಕುಸಿದು ದಂಪತಿ ಗಾಯಗೊಂಡಿರುವ ಘಟನೆ ತಾಲೂಕಿನ ಅಂಕಪುರ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಗ್ರಾಮದ ನಾಗಯ್ಯ ಎಂಬುವರ ಮನೆಯ ಗೋಡೆ ಕುಸಿದು ಪಕ್ಕದ ಮನೆಯ ಮೇಲೆ ಬಿದ್ದಿದೆ.
ಮನೆಯಲ್ಲಿ ಮಲಗಿದ್ದ ಧರ್ಮ ಹಾಗೂ ಆತನ ಪತ್ನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಧರ್ಮ ಎಂಬುವರ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದರು.
108 ಅಂಬ್ಯುಲೆನ್ಸ್ಗೆ ಕರೆ ಮಾಡಿದರೂ, ಸುಮಾರು ಒಂದು ಗಂಟೆ ನಂತರ ಗ್ರಾಮಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇಬ್ಬರು ಗಾಯಾಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಒಂದು ಭಾಗದ ಗೋಡೆ ಧರಾಶಾಹಿಯಾಗಿರುವುದರಿಂದ ಮನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಕೆಲ ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಕೋಡಿ ಬಿದ್ದಿರುವ ಕೆರೆಗಳ ನೀರು ಹರಿಯುವುದು ನಿಂತಿಲ್ಲ. ಇದರಿಂದ ತೋಟ, ಜಮೀನು ಗದ್ದೆಗಳಲ್ಲಿ ನೀರು ಹಾಗೆಯೇ ನಿಂತಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ.


ಏರಿ ಒಡೆಯುವ ಆತಂಕ:


ಮತ್ತೊಂದೆಡೆ ಜೋರು ಮಳೆಗೆ ಹಾಸನ ತಾಲೂಕಿನ ಮೊಸಳೆ ಗ್ರಾಮದ ಕೆರೆ ಒಡೆಯುವ ಹಂತ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರೀ ಮಳೆಗೆ ಕೆರೆ ಏರಿ ಬಿರುಕು ಬಿಟ್ಟಿದೆ.
ಕೆರೆಯ ಏರಿ ಒಡೆಯುವ ಆತಂಕ ಹಿನ್ನೆಲೆ, ಏರಿ ಮೇಲೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಇನ್ನೂ ಮಳೆ ಹೆಚ್ಚಾಗಿ ಅಕಸ್ಮಾತ್ ಕೆರೆ ಏರಿ ಒಡೆದರೆ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶದ ಬೆಳೆ ಮುಳುಗಡೆ ಮಾತ್ರವಲ್ಲದೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
ಕೂಡಲೇ ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನಡೆಸಿ ಕೆರೆ ಏರಿ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನೂ ಕೆಲವೆಡೆ ಅನೇಕ ಕೆರೆಗಳು ಕೋಡಿ ಬಿದ್ದಿದ್ದು, ಸಂಪರ್ಕ ರಸ್ತೆಯ ಮೇಲೇ ನೀರು ರಭಸವಾಗಿ ಹರಿಯುತ್ತಿರುವುದು ಗ್ರಾಮಸ್ಥರು ಹಾಗೂ ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ತೊಂದರೆ ಪಡುವಂತಾಗಿದೆ.

ಮಳೆ ನಿಂತರೂ ತಪ್ಪದ ಸಮಸ್ಯೆ:


ಮತ್ತೆ ಕೆಲವೆಡೆ ಮಳೆ ನಿಂತರೂ ಸಮಸ್ಯೆ ತಪ್ಪಿಲ್ಲ. ತುಂಬಿರುವ ಕೆರೆಗಳಿಗೆ ಹೊರ ಹರಿವು ಅಧಿಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಬಾಗೂರು ಕೆರೆ ಭರ್ತಿಯಾಗಿ ಹೆಚ್ಚು ನೀರು ಹೊರ ಹರಿಯುತ್ತಿದೆ. ರಸ್ತೆ ಮೇಲೆ ಎರಡು ಅಡಿಗೂ ಹೆಚ್ಚು ಪ್ರಮಾಣದ ನೀರು ಹರಿಯುತ್ತಿರುವುದರಿಂದ ಬಾಗೂರು- ನುಗ್ಗೇಹಳ್ಳಿ ರಸ್ತೆ ಸಂಪರ್ಕ ತಾತ್ಕಾಲಿಕವಾಗಿ ಬಂದ್ ಆಗಿದೆ. ವೇಗವಾಗಿ ಹರಿಯುತ್ತಿರುವ ನೀರಿನ ಮಧ್ಯೆಯೇ ರಸ್ತೆ ದಾಟಲು ಹೋಗಿ ಬೈಕ್ ಸವಾರ ಅಪಾಯಕ್ಕೆ ಸಿಲುಕಿದ್ದ. ಇದನ್ನು ಅರಿತ ಸ್ಥಳೀಯರು, ಕೂಡಲೇ ಸವಾರನನ್ನು ರಕ್ಷಣೆ ಮಾಡಿದರು.

LEAVE A REPLY

Please enter your comment!
Please enter your name here