ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟಿಸುತ್ತಲೇ ಇದೆ.ಇದರಿಂದ ಭೂ ಕುಸಿತದಿಂದ ಕಾಫಿ ಮೊದಲಾದ ಬೆಳೆ, ಎಲ್ಲೆಂದರಲ್ಲಿ ನೀರುಹರಿದು ಭತ್ತ ಇತ್ಯಾದಿ ಬೆಳೆ ಹಾಳಾಗುವುದು ಮುಂದುವರಿದಿದೆ.ಗೊರೂರು ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವುದರಿಂದ ಹೇಮಾವತಿ ದಂಡೆಯಲ್ಲಿರುವ ಗಣಪತಿ ದೇವಾಲಯ ಮುಳುಗಿದೆ. ಜಲಾಶಯಕ್ಕೆ 43,083 ಕ್ಯುಸೆಕ್ ಒಳಹರಿವಿದ್ದು, 39,110 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಮುಳುಗಿದ ಜಲಾವೃತ:ಭಾರಿ ಮಳೆಗೆ ಸಕಲೇಶಪುರ ತಾಲೂಕಿನ ಜಂಬರಡಿ ಗ್ರಾಮದ ಬಳಿಯ ಕಿರುಸೇತುವೆ ಜಲಾವೃತವಾಗಿದೆ. ಚಿತ್ತನಹಳ್ಳ ಉಕ್ಕಿ ಹರಿದು ರಸ್ತೆ ಮೇಲೆ ನೀರು ಹರಿಯುತ್ತಿದೆ.ನಿನ್ನೆ ನಡೆದಾಡಲು ದಾರಿ ಇಲ್ಲದೆ, ಶಾಲಾ ಮಕ್ಕಳನ್ನು ಜೆಸಿಬಿ ಮೂಲಕ ರಸ್ತೆ ದಾಟಿಸಲಾಗಿತ್ತು. ಇಂದೂ ಕೂಡ ಪ್ರವಾಹ ಮುಂದುವರಿದಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದೆ. ಇದರಿಂದ ವೆಂಕಟಹಳ್ಳಿ, ಹಾನುಬಾಳು ಮತ್ತು ಜಂಬರಡಿ, ರಾಗಿಗುಡ್ಡ ನಡುವೆ ಸಂಚರಿಸಲು ಜನರು ಪರದಾಡುವಂತಾಗಿದೆ.
ಜಮೀನು ಜಲಾವೃತ:ಕಳೆದ ಎರಡು ವಾರಗಳಿಂದ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಸಕಲೇಶಪುರ ತಾಲೂಕಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅರೆಕೆರೆ ಗ್ರಾಮದಲ್ಲಿ ದೊಡ್ಡಹಳ್ಳ ಉಕ್ಕಿ ರೈತರ ಜಮೀನಿನ ಮೇಲೆ ಹರಿಯುತ್ತಿದ್ದು, ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಸಸಿ ಕೊಚ್ಚಿ ಹೋಗಿದೆ. ಅಳಿದುಳಿದ ಭತ್ತದ ಸಸಿ ಕರಗಲಾರಂಭಿಸಿವೆ. ಭತ್ತದ ಗದ್ದೆಗಳು ಕೆರೆಯಂತೆ ಕಾಣುತ್ತಿದ್ದು, ವರ್ಷದ ಬೆಳೆ ಆರಂಭದಲ್ಲೇ ನೀರು ಪಾಲಾಗಿದೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಾಫಿ ತೋಟ ಕುಸಿತ:ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಮಲ್ಲಪ್ಪ ಎಂಬುವರ ಕಾಫಿ ತೋಟದಲ್ಲಿ ಕಳೆದ ರಾತ್ರಿ ಭೂಕುಸಿತವಾಗಿದ್ದು, ಇಪ್ಪತ್ತು ವರ್ಷದ ಕಾಫಿ ಗಿಡಗಳು, ಅಡಕೆ, ಬಾಳೆ, ಮೆಣಸು, ಹಲಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇನ್ನೂ ಸಹ ಭೂಕುಸಿತವಾಗುತ್ತಿದ್ದು, ಆತಂಕದಿAದ ಕಾಫಿ ತೋಟದಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆ ಫಸಲು ಬಿಡುವ ವೇಳೆಗೆ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ. ಇದೇ ಗ್ರಾಮದಲ್ಲಿ ನಾಟಿ ಮಾಡಿದ್ದ ಸುಮಾರು 40 ಎಕರೆ ಗದ್ದೆ ಜಲಾವೃತವಾಗಿದ್ದು, ಮತ್ತೆ ಕೆಲವು ಗದ್ದೆ ಕೊಚ್ಚಿ ಹೋಗಿವೆ.