ಗೌಡರ ಕುಟುಂಬ ಒಡೆಯಲು ಸಾಧ್ಯವಿಲ್ಲ: ಸುಮಲತಾ ವಿರುದ್ಧ ರೇವಣ್ಣ ಆಕ್ರೋಶ

0

ಹಾಸನ: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬದುಕಿರುವವರೆಗೂ ನಮ್ಮ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಸಂಸ್ಕೃತಿ ಕಲಿಯಬೇಕಿಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜ್ವಲ್ ರೇವಣ್ಣ ಅವರನ್ನು ನೋಡಿ ಎಚ್.ಡಿ.ಕುಮಾರಸ್ವಾಮಿ ಸಂಸ್ಕಾರ ಕಲಿಯಲಿ’ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ‘ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ನಡೆಸಲಿ, ಸರ್ಕಾರದ ಹಣ ಲೂಟಿ ಮಾಡುತ್ತಿರುವವರನ್ನು ಬಲಿ ಹಾಕಲಿ. ಅದು ಬಿಟ್ಟು ಕುಮಾರಸ್ವಾಮಿ ಹಣ ಹೊಡೆಯುತ್ತಾರೆ ಅಂದ್ರೆ ಏನರ್ಥ, ಗೌಡರ ಕುಟುಂಬ ಯಾವುದಾದರೂ ಶಾಲೆ, ಕಾಲೇಜು ಮತ್ತು ಕ್ರಷರ್ ನಡೆಸುತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಲ್ಲ. ಅಂಬರೀಶ್ ಮೃತಪಟ್ಟಾಗ ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೇಗೆ ನಡೆದುಕೊಂಡರು ಎಂಬುದು ಗೊತ್ತು. ವಿಷ್ಣುವರ್ಧನ್ ಸತ್ತಾಗ ಯಾರು ಹೇಗೆ ನಡೆದುಕೊಂಡರು ಎಂಬುದನ್ನು ನೋಡಿದ್ದೇನೆ. ಒಂದು ಕುಟುಂಬದಿಂದ ಪಕ್ಷ ಉಳಿಯುವುದಿಲ್ಲ. ಕಾರ್ಯಕರ್ತರಿಗೆ ಪಕ್ಷ ಉಳಿಸಿಕೊಳ್ಳುವುದು ಗೊತ್ತು. ಪ್ರಜ್ವಲ್ ಎತ್ತಿ ಕಟ್ಟಿ ಕುಟುಂಬವನ್ನು ಹೊಡೆದಾಡಿಸುವ ಕಾರ್ಯಕ್ರಮ ಯಾರಿಂದಲೂ ಆಗಲ್ಲ’ ಎಂದರು.

‘ಮಾಸ್ಟರ್ ಪ್ಲಾನ್ ಪ್ರಕಾರ ಹಾಸನ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರಕ್ಕೆ ಹತ್ತು ದಿನ ಗಡುವು ನೀಡಲಾಗುವುದು. ನಂತರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಎಚ್.ಡಿ.ದೇವೇಗೌಡರು ಎರಡು ದಿನ ಉಪವಾಸ ಸತ್ಯಾಗ್ರಾಹ ನಡೆಸುವರು’ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here