ಹಾಸನದಲ್ಲಿ ನಾನು ನೇತ್ರದಾನ ಮಾಡಬೇಕು ಹಾಗಾದರೆ ಮಾಹಿತಿ ಇಲ್ಲಿದೆ ನೋಡಿ

0

ನೇತ್ರದಾನ ಮಾಡಿ: ಸಾವಿನ ನಂತರವೂ ಅಂದಕಾರದಲ್ಲಿರುವರ ಬಾಳಲ್ಲಿ ಬೆಳಕಾಗಿ

ಹಾಸನ : ಸಕಲ ಜೀವನದಲ್ಲಿ ಜೀವ ಜಂತುಗಳಿಗೂ ದೃಷ್ಟಿ ಅತಿ ಮುಖ್ಯ, ಅದರಲ್ಲಿಯೂ ಜಗತ್ತನ್ನೇ ಆಳುತ್ತಿರುವ ಮಾನವನಿಗೆ ಶೇ 70 ರಷ್ಟು ಗ್ರಹಿಕೆ ಆರೋಗ್ಯ ಪೂರ್ಣ ಬದುಕಿಗೆ ಕಣ್ಣಿನ ಮೂಲಕವೇ ಆಗುತ್ತದೆ ಜೊತೆಗೆ ಆ ಮೂಲಕವೇ ಬುದ್ಧಿಶಕ್ತಿಯ ವಿಕಾಸವೂ ಆಗುತ್ತದೆ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ದೃಷ್ಟಿ ಹೀನರು ಏನನ್ನೂ ನೋಡಲಾಗದೆ ಅಸಹಾಯಕತೆಯಿಂದ ದಿನ ಕಳೆಯುತ್ತಿದ್ದಾರೆ. ಅಂತಹವರ ಪಾಲಿಗೆ ನೇತ್ರದಾನ ಹೊಸ ಬದುಕನ್ನು ನೀಡಬಲ್ಲದು.

ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿಗೂ ಹೆಚ್ಚು ಜನರು ಕಾರ್ನಿಯ ಅಂಧತ್ವದಿಂದ ಬಳಲುತ್ತಿದ್ದಾರೆ.  ನವೀನ ನೇತ್ರ ಶಸ್ತ್ರ ಚಿಕಿತ್ಸಾ ವಿಜ್ಞಾನದ ಅದ್ಭುತಗಳಲ್ಲೊಂದಾದ ಹಾಗೂ ಏಕೈಕ ಮತ್ತು ಪರಿಣಾಮಕಾರಿಯಾದ ವಿಧಾನವಾಗಿರುವ ಕಾರ್ನಿಯಾ ಗ್ರಾಫ್ಟಿಂಗ್ ಮೂಲಕ  ಇಂತಹವರಿಗೆ ಮರುದೃಷ್ಟಿ ಪಡೆಯುವ ಸುವರ್ಣವಕಾಶವಿದೆ ಆದರೆ ಇದಕ್ಕೆ  ನೇತ್ರದಾನಿಗಳು ಸಿಗುವುದು ಮುಖ್ಯ.
18 ವರ್ಷ ಮೀರಿದ ಯಾವುದೇ ವ್ಯಕ್ತಿ (ಅಂಧರು ಸಹ ಕಾರ್ನಿಯ ಅಂದತ್ವ ಹೊರತುಪಡಿಸಿ) ನೇತ್ರದಾನ ನೋಂದಣಿ ಮಾಡಿ ತಮ್ಮ ಮರಣದ ಬಳಿಕ ನೇತ್ರಗಳನ್ನು ದೃಷ್ಟಿ ಲಾಭ ಕಾರ್ಯಕ್ಕೆ ಕಾಣಿಕೆಯಾಗಿ ನೀಡಬಹುದು, ಯಾವುದೇ ಮರಣ ನಿಮ್ಮ ಗಮನಕ್ಕೆ ಬಂದಾಗ ಅವರ ಬಂಧುಗಳ ಮನಸ್ಸನ್ನು ಒಲಿಸಿ ಮೃತರ ನೇತ್ರದಾನಕ್ಕೆ ಸಮ್ಮತಿ ಸಿಕ್ಕಿದೊಡನೆ ವಿಳಂಬ ಮಾಡದೆ ಹತ್ತಿರದ ನೇತ್ರ ಭಂಡಾರಕ್ಕೆ ದೂರವಾಣಿ ಅಥವಾ ಖುದ್ದಾಗಿ ತಿಳಿಸಬಹುದಾಗಿದೆ.
ಕಣ್ಣಿನ ಮುಂಭಾಗದಲ್ಲಿರುವ ಕಾರ್ನಿಯ ಭಾಗವು ಪಾರದರ್ಶಕವಾಗಿದ್ದು,  ಆರೋಗ್ಯಕರವಾಗಿದ್ದರೆ ಸಾಕು ನೇತ್ರದಾನಕ್ಕೆ ಮೃತರ ಲಿಂಗ, ಶೈವಾವಸ್ಥೆ ವೃದ್ಧಾಪ್ಯ, ಕನ್ನಡಕ ಧಾರಣೆ, ಸಕ್ಕರೆ ರೋಗ, ದೇಹದ ಅಥವಾ ಕಣ್ಣಿನ ತೊಂದರೆ ಇತರೆ ಖಂಡಿತ ಅಡ್ಡಿ ಬರುವುದಿಲ್ಲ,
ಮರಣ ಸಂಭವಿಸಿದ ಆರು ಗಂಟೆಗಳ ಒಳಗೆ ನೇತ್ರಗಳನ್ನು ಸಂಗ್ರಹಿಸಬೇಕು: ನೇತ್ರ ಸಂಗ್ರಹಣೆಯಿಂದ ಮೃತರ ಮುಖ ಅಂದಗೆಡುವುದಿಲ್ಲ ಕಣ್ಣು ರೆಪ್ಪೆಗಳನ್ನು ಕುಶಲತೆಯಿಂದ ತೆಗೆದು ನಂತರ ಕಣ್ಣನ್ನು ವೈದ್ಯರು ಮುಚ್ಚುತ್ತಾರೆ. ನೇತ್ರ ಸಂಗ್ರಹಣೆಯನ್ನು ಕೇವಲ 20 ಅಥವಾ 25 ನಿಮಿಷಗಳಲ್ಲಿ ಮಾಡಲಾಗುವುದು. ನೇತ್ರ ಭಂಡಾರದ ತಂಡವು ದೇಹವಿರುವ ಸ್ಥಳಕ್ಕೆ (ಮನೆ, ಆಸ್ಪತ್ರೆ, ಚಿತಾಗಾರ, ಇತರೆ) ಯಾವ ವೇಳೆಯಲ್ಲೂ (ರಾತ್ರಿ ಅಥವಾ ಹಗಲು ಧಾವಿಸಿ ನೇತ್ರ ಸಂಗ್ರಹಣೆ ಮಾಡುತ್ತದೆ, ಕಣ್ಣು ಸಂಗ್ರಹಣಾ ಸೇವೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಕಣ್ಣು ಕಸಿ ಶಸ್ತ್ರಚಿಕಿತ್ಸೆಯಿಂದ ಕಾರ್ನಿಯಾ ಅಂಧರಿಗೆ ಮಾತ್ರ ಮರುದೃಷ್ಟಿ ನೀಡಬಹುದು ಬೇರೆ ಅಂಧರಿಗಲ್ಲ.
ನೇತ್ರದಾನದಲ್ಲಿ ಇನ್ನೊಂದು ಕುತೂಹಲಕಾರಿ ವಿಷಯ ಎಂದರೆ 80 ವರ್ಷದ ವ್ಯಕ್ತಿಯ ನೇತ್ರದಾನ ಚಿಕ್ಕ ಮಕ್ಕಳಿಗೂ ದೃಷ್ಟಿ ನೀಡಬಲ್ಲದು ಅದೇ ರೀತಿ ಚಿಕ್ಕ ಮಕ್ಕಳ ನೇತ್ರದಾನ 80 ವರ್ಷದ ವಯೋವೃದ್ದರಿಗೆ ಹೊಸ ಬೆಳಕು ನೀಡಬಹುದು.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು, ವಿಷ ಸೇವಿಸಿದವರ, ವಿಷದ ಹಾವು ಕಚ್ಚಿ ಮೃತಪಟ್ಟವರು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರ ಕಣ್ಣುಗಳನ್ನು ನೇತ್ರದಾನಕ್ಕೆ ಬಳಸುವುದಿಲ್ಲ.
ನೇತ್ರ ಭಂಡಾರದಲ್ಲಿ ನೊಂದಾಯಿಸಿದ ವ್ಯಕ್ತಿಗಳು ಪರಸ್ಥಳ ಅಥವಾ ಪರದೇಶದಲ್ಲಿ ಮರಣಿಸಿದ ಅವರ ನೇತ್ರಗಳನ್ನು ಸ್ಥಳೀಯ ನೇತ್ರ ಭಂಡಾರಗಳಿಗೆ ನೀಡಬಹುದು ನಿಮ್ಮ ನೋಂದಣಿಗೆ ದಯವಿಟ್ಟು ಒಂದು ನಿರ್ದಿಷ್ಟ ಅರ್ಜಿ ಪತ್ರ ಸಲ್ಲಿಸಿ ನೇತ್ರ ಭಂಡಾರದಲ್ಲಿ ದಾಖಲಿಸಬಹುದು. ಇದರಿಂದ ಸತ್ತ ನಂತರವೂ ಜಗತ್ತು ನೋಡುವ ಅಪರೂಪದ ಅವಕಾಶ ದೊರೆಯುತ್ತದೆ.
ಹತ್ತಾರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಈ ಬಗ್ಗೆ ಅರಿವು ಮೂಡಿಸಿ ಮೃತರಿಂದ ನೇತ್ರವನ್ನು ಪಡೆದು ಅಂಧರ ಬಾಳಿಗೆ ಆನಂದವನ್ನು ನೀಡುತ್ತಿವೆ.
ಹಾಸನದಲ್ಲಿ ಜಿಲ್ಲೆಯ ಮೊದಲ ನೇತ್ರ ತಜ್ಞರೆಂದೇ ಖ್ಯಾತರಾದ ಡಾ|| ಶಂಕರ್ ಅವರು ತಮ್ಮ ಸ್ನೇಹಿತರೊಡಗೂಡಿ 1990 ರಲ್ಲೇ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಾಸವಿ ಐ ಬ್ಯಾಂಕ್ ಎಂಬ ನೇತ್ರ ಭಂಡಾರ ಪ್ರಾರಂಭಿಸಿ ನೂರಾರು ದೃಷ್ಟಿ ಹೀನರ ಪಾಲಿಗೆ ಬೆಳಕಾಗಿದ್ದು, ಸ್ಮರಣೀಯ. ಈ ಸಂಸ್ಥೆ ಮೂಲಕ ಈವರೆಗೆ ಸುಮಾರು 180 ಜೊತೆ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರು ಲಯನ್ಸ್ ಆಸ್ಪತ್ರೆಗೆ ಕಳುಹಿಸಿ ಸಕಾಲದಲ್ಲಿ ಶಸ್ತ್ರ ಚಿಕಿತ್ಸೆಯಾಗುವಂತೆ ನೋಡಿಕೊಂಡಿದ್ದಾರೆ. ಡಾ|| ಶಂಕರ್ ಅವರು ಮೃತ ದಾನಿಗಳಿಂದ ಸ್ವತಃ ತಾವೇ 126 ಜೊತೆ ಕಣ್ಣುಗಳನ್ನು ತೆಗೆದು ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಿಗೆ ಕಳುಹಿಸಿ ಕಾರ್ನಿಯ ಗ್ರಾಫ್ಟಿಂಗ್‍ಗೆ ನೆರವಾಗಿದ್ದಾರೆ.

ಇದೇ ರೀತಿ ಡಾ|| ಶಂಕರ್ ಅವರು ಬ್ಯಾಂಕ್ ಸರ್ಕಾರೇತರ ಸಂಸ್ಥೆಯೊಂದಿಗೆ 600 ಕ್ಕೂ ಹೆಚ್ಚು ಸದಸ್ಯರನ್ನು ನೇತ್ರದಾನಕ್ಕೆ ನೋಂದಾಯಿಸಿರುತ್ತಾರೆ. ಇದಲ್ಲದೆ ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ 50ಕ್ಕೂ ಹೆಚ್ಚು ಉಚಿತ ಶಿಬಿರಗಳನ್ನು ನಡೆಸಿ ಶಸ್ತ್ರ ಚಿಕಿತ್ಸೆ ಮೂಲಕ ನೂರಾರು ಮಂದಿಗೆ ದೃಷ್ಟಿ ಒದಗಿಸಿಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದೇ ರೀತಿ ಇತ್ತೀಚೆಗೆ ಹಾಸನದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾದ ನಂತರ ಹಿಮ್ಸ್ ನಲ್ಲಿಯೇ ನೇತ್ರದಾನಿಗಳಿಂದ ಕಣ್ಣು ಪಡೆದು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.

ಹಿಮ್ಸ್ ಆಸ್ಪತ್ರೆ 2015 ರಿಂದ ಇದುವರೆಗೆ 242 ಕಣ್ಣುಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 203 ಹಿಮ್ಸ್ ಬಳಕೆ ಮಾಡಿಕೊಂಡಿದ್ದು, ಇನ್ನುಳಿದ 39 ಕಣ್ಣುಗಳನ್ನು ಮಿಂಟೋಗೆ ಕಳುಹಿಸಿಕೊಡಲಾಗಿದೆ.

ನೇತ್ರದಾನ ಉಯಿಲು ಮಾಡಲು ಇಚ್ಛೆಪಟ್ಟವರು ಸರ್ಕಾರಿ ನೇತ್ರ ಬ್ಯಾಂಕ್‍ನಲ್ಲಿ ನೊಂದಾಯಿಸಬಹುದು  ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಹಿಮ್ಸ್ ಬೋಧಕ ಆಸ್ಪತ್ರೆಯ ನೇತ್ರ ವಿಭಾಗದ ನೇತ್ರ ಭಂಡಾರದಲ್ಲಿ (ಮೊ.9900860044)ಗೆ ನೊಂದಾಯಿಸಬಹುದು.

ಕನಿಷ್ಠ ಪಕ್ಷ 5 ರೂ. ನಗದು/ಎಂ.ಓ./ ಡಿಡಿ ಮೂಲಕ ವಾಸವಿ ಅಥವಾ ಯಾವುದೇ ನೇತ್ರ ಭಂಡಾರಕ್ಕೆ ಕಳುಹಿಸಿಯು ನೊಂದಾಯಿಸಬಹುದು. ಇದೇ ರೀತಿ ಹಾಸನದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ವಾಸವಿ  ನೇತ್ರ ಭಂಡಾರಕ್ಕೆ ಡಾ|| ಎ.ಆರ್ ಶಂಕರ್ ಸಿ.ಎಸ್.ಐ ಬಿಲ್ಡಿಂಗ್, ಬಸ್‍ಸ್ಟ್ಯಾಂಡ್ ರಸ್ತೆ, ಹಾಸನ. 573201 ಈ ಹೆಸರಿನಲ್ಲಿ ಬರೆದು ತುಂಬಿದ ಅರ್ಜಿ ಪತ್ರ ಜೊತೆ ಕಳುಹಿಸಿದಾಗ ನೊಂದಣಿ ಮಾಡಿ ದಾಖಲೆ ಕಳಿಸಲಾಗುತ್ತದೆ. ಎಂದು ಡಾ|| ಶಂಕರ್ ಅವರು ಕೋರಿದ್ದಾರೆ.

ಸತ್ತ ನಂತರ ವ್ಯರ್ಥವಾಗಿ ಪ್ರಕೃತಿಯಲ್ಲಿ ಲೀನವಾಗುವ ಕಣ್ಣುಗಳನ್ನು ದಾನ ಮಾಡಿದಲ್ಲಿ ಅದು ಇಬ್ಬರಿಗೆ ದೃಷ್ಟಿ ನೀಡಲಿದೆ ಹಾಗಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಸತ್ತ ನಂತರವೂ ಜಗತ್ತನ್ನು ನೋಡುವ ಅವಕಾಶ ಗಳಿಸೋಣ.

ನೇತ್ರದಾನಕ್ಕೆ ನಿಮ್ಮ ಹೆಸರನ್ನು ಇಂದೇ ನೋಂದಾಯಿಸಿ ಹಾಗೂ ಮೃತ ಬಂಧುಗಳ ಕಣ್ಣು ದಾನ ಮಾಡಿ ಅನಿವರ್ಚನೀಯ ಆತ್ಮಾನಂದವನ್ನು ಅನುಭವಿಸಿರಿ.

ನೇತ್ರದಾನದ ಮೂಲಕ  ಅಂದರಿಗೆ  ಬೆಳಕಾಗಲು ಕರೆ

ನೇತ್ರದಾನ ಮಾಡುವುದರ ಮೂಲಕ ದೃಷ್ಠಿ ರಹಿತರ ಬಾಳಿಗೆ ಬೆಳಕಾಗಬೇಕು ಎಂದು ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್ ಅವರು ಕರೆ ನೀಡಿದ್ದಾರೆ.

ನಗರದ ಹಿಮ್ಸ್ ಆಸ್ಪತ್ರೆಯಲ್ಲಿಂದು 36 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ದೇಶದಲ್ಲಿ ಸುಮಾರು 25 ಲಕ್ಷ ಜನರು ಕಾರ್ನಿಯಾವಿಲ್ಲದೆ ಬಳಲುತ್ತಿದ್ದು, ಪ್ರತಿಯೊಬ್ಬರು ನೋಂದಣಿ ಮಾಡಿಸುವ ಮೂಲಕ ಮರಣದ ನಂತರ ತಮ್ಮ ಕಣ್ಣುಗಳನ್ನ  ದಾನ ಮಾಡಿ  ದೃಷ್ಠಿಹೀನರು ಜಗತ್ತನ್ನು ನೋಡುವ ಪುಣ್ಯದ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಅವರು ಹೇಳಿದರು.

ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ ಮೊದಲು ಕಣ್ಣನ್ನು  ದಾನ ಮಾಡಲು ಕುಟುಂಬದವರು ಮುಂದಾಗಬೇಕು ಎಂದು ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್ ಅವರು  ನೇತ್ರದಾನದ ಬಗ್ಗೆ ಸಾರ್ವಜನಿಕರು ಹಾಗೂ  ಸಮುದಾಯದವರಲ್ಲಿ  ಅರಿವು ಮೂಡಿಸಿ ನೇತ್ರದಾನದಂತಹ  ಮಹತ್ಕಾರ್ಯದಲ್ಲಿ  ಹೆಚ್ಚಿನ ಜನರು ಕೈಜೋಡಿಸಬೇಕು ಎಂದರು. 

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಅವರು ಮಾತನಾಡಿ  ದೇಶದಲ್ಲಿ ಸಾಕಷ್ಟು ಜನರು ಅಂದತ್ವದಿಂದ  ಬಳಲುತ್ತಿದ್ದು,  ಅವರಿಗೆ ಕಣ್ಣುಗಳನ್ನು ದೊರಕಿಸುವ ನಿಟ್ಟಿನಲ್ಲಿ ನೇತ್ರದಾನ ಕಾರ್ಯದಲ್ಲಿ ತೊಡಗಬೇಕು ಎಂದ ಅವರು  ಕಣ್ಣನ್ನು ತೆಗೆದುಕೊಳ್ಳುವ ವೇಳೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.

ಹಿಮ್ಸ್ ಆಡಳಿತಾಧಿಕಾರಿ  ಗಿರೀಶ್ ನಂದನ್ ಅವರು ಮಾತನಾಡಿ ಮನುಷ್ಯ ಮರಣ ಹೊಂದಿದ 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬೇಕು. ಕಣ್ಣಿನ ದಾನ ಮಾಡಿದರೆ ಮತ್ತೊಬ್ಬರನ್ನು ಅಂಧತ್ವದಿಂದ ಹೊರತರಬಹುದು  ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ  ಕೇಂದ್ರಗಳಲ್ಲಿ ನೇತ್ರದಾನ ಕುರಿತು ಜಾಗೃತಿ ಮೂಡಿಸಿ ಸಾರ್ವಜನಿಕರು ಕಣ್ಣುಗಳನ್ನು ಸ್ವ-ಇಚ್ಛೆಯಿಂದ  ದಾನ ಮಾಡಲು ಮುಂದಾಗುತ್ತಾರೆ ಎಂದರು.  

ಜಿಲ್ಲಾ ಅಂಧತ್ವ  ನಿಯಂತ್ರಣಾಧಿಕಾರಿ ಡಾ|| ವೇಣುಗೋಪಾಲ್ ಅವರು ಮಾತನಾಡಿ ಪ್ರತಿಯೊಂದು ಆಸ್ಪತ್ರೆಗಳಲ್ಲಿ ನೇತ್ರ ತಜ್ಞರಿದ್ದು  ನೇತ್ರ ದಾನಿಗಳು ಕರೆ ಮಾಡಿದಾಗ ಕಣ್ಣನ್ನು ಪಡೆಯಲು ಸಕಾಲದಲ್ಲಿ ಆಗಮಿಸುವರು ಎಂದ ಅವರು ಇಂತಹ ಕಾರ್ಯಕ್ರಮಗಳು ಪ್ರಾಥಮಿಕ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಇದರ ಸದುಪಯೋಗವನ್ನೂ ಎಲ್ಲರೂ ಪಡೆದುಕೊಳ್ಳುವಂತಗಾಬೇಕು  ಎಂದು ಅವರು ಹೇಳಿದರು. 

ನೇತ್ರ ತಜ್ಞರಾದ ಡಾ|| ಶ್ರೀಧರ್ ಅವರು ಮಾತನಾಡಿ ಆನ್‍ಲೈನ್ ಮುಖಾಂತರ ನೇತ್ರದಾನಕ್ಕೆ ನೋಂದಣಿಯಾಗುವುದು  ಹಾಗೂ ನೇತ್ರದಾನದ ಮಹತ್ವ, ಕಾರ್ನಿಯಾಗೆ ಸಂಬಂಧಿಸಿದಂತೆ  ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಟ್ಟರು, ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9900860044 ಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಇದೇ ವೇಳೆ:- ನೇತ್ರದಾನ ಮಾಡುವವರಿಗೆ ಪ್ರಮಾಣ ಪತ್ರಗಳನ್ನ ನೀಡುವ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದರು.  

ಕಾರ್ಯಕ್ರಮದಲ್ಲಿ ಹಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|| ನಾಗೇಶ್,  ನೇತ್ರಾ ವಿಭಾಗ ಮುಖ್ಯಸ್ಥರಾದ  ಡಾ|| ಕವಿತಾ ವಿ.ಸಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ||  ಹರೀಶ್ ಎಂ. ಕೆ. ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here