Hassan

ಸಂತ ಜೋಸೆಫರ ಶಾಲೆಯ ಮಕ್ಕಳ ಸೌಹಾರ್ದತೆಯ ನಡೆ ಶ್ಲಾಘನೀಯ :ಮಂದಿರ, ಮಸೀದಿ, ಚರ್ಚ್ ದರ್ಶನ

By

September 22, 2022

ಸಂತ ಜೋಸೆಫರ  ಶಾಲೆಯ ಮಕ್ಕಳ:ಮಂದಿರ, ಮಸೀದಿ, ಚರ್ಚ್ ದರ್ಶನ

* ಎಲ್ಲರೂ ಒಂದೆ,ಸೌಹಾರ್ದದಿಂದ ಬದುಕಬೇಕು* ಸಾಯಿ ಮಂದಿರದಲ್ಲಿ ಭಜನೆ* ಚರ್ಚ್ ನಲ್ಲಿ ಧರ್ಮದ ಮಾಹಿತಿ* ಮಸೀದಿಯಲ್ಲಿ  ಅಜಾನ್ ವಿಶೇಷತೆ

ಹಾಸನ : ಎಲ್ಲಾ ಧರ್ಮಗಳ ಸಾರ ಹಾಗೂ ಆಚರಣೆಗಳನ್ನು ತಿಳಿಯುವ ಉದ್ದೇಶದಿಂದ ಹಾಸನ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮಂಗಳವಾರ  ದೇವಾಲಯ, ಮಸೀದಿ ಹಾಗೂ ಚರ್ಚೆಗೆ ಭೇಟಿ ನೀಡಿದರು.

ಐದು, ಆರು ಹಾಗೂ ಏಳನ್ನು ತರಗತಿಯಲ್ಲಿ ಓದುತ್ತಿರುವ 160 ಮಕ್ಕಳು ಶಾಲೆಯ ಶಿಕ್ಷಕ ಸಿಬ್ಬಂದಿ ಜೊತೆ ಸಾಲಗಾಮೆ ರಸ್ತೆಯ ಸಾಯಿಬಾಬ ಮಂದಿರ, ಎನ್.ಆರ್. ವೃತ್ತದಲ್ಲಿರುವ ಸಂತ ಅಂತೋಣಿ ಚರ್ಚ್ ಹಾಗೂ ಪೆನ್‌ಶನ್ ಮೊಹಲ್ಲಾದ ಮಸೀದಿಗೆ ಭೇಟಿಕೊಟ್ಟರು.

ಸಾಯಿ ಮಂದಿರದಲ್ಲಿ ಮಕ್ಕಳು ಭಜನೆ ಹಾಗೂ ಧ್ಯಾನದಲ್ಲಿ ಪಾಲ್ಗೊಂಡರು.  ಚರ್ಚ್ ನಲ್ಲಿ ಫಾ. ನೆಲ್ಸನ್ ಅವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಕ್ಕಳಿಗೆ ತಿಳಿಸಿದರು.  ಮಸೀದಿಯಲ್ಲಿ ಇಮಾಮ್ ನಜೀರ್ ಅವರು ಅಜಾನ್ ವಿಶೇಷತೆ ಬಗ್ಗೆ ತಿಳಿಸಿದರು.

ಪ್ರಾರ್ಥನಾ ಮಂದಿರಗಳಲ್ಲಿ ಮಕ್ಕಳು ಕುತೂಹಲದಿಂದ ಧರ್ಮಗುರುಗಳ ಜೊತೆ ಸಂವಾದ ನಡೆಸಿದರು.

ಅಂಧಮಕ್ಕಳ ಶಾಲೆ ಭೇಟಿ :  ಎಂ. ಕೃಷ್ಣ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳ ಜೊತೆ ಸಂವಾದ ನಡೆಸಿದರು.  ಕಣ್ಣಿಲ್ಲದ ಮಕ್ಕಳ ಜೀವನ, ಕಲಿಕೆ ವಿಧಾನ ತಿಳಿಯಲು ಈ ಭೇಟಿ ಸಹಕಾರಿಯಾಯಿತು. ಜೊತೆಗೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಭೇಟಿ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಸಿರಿಲ್ ಕಾಸ್ತಲಿನೊ ಅವರು ವಿವಿಧ ಧರ್ಮಗಳ ಸಾರ, ಮಹತ್ವ ಹಾಗೂ ಆಚರಣೆಗಳನ್ನು ಮಕ್ಕಳಿಗೆ ತಿಳಿಸಿ, ಎಲ್ಲರೂ ಒಂದು ಎಂದು ತಿಳಿದು, ಸೌಹಾರ್ದದಿಂದ ಬದುಕಬೇಕು ಎಂದು ತಿಳಿಸಿದರು.