ಸುನಾದ ಲಹರಿ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಕವಾಗಲಿ

0

” ಸಂಗೀತದ ಮಾಂತ್ರಿಕಶಕ್ತಿ ಅಂತಃಶಕ್ತಿಯ ವರ್ಧನೆಗೆ ಪೂರಕ ” -ಜಿಲ್ಲಾಧಿಕಾರಿ ಆರ್. ಗಿರೀಶ್

ಹಾಸನ : ಹೌದು ಸಂಗೀತಕ್ಕೊಂದು ಮಾಂತ್ರಿಕಶಕ್ತಿಯಿದೆ. ಅದು ಮನಸ್ಸಿಗೆ ಶಾಂತಿಯನ್ನೂ, ದೃಢತೆಯನ್ನೂ ನೀಡುವಂತಹ ಕಲೆ. ಅಂತಃಶಕ್ತಿಯ ವರ್ಧನೆಗೆ ಪೂರಕ ಎಂದು ಹಾಸನದ ಜಿಲ್ಲಾಧಿಕಾರಿ ಆರ್. ಗಿರೀಶ್ ಅಭಿಪ್ರಾಯಪಟ್ಟರು.

ಅವರು ನಗರದಲ್ಲಿ ವಿದುಷಿ ರಾಧಾಕೃಷ್ಣಸ್ವರೂಪ್ ಅವರು ಆರಂಭಿಸುತ್ತಿರುವ ಸುನಾದ ಸಂಗೀತ ಮತ್ತು ಗಮಕ ಶಾಲೆಯ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಗೀತ ಶಾಲೆಗಳು ಬಹಳಷ್ಟಿವೆ. ಗಮಕಶಾಲೆಗಳು ಕಡಿಮೆ. ಸಂಗೀತದ ಜೊತೆಗೆ ಗಮಕಕಲೆಯನ್ನು ಕಲಿಸುವುದಕ್ಕೂ ಪೂರಕ ಪ್ರೋತ್ಸಾಹ ನೀಡುತ್ತಿರುವುದು ಮತ್ತು ಸಣ್ಣ-ಸಣ್ಣ ಸಂಸ್ಥೆಗಳು ಉತ್ಸಾಹ ತೋರಿಸುತ್ತಿರುವುದು ಅಭಿನಂದನೀಯ ವಿಷಯ. ಈ ಉತ್ಸಾಹವನ್ನು ನಿರಂತರ ಕಾಯ್ದುಕೊಂಡು ಸುನಾದವನ್ನು ಪಸರಿಸಲಿ ಎಂದು ಹಾರೈಸಿದರು.

ಮತ್ತೋರ್ವ ಮುಖ್ಯ ಅತಿಥಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಭಾನುಪ್ರಕಾಶಶರ್ಮಾ ಅವರು ಸಂಗೀತ, ಗಮಕ ಮತ್ತು ವೇದ ಹಾಗೂ ಲಲಿತಕಲೆಗಳು ನಿತ್ಯ ಅಭ್ಯಾಸದಲ್ಲಿ ಇದ್ದರೆ ಮಾತ್ರವೇ ಒಲಿಯುವಂಥಾದ್ದು. ಅಂತಹ ನಿರಂತರ ಕಲಿಕೆಯೆಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಆಶಿಸಿದರು.

ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷೆ, ಕರ್ನಾಟಕ ಗಮಕಕಲಾ ಪರಿಷತ್‌ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿಯವರು ಕರ್ನಾಟಕದ್ದೇ ಆದ ಗಮಕಕಲೆ ಹಾಡುಗಾರರಿಂದಲೇ ಚಿರಸ್ಥಾಯಿಯಾಗಿ ಉಳಿಯಬೇಕಿದೆ ಈ ನಿಟ್ಟಿನಲ್ಲಿ ಅವರಿಗೆ ಅದರ ಬಗ್ಗೆ ಆಸಕ್ತಿ ಮೂಡಿಸಿ ಕಲಿಸುವ ಜವಾಬ್ದಾರಿ ಸಂಗೀತಶಿಕ್ಷಕರದ್ದು. ಅದಕ್ಕೆ ನೀರೆರೆಯಬೇಕಾದ್ದು ಪೋಷಕರು ಎಂದು ಕಿವಿಮಾತು ಹೇಳ, ರಾಧಾ ಅವರ ಗಮಕಾಸಕ್ತಿಯನ್ನು ಶ್ಲಾಘಿಸಿದರು.

ಕೃಷ್ಣಸ್ವರೂಪ್ ಸ್ವಾಗತಿಸಿ, ಡಾ. ಶ್ರೀಧರ್ ವಂದಿಸಿದ ಈ ಕಾರ್ಯಕ್ರಮವನ್ನು ವಿದುಷಿ ಸೌಮ್ಯಶ್ರೀಕಂಠ ನಿರೂಪಿಸಿದರು.

ಗಮಕ ಕಲೆಯ ಔನ್ನತ್ಯವನ್ನು ನೂತನ ವಿದ್ಯಾರ್ಥಿಗಳಿಗೆ, ಪೋಷಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಗಂಗಮ್ಮಕೇಶವಮೂರ್ತಿ ಮತ್ತು ಜಿ.ಎಸ್. ಮಂಜುನಾಥ್ ಅವರು ಕವಿ ಪು.ತಿ.ನ. ಅವರ ಶ್ರೀಹರಿಚರಿತೆಯಿಂದ ಆಯ್ದ ಕೃಷ್ಣಜನನ ಭಾಗವನ್ನು ವಾಚಿಸಿ, ವ್ಯಾಖ್ಯಾನಿಸಿದರು.

ಅಂತರಾಷ್ಟ್ರೀಯ ಯುವಸಂಗೀತ ಕಲಾವಿದೆ ಅದಿತಿಪ್ರಹ್ಲಾದ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟು ಶ್ರದ್ಧೆಯಿಂದ ಕಲತವರಿಂದ ಅಚ್ಚುಕಟ್ಟಾದ ಸಭಾಪ್ರಸ್ತುತಿ ಹೇಗಿರುತ್ತದೆ ಎಂಬುದಕ್ಕೆ ಸಾದೃಶ್ಯರೆನಿಸಿದರು. ಕಲಾಪ್ರದರ್ಶನಕ್ಕೆ ರಷ್ಯಾ ಪ್ರವಾಸ ಕೈಗೊಳ್ಳುತ್ತಿರುವ ಅದಿತಿಗೆ ಎಲ್ಲರೂ ಶುಭಕೋರಿದರು. ಪಕ್ಕವಾದ್ಯದಲ್ಲಿ ಯುವವಿದ್ವಾಂಸರಾದ ಕಾರ್ತಿಕೇಯ ಮತ್ತು ರಕ್ಷಿತ್ ಶರ್ಮಾ ಪಿಟೀಲು ಮತ್ತು ಮೃದಂಗದ ಸಮರ್ಥ ಸಾಥ್ ನೀಡಿದರು.

ಕಾರ್ಯಕ್ರಮದಲ್ಲಿ ನಗರದ ಗಣ್ಯರು ಶಂಕರಮಠದ ಧರ್ಮಾಧಿಕಾರಿ ಶ್ರೀಕಂಠಯ್ಯ, ಹಿರಿಯಕವಿ ಪ್ರೊ. ನರಹರಿ, ಗಮಕಕಲಾಪರಿಷತ್ತಿನ ಗಣೇಶಉಡುಪ, ರುಕ್ಕಿಣಿನಾಗೇಂದ್ರ, ಆಸರೆ ಫೌಂಡೇಶನ್‌ನ ಸದಸ್ಯರು. ಜನಮಿತ್ರ

LEAVE A REPLY

Please enter your comment!
Please enter your name here