ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅಧಿಕಾರಿಗಳಿಗೆ ಸೂಚನೆ !!

0

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು  ನಡೆದ ಕೆ.ಡಿ.ಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು ರೈತರಿಗೆ  ಉತ್ತಮ  ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿಗಳನ್ನು ಒದಗಿಸುವಂತೆ ಸೂಚಿಸಿದರಲ್ಲದೆ, ಮುಂಗಾರು ಮಳೆಯಿಂದ ಕೆಲವು ಬೆಳೆಗಳು ನಾಶವಾಗಿದ್ದು, ಬೆಳೆ ವಿಮೆ ಪಡೆಯಲು ಸಹಕಾರಿಯಾಗುವಂತೆ ತಾಕುಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಉತ್ಪನ್ನ ಸಂಸ್ಕರಣೆಗೆ  ಟಾರ್ಪಲ್‍ಗಳ ಬೇಡಿಕೆ ಹೆಚ್ಚಾಗುತ್ತಿದ್ದು ಅವುಗಳನ್ನು  ಇನ್ನೂ ಹೆಚ್ಚಿನ ಪ್ರಮಾಣದಲ್ಲಿ  ವಿತರಿಸಿ ಎಂದು ಅಧ್ಯಕ್ಷರು ಹೇಳಿದರು.

ಬೆಳೆ ವಿಮೆ ಸಂಬಂಧಿಸಿದಂತೆ  ಯಾವೆಲ್ಲ ಬೆಳೆಗಳು ಹಾನಿಯಾಗಿವೆ ಅವುಗಳ ಮಾಹಿತಿ ನೀಡಿ ಎಂದರಲ್ಲದೆ ಬೆಳೆ ಕಟಾವು ಸಮಯದಲ್ಲಿ ಆಯಾ ಸ್ಥಳಗಳನ್ನು ಖುದ್ದಾಗಿ ಭೇಟಿ ನೀಡಿ ಹಾಗೂ ಪ್ರತಿ ವರ್ಷ ಪ್ರತಿ ಹಳ್ಳಿಗಳಲ್ಲೂ ಬೆಳೆ ಕಟಾವು ಸಮೀಕ್ಷೆ ಯಾಗಬೇಕು ಎಂದರು.

ಜಾನುವಾರುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ನಿಗಧಿತ ಲಸಿಕೆಗಳನ್ನು ಹಾಕುವುದರ ಮೂಲಕ ತಡೆಗಟ್ಟುವುದರ ಜೊತೆಗೆ ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ 19 ಎರಡನೇ ಅಲೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಬರುವವರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಹಾಗೂ ಜಿಲ್ಲೆಗೆ ಎರಡನೇ ಕೋವಿಡ್ ಅಲೆ ಅಪ್ಪಳಿಸದಂತೆ  ಎಚ್ಚರ ವಹಿಸಿ ಎಂದರಲ್ಲದೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸಿ ಎಂದು ಶ್ವೇತಾ ದೇವರಾಜ್ ತಿಳಿಸಿದರು.

ಶಾಲೆಗಳಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರಲು ಪೋಷಕರೊಂದಿಗೆ ಮಕ್ಕಳ ಮನವೊಲಿಸುವಂತೆ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಎಸ್.ಎಸ್. ಎಲ್.ಸಿ ಪರೀಕ್ಷೆಗೆ ಪೂರ್ವ ಸಿದ್ಧತಾ ಪರೀಕ್ಷೆ ತಯಾರಿ ನಡೆಸಿ ಎಂದು ಶ್ವೇತಾ ದೇವರಾಜ್ ಹೇಳಿದರು.

ವಸತಿ ನಿಲಯಗಳಿಗೆ ವಿದ್ಯಾರ್ಥಿಗಳು ಬರಲು ಹಿಂಜರಿಯುತ್ತಿದ್ದು ವಸತಿ ನಿಲಯಗಳಲ್ಲಿ ಎರಡು ದಿನಕ್ಕೊಮ್ಮೆ ಸ್ಯಾನಿಟಸರ್ ಮಾಡಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ  ಕಾಪಾಡುವಂತೆ ನೋಡಿಕೊಳ್ಳಿ ಎಂದರಲ್ಲದೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಿ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ಆದಷ್ಟು ಬೇಗ  ವಿದ್ಯುತ್ ಸಂಪರ್ಕ ಕಲ್ಪಿಸಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಿಂಚಣಿ ಸೌಲಭ್ಯ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಕೋವಿಡ್ ಲಾಕ್‍ಡೌನ್ ವೇಳೆಯಲ್ಲಿ ಕೆಲವು ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಡಿತ ಗೊಂಡಿದ್ದು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತೆರಳಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಎ ಪರಮೇಶ್ ಅವರು ಮಾತನಾಡಿ ಸಿ ಮತ್ತು ಡಿ ವರ್ಗಕ್ಕೆ ಸೆರಿರುವಂತಹ ಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ಕಾಪೌಂಡ್ ಕಾಮಗಾರಿಗಳನ್ನು ನರೇಗಾ ಯೋಜನೆಗಳನ್ನು ಬಳಸಿಕೊಂಡು  ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಯಾವುದೇ ಆತಂಕವಿಲ್ಲದೆ  ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಬಿ.ಎ ಪರಮೇಶ್ ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಾಗರಾಜ್, ಉಪ ಕಾರ್ಯದರ್ಶಿ ಚಂದ್ರ ಶೇಖರ್, ಪೊಲೀಸ್ ಉಪ ಅಧೀಕ್ಷಕರಾದ ಪುಟ್ಟಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here