ಬೇಲೂರು : ಕಳೆದ ಮೂರು ದಿನದಿಂದ ಬೆಳಿಗ್ಗಿನ ಜಾವ ಬಂದ ಮಧ್ಯಾಹ್ನ ತನಕ ಲಸಿಕೆಗಾಗಿ ಕಾಯುತ್ತಿದ್ದರೂ ಸಂಬಂಧಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ನಾಳೆ ಬನ್ನಿ ಎಂದು ಪ್ರತಿನಿತ್ಯ ನಾಮಫಲಕ ಹಾಕುತ್ತಾ, ಪ್ರಭಾವಿ ವ್ಯಕ್ತಿಗಳ ಶಿಪಾರಸ್ಸಿಗೆ ಲಸಿಕೆ ನೀಡುತ್ತಿದ್ದಾರೆ. ಕೋವಿಡ್ ಲಸಿಕೆ ವಿಚಾರದಲ್ಲಿ ಈ ರೀತಿಯ ಅವ್ಯವಸ್ಥೆ ನಡೆಯುತ್ತಿದ್ದರೂ ಸಂಬಂಧ ಪಟ್ಟ ಆರೋಗ್ಯಾಧಿಕಾರಿ ಮತ್ತು ಕ್ಷೇತ್ರದ ಶಾಸಕರು ಜಾಣ ಮೌನಕ್ಕೆ ಜಾರಿದ್ದಾರೆ. ಕಾಳಸಂತೆಯಲ್ಲಿ ಸಿಗುವ ಲಸಿಕೆ ಬಗ್ಗೆ ಸೂಕ್ತ ತನಿಕೆಯಾಗಬೇಕು. ಪ್ರತಿದಿನ ಕನಿಷ್ಠ ೩೦೦ ಜನರಿಗೆ ಲಸಿಕೆ ನೀಡಬೇಕು ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಸಾರ್ವಜನಿಕರು ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಾರ್ವಜನಿಕರ ಪರವಾಗಿ ಮಾತನಾಡಿದ ಕೇಶವಮೂರ್ತಿ ಮತ್ತು ರೂಪ, ಕಳೆದ ನಾಲ್ಕು ದಿನದಿಂದ ಹಳ್ಳಿಯಿಂದ ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದರೆ ಸಾಕು, ಇಲ್ಲಿನ ಆರೋಗ್ಯ ಸಿಬ್ಬಂದಿಗಳು ತಮ್ಮ ಉಡಾಪೆ ವರ್ತನೆಯಿಂದ ನಾಳೆ ಬನ್ನಿ ಎಂದು ಹೇಳುತ್ತಾರೆ.ಪ್ರಭಾವಿಗಳು ಬಂದರೆ ಸಾಕು ಅವರನ್ನು ಸರ್ಕಾರಿ ಗೌರವದೊಂದಿಗೆ ಕರೆದುಕೊಂಡು ಹೋಗುತ್ತಾರೆ. ಇದ್ದರಿಂದ ನಮಗೆ ಬಾರಿ ಬೇಸರ ಮೂಡಿದೆ. ಸ್ಥಳೀಯ ಶಾಸಕರು ಮತ್ತು ಆರೋಗ್ಯಾಧಿಕಾರಿಗಳ ಜಾಣ ಮೌನದಿಂದ ಹೊರ ಬಂದು ಜನತೆಗೆ ಲಸಿಕಾ ವ್ಯವಸ್ಥೆ ಮಾಡಬೇಕು. ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಸಾವಿರ ನೀಡಿದರೆ ಸಾಕು ಲಸಿಕೆ ನೀಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಸದ್ಯಕ್ಕೆ ಹುಸಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ಗಮನ ನೀಡಬೇಕು ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.
ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಸರ್ಕಾರ ಬಾಯಿ ಮಾತಿಗೆ ಪ್ರತಿ ಜನರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ದೊಡ್ಡ ದೊಡ್ಡ ಜಾಹೀರಾತು ಮೂಲಕ ಘೋಷಣೆ ಮಾಡಿದೆ.ಅದರೆ ದಿನವಿಡೀ ಕೋವಿಡ್ ಲಸಿಕೆಗಾಗಿ ಜನರು ಅಲೆಯುವ ಸ್ಥಿತಿ ಸಾಮಾನ್ಯವಾಗಿದ್ದು, ಆರೋಗ್ಯಾಧಿಕಾರಿಗಳು ಶೀಘ್ರವೇ ಕ್ರಮಕ್ಕೆ ಮುಂದಾಗಬೇಕಿದೆ. ವಿಶೇಷವಾಗಿ ಬೇಲೂರು ಸಿಪಿಐ ಯೋಗೀಶ್ ಅವರು ಈ ವಿಚಾರದಲ್ಲಿ ಗಮನ ವಹಿಸಿದ್ದು ನಿಜಕ್ಕೂ ಸಂತಸದ ವಿಷಯವೆಂದರು.
ನಂತರ ಪಿಐ ಯೋಗೀಶ್ ಮಾತನಾಡಿ
ಕೋವಿಡ್ ಲಸಿಕೆ ಎಂದು ಭಯ ಪಡುತ್ತಿದ್ದ ಜನರು, ಸ್ವಯಂ ತಾವೇ ಮುಂದೆ ಬಂದು ಲಸಿಕೆ ಪಡೆಯಲು ಇರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಜನತೆಗೆ ಹಂತ ಹಂತವಾಗಿ ಲಸಿಕೆ ನೀಡಲು ಮುಂದಾಗಬೇಕಿದೆ. ಯಾವುದೇ ಪ್ರಭಾವಕ್ಕೆ ಮನ್ನಣೆ ನೀಡದೆ ಕೋವಿಡ್ ಲಸಿಕೆಯನ್ನು ನೀಡಲು ಅಧಿಕಾರಿಗಳ ಗಮನ ಹರಿಸಬೇಕು ಎಂದ ಅವರು ಜನತೆ ಕೂಡ ಮಾಸ್ಕ ಮತ್ತು ಸಾಮಾಜಿಕ ಅಂತರ ಪಾಲನೆಯಿಂದ ಸಹಕರಿಸಬೇಕು ಎಂದರು
ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ
ಕೋವಿಡ್ ಉಚಿತ ಲಸಿಕೆಯನ್ನು ಈಗಾಗಲೇ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯವಿಸ್ತರಣಾ ಕೇಂದ್ರದಲ್ಲಿ ನೀಡಲಾಗಿದೆ. ಅದರೆ ಕಳೆದ ಎರಡು ದಿನದಿಂದ ಲಸಿಕೆ ತಾಲ್ಲೂಕು ಕೇಂದ್ರಕ್ಕೆ ಪೂರೈಕೆಯಾಗಿಲ್ಲ. ಜನತೆಯನ್ನು ಕಾಯಿಸದೆ ಕೋವಿಡ್ ಲಸಿಕೆ ನೀಡಲು ಆರೋಗ್ಯ ಇಲಾಖೆ ಸನ್ನದ್ದವಾಗಿದೆ ಎಂದು ತಿಳಿಸಿದರು.