ಬೇಲೂರು: ತಾಲ್ಲೂಕಿನ ಜೀವನದಿ ಎಂದು ಕರೆಯಲಾಗುವ ಯಗಚಿ ಜಲಾಶಯವು ಎರಡನೇ ಬಾರಿಗೆ ಭರ್ತಿಯಾಗಿದ್ದು, ಎಲ್ಲಾ ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದ್ದು , ನೋಡುಗರ ಕಣ್ಮನ ಸೆರೆಯುತ್ತಿದೆ.
ಚಿಕ್ಕಮಗಳೂರು, ಮೂಡಿಗೆರೆ ಹಾಗೂ ತಾಲೂಕಿನ ಮಲೆನಾಡು ಭಾಗದಲ್ಲಿ ಕಳೆದ ನಾಲೈದು ದಿನಗಳಿಂದ ವರುಣನ ಅಬ್ಬರ ನಿರಂತರವಾಗಿರುವ ಹಿನ್ನೆಲೆ ಯಗಚಿ ಜಲಾಶಯ ಈ ವರ್ಷದಲ್ಲಿ 2 ನೇ ಬಾರಿ ಭರ್ತಿಯಾಗಿದ್ದು…
ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ 5 ಕ್ರಸ್ಟ್ ಗೇಟ್ ಮೂಲಕ ನದಿಗೆ 2500 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 3.603 ಟಿಎಂಸಿ ಇದ್ದು, ಗುರುವಾರ 3.300 ಟಿಎಂಸಿ ನೀರಿದೆ. ಜಲಾಶಯಕ್ಕೆ 2500 ಕ್ಯೂಸೆಕ್ ಒಳ ಹರಿವಿದ್ದು, ಅಣೆಯಕಟ್ಟೆಯ ಭದ್ರತೆ ದೃಷ್ಟಿಯಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾದರೆ ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುವುದು ಎಂದು ಯಗಚಿ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಶಿವಕುಮಾರ್ ತಿಳಿಸಿದರು.