ಫೆ.20 ರಂದು ಹೆತ್ತೂರಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

0

ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಅರ್.ಗಿರೀಶ್ ಅವರು ಫೆ 20 ರಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿ ಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಯವರು ತಾವೂ ಹಾಗೂ ತಹಶಿಲ್ದಾರರು ತಾಲ್ಲೂಕುವಾರು ನಡೆಸಲಿರುವ ಗ್ರಾಮ ವಾಸ್ತವ್ಯದ ವಿವರ ನೀಡಿದರು.ಎಲ್ಲಾ ತಾಲ್ಲೂಕುಗಳಲ್ಲಿಯೂ ಫೆ 20 ರಂದು ಗ್ರಾಮ ವಾಸ್ತವ್ಯ ನಡೆಯಲಿದೆ. ತಾವು ಈ ತಿಂಗಳು ಸಕಲೇಶಪುರ ತಾಲ್ಲೂಕಿನಲ್ಲಿ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಾಧ್ಯವಾದವುಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದಾಗಿ ಹೇಳಿದರು.ಜಿಲ್ಲಾಧಿಕಾರಿಗಳು ಬೇಟಿ ನೀಡುವ ಗ್ರಾಮ ಹೊರತುಪಡಿಸಿ ಬೇರೆ ಗ್ರಾಮಗಳಿಗೆ ಆಯಾ ತಾಲ್ಲೂಕಿನ ತಹಸೀಲ್ದಾರ್‍ಗಳು ಗಾಮ ವಾಸ್ತವ್ಯ ಹೂಡಿ ಜನರ ಅಗತ್ಯ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಹೆಚ್ಚಿನ ಆದ್ಯತೆಯನ್ನು ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಗ್ರಾಮಲೆಕ್ಕಿಗರು , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಕಂದಾಯ ನಿರೀಕ್ಷಕರ ಗಮನಕ್ಕೆ ತರಲಾಗಿದೆ .ಅವರು ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ ಇದೇ ರೀತಿ ಸ್ಥಳೀಯರ ಸಮಸ್ಯೆಗಳ ಬಗ್ಗೆ ಮುಂಚಿತವಾಗಿಯೇ ಅರ್ಜಿಗಳನ್ನು ಪಡೆದು ಫೆ 20ರ ಒಳಗಾಗಿ ಸಾಧ್ಯವಾದವುಗಳನ್ನು ಬಗೆಹರಿಸಲಾಗುವುದು .ಉಳಿದವುಗಳನ್ನು ಕಾನೂನಿನ ಪರಿಮಿತಿಯೊಳಗೆ ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದರು.ಸಾರ್ವಜನಿಕರು ತಮ್ಮ ಅಹವಾಲುಗಳಿದ್ದಲ್ಲಿ ಸ್ಥಳೀಯ ಉಪ ತಹಶಿಲ್ದಾರರು,ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಪಂಚಾಯಿತಿ ಪಿ.ಡಿ.ಒ ಗಳ ಮೂಲಕ ಅರ್ಜಿ ಸಲ್ಲಿಸುವಂತೆ ಅವರು ಕೋರಿದರು.ಮುಖ್ಯವಾಗಿ ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂದಿಸಿದ ಭೂಮಿ ದಾಖಲೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು, ಪಡಿತರ ವಿತರಣೆ, ಬೆಳೆ ಹಾನಿ ವಸತಿ ,ಸ್ಮಶಾನ ಭೂಮಿ , ಮತ್ತಿತರ ವಿಷಯಗಳ ಕುರಿತು ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ವಿಲೇವಾರಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.ಗ್ರಾಮ ವಾಸ್ತವ್ಯದ ದಿನದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೂ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅವರು ಮಾಹಿತಿ ನೀಡಿದರು. ಇದಲ್ಲದೆ ಫೆ 25 ರಂದು ಜಿಲ್ಲಾ ಉಸ್ತುವಾರಿ ಸಚಿವರು ಬೇಲೂರು ತಾಲ್ಲೂಕಿನಲ್ಲಿ ಜನ ಸಂಪರ್ಕ ಸಭೆ ನಡೆಸಲಿದ್ದಾರೆ.ತಾಲ್ಲೂಕಿನ ಸಾರ್ವಜನಿಕರು ಎಲ್ಲಾ ಇಲಾಖೆಗಳ ವ್ಯಾಪ್ತಿಯ ಕುಂದು ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದು ಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.ಇದೇ ರೀತಿ ಫೆ 20 ರಂದು ತಾಲ್ಲೂಕುವಾರು ನಡೆಯುವ ಗ್ರಾಮ ವಾಸ್ತವ್ಯಗಳ ವಿವರ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಶೆಟ್ಟಿಹಳ್ಳಿ, ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ದೊಡ್ಡಕುಂಚೆ ,ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿ ದಡದಹಳ್ಳಿ, ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯ ದೊಳ್ಳೇನಹಳ್ಳಿ, ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹೆತ್ತೂರು ಗ್ರಾಮದಲ್ಲಿ, ಬೇಲೂರು ತಾಲ್ಲೂಕಿನ ಕಸಬಾ ಹೋಬಳಿಯ ಹನುಮಿಡಿ ಗ್ರಾಮದಲ್ಲಿ,ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಹಾಜರಿದ್ದರು,

LEAVE A REPLY

Please enter your comment!
Please enter your name here