ಹಾಸನ : ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ ಶಾಖಾ ಅಂಚೆ ಕಚೇರಿಯ, ಅಂಚೆ ಪಾಲಕಿ ಒರ್ವರು ಉಳಿತಾಯ ಖಾತೆದಾರರಿಗೆ ವಂಚಿಸಿ ಹಣ ದುರುಪಯೋಗಪಡಿಸಿಕೊಂಡಿದ್ದರೆಂದು ಆರೋಪಿಸಿ, ಉಳಿತಾಯ ಖಾತೆದಾರರು ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಉಳಿತಾಯ ಖಾತೆದಾರ ಬಾಣಸವಳ್ಳಿ ಕಲ್ಲೇಶ್ ಮಾತನಾಡಿ, ಅವರು ಸಾಕಷ್ಟು ಖಾತೆದಾರರಿಗೆ ಪಾಸ್ ಬುಕ್ ಕೊಟಿಲ್ಲ, ಕೇಳಿದರೆ ಬೇಲೂರು ಕಚೇರಿಯಲ್ಲಿದೆ ಅಡಿಟ್ ಗೆ ಹೋಗಿದೆ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದರು.
ವೃದಾಪ್ಯ ವೇತನದಾರರಿಗೆ ಹಣ ಬಂದಿಲ್ಲ ಎಂದು ಹೇಳಿ ಅವರ ಹಣವನ್ನು ಲಪಟಾಯಿಸಿದ್ದಾರೆ. ಸುಮಾರು 20 ಲಕ್ಷ ಹಣ ದುರುಪಯೋಗವಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು, ಖಾತೆದಾರರಿಗೆ ಹಣ ಹಿಂದಿರುಗಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರಸನ್ನ ಅವರು ಮಾತನಾಡಿ, 2 ಲಕ್ಷದ 58 ಸಾವಿರದ 456 ರೂ ನನ್ನ ಮಗಳು ಆರಾಧ್ಯ ಅವರ ಖಾತೆಯಲ್ಲಿತ್ತು, ಈಗ 1 ಲಕ್ಷದ 25 ಸಾವಿರು 50 ರೂ ಹಣ ಕಡಿಮೆ ಇದೆ ಈ ಬಗ್ಗೆ ಅಂಚೆ ಕಚೇರಿ ಎಸ್.ಪಿ.ಅವರಿಗೆ ದೂರು ಸಲ್ಲಿಸಿದ್ದೇನೆ ಎಂದರು.
ನಸ್ರಿಮಾ ಮಾತನಾಡಿ, ನನ್ನಗೆ ಗಂಡ ಇಲ್ಲವಾದರೂ ಮಗಳ ಜೀವನ ರೂಪಿಸಲು ಕಳೆದ 9 ವರ್ಷಗಳಿಂದ ಹಣ ಕಟ್ಟುತ್ತಿದ್ದೇನೆ, ಸುಮಾರು 1 ಲಕ್ಷದ 35 ಸಾವಿರ ಹಣ ಕಟ್ಟಿದ್ದೇನೆ ಇದರಲ್ಲಿ 43 ಸಾವಿರ ಹಣ ಕಡಿಮೆಯಾಗಿದೆ. ನನಗೆ ಹಣ ಕೊಡಿಸಲು ಅಂಚೆ ಇಲಾಖೆ ಮುಂದಾಗಬೇಕು ಎಂದು ಅಳಲು ತೊಡಿಕೊಂಡರು. ಶಿವಕುಮಾರ್ ಮಾತನಾಡಿ, ಕಳೆದ 8 ವರ್ಷದಿಂದ ನಾನು ಉಳಿತಾಯ ಖಾತೆ ಹೊಂದಿದ್ದೇನೆ, ನನ್ನ ಖಾತೆಯಲ್ಲಿ 36 ಸಾವಿರ ಹಣವಿತ್ತು, ನಂತರ ಇಲ್ಲಿ ವ್ಯವಹಾರ ನಿಲ್ಲಿಸಿದೆ. ಈಗ ಬಂದರೆ 1500 ಹಣ ಖಾತೆಯಲ್ಲಿದೆ.
ಉಳಿದ ಹಣವನ್ನು ನನ್ನ ಸಹಿ ನಖಲು ಮಾಡಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು. ಹಾಸನ ಉಪವಿಭಾಗದ ಅಂಚೆ ನಿರೀಕ್ಷಕ, ತನಿಖಾಧಿಕಾರಿ ದೀಪಕ್ ಮಾತನಾಡಿ, ಸುಮಾ ಅವರು ಹೇರಿಗೆ ರಜೆಗೆ ತೆರಳಿದ ನಂತರ, ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ. 1010 ಖಾತೆಗಳಿದ್ದು ,ಈಗ ಶೇ 45 ರಷ್ಟು ತನಿಖೆ ಮುಗಿದಿದ್ದು ಸುಮಾರು 9 ಲಕ್ಷ ಹಣ ವಂಚಿಸಿರುವುದು ಕಂಡು ಬಂದಿದೆ. ಪೂರ್ಣ ತನಿಖೆ ಆದ ನಂತರ ವಂಚನೆಮೊತ್ತವನ್ನು ನಿರ್ಧಿಷ್ಟವಾಗಿ ತಿಳಿಯಬಹುದು.
ಖಾತೆದಾರರ ಬಳಿ ದಾಖಲಾತಿಗಳು ಸರಿ ಇದ್ದರೆ ಅವರಿಗೆ ಖಂಡಿತ ಹಣ ವಾಪಾಸ್ ಬರುತ್ತದೆ. ಸುಮ ಅವರ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇಲಾಖೆಯಿಂದ ಪಾಸ್ ಬುಕ್ನಲ್ಲಿ ಜಾಗೂರಕತೆಯ ಬಗ್ಗೆಗಿಗ ತಿಳುವಳಿಕೆಗಳನ್ನು ನೀಡಲಾಗಿರುತ್ತದೆ ಆದರೆ ಸಾಕಷ್ಟು ಖಾತೆದಾರರು ಅದನ್ನು ಗಮನಿಸದೆ ಮೋಸಹೋಗುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಖಾತೆದಾರರಾದ ವಿನಯ್, ರಾಖೇಶ್, ಅನ್ವರ್ ಪಾಷ, ಇಪ್ರೊಜ್, ತಮ್ಮನ್ನ, ಯಶ್ಮಿನ್ ಭಾನು, ಸಮೀನಭಾನು, ತಾಸೀನಾ, ಮಂಜುನಾಥ್, ತನ್ವರ್ ಖಾನ್, ಸದೀಯಾ ಹಾಗೂ ಗ್ರಾಮಸ್ಥರು ಇದ್ದರು.