ಜಿಲ್ಲಾ ಸರ್ಜನ್ ಡಾ ಕೃಷ್ಣಮೂರ್ತಿ ವರ್ಗಾವಣೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಕ್ಷಣದಿಂದ ಜಾರಿಗ ಬರುವಂತೆ ರದ್ದುಗೊಳಿಸಿದ್ದಾರೆ. ಹಾಸನ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್ ಲಸಿಕೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಬೇಕಾಗಿರುವ ಔಷಧ ಸೇರಿದಂತೆ ಮೂಲಭೂತ ಕೊರತೆಗಳನ್ನು ಇಂದೇ ಬಗೆಹರಿಸುವ ಭರವಸೆಯನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ನೇತೃತ್ವದ ಜಿಲ್ಲೆಯ ಜೆಡಿಎಸ್ ಶಾಸಕರುಗಳ ನಿಯೋಗಕ್ಕೆ ನೀಡಿದ್ದಾರೆ.
ನಿನ್ನೆ ಹೆಚ್ ಡಿ ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಜಿಲ್ಲಾ ಸರ್ಜನ್ ವರ್ಗಾವಣೆ ರದ್ದಿಗೆ ಆಗ್ರಹಿಸಿ, ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಹೆಚ್ ಡಿ ರೇವಣ್ಣ ನೇತೃತ್ವದಲ್ಲಿ ಶಾಸಕರುಗಳಾದ ಸಿ ಎನ್ ಬಾಲಕೃಷ್ಣ ಮತ್ತು ಕೆ ಎಸ್ ಲಿಂಗೇಶ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಮುಖ್ಯಮಂತ್ರಿಗಳ ನಿವಾಸದ ಬಳಿ ಶಾಸಕರ ನಿಯೋಗ ಹೋಗುತ್ತಿದ್ದಂತೆ, ಮುಖ್ಯಮಂತ್ರಿಗಳು ಧರಣಿ ಕೈ ಬಿಡುವಂತೆ ಮನವಿ ಮಾಡಿದರಲ್ಲದೇ ಜಿಲ್ಲೆಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಆಯೋಗದ ಮನವಿ ಸ್ವೀಕರಿಸಿ, ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದ ಸಿಎಂ ಬಿ ಎಸ್ ಯಡಿಯೂರಪ್ಪ, ಹಾಸನ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಮತ್ತು ಮೂಲ ಸೌಕರ್ಯ ಒದಗಿಸುವಂತೆ ಆದೇಶಿಸಿದರು. ಸ್ಥಾನಪಲ್ಲಟಗೊಂಡಿದ್ದ ಜಿಲ್ಲಾ ಸರ್ಜನ್ ಡಾ ಕೃಷ್ಣಮೂರ್ತಿಯವರ ವರ್ಗಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದರು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಲಾ 25 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.