7 ಕೋಟಿ ಅಂದಾಜು ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭ: ಹೆಚ್.ಕೆ ಕುಮಾರಸ್ವಾಮಿ

0

ಗೊರೂರು ಮುಖ್ಯ ರಸ್ತೆಯಿಂದ ಕಾರ್ಲೆ ಗ್ರಾಮದವರೆಗೆ ಸುಮಾರು 13 ಕಿ.ಮೀ ರಸ್ತೆಯನ್ನು ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಯೋಜನೆಯಲ್ಲಿ 7 ಕೋಟಿ ಅಂದಾಜು ವೆಚ್ಚ ಅನುದಾನ ಮಂಜೂರಾಗಿದ್ದು, ಕಾಮಗಾರಿಯ ಆರಂಭಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದು ಹೆಚ್.ಕೆ ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಚೆನ್ನಂಗಿಹಳ್ಳಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇವಲ ನಗರಪ್ರದೇಶಗಳನ್ನು ಮಾತ್ರ ಅಭಿವೃದ್ಧಿಪಡಿಸದೆ ಗ್ರಾಮೀಣ ಭಾಗಗಳನ್ನೂ ಸಹ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಒಳಚರಂಡಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಭಾಗಗಳಿಗೆ ಒದಗಿಸುವುದು ಅತ್ಯಾವಶ್ಯಕ ಎಂದರು.
ಆದರ್ಶಗ್ರಾಮ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನಗಳು ಮಂಜೂರಾದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಅನುದಾನ ವಿವಿಧ ಹಂತಗಳಲ್ಲಿ ಹಂಚಿಕೆಯಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೂ ಶ್ರಮವಹಿಸಿ ಗ್ರಾಮೀಣ ಭಾಗಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಈಬಾರಿ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಮುಸುಕಿನ ಜೋಳ, ಕಾಫಿ ಬೆಳೆ, ಮೆಣಸು ಹಾಳಾಗಿದ್ದು, ಸರ್ಕಾರ ಘೋಷಿಸಿರುವ ಪರಿಹಾರ ರೈತರು ಖರ್ಚುಮಾಡಿರುವ ಹಣಕ್ಕಿಂತಲೂ ಕಡಿಮೆಯಾಗಿದ್ದು, ಕನಿಷ್ಠಪಕ್ಷ ಅವರು ಖರ್ಚು ಮಾಡಿರುವಷ್ಟಾದರೂ ಪರಿಹಾರ ನೀಡಬೇಕು ಎಂದು ಸರ್ಕಾರ ಹಾಗೂ ಕೃಷಿ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದರು.
ವಕೀಲರಾದ ಶ್ರೀಕಾಂತ್, ಗ್ರಾಮದ ಮುಖಂಡರು ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here