ನಾಳೆಯಿಂದ ಹಾಸನಾಂಬೆ ಉತ್ಸವ ಪ್ರಾರಂಭ: ಆರ್. ಗಿರೀಶ್

0

ಹಾಸನ ನಗರ ಅದಿದೇವಿಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಉತ್ಸವ ನ. 5 ರಿಂದ 16 ರವರೆಗೆ ನಡೆಯಲಿದ್ದು, ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ನೇರವಾಗಿ ದೇವಿ ದರ್ಶನ ಮಾಡಲು ಅವಕಾಶ ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್.ಇ.ಡಿ ಪರದೆ ಮತ್ತು ಆನ್‍ಲೈನ್ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್‍ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಾರ್ವಜನಿಕರು ದೇವಿ ದರ್ಶನ ಮಾಡಲು ದೇವಸ್ಥಾನದ ಆವರಣ ಸೇರಿದಂತೆ ನಗರದ ಇತರೆ ಭಾಗಗಳಲ್ಲಿ 10 ಎಲ್.ಇ.ಡಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಯುಟ್ಯೂಬ್‍ನಲ್ಲಿ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೂ ವೀಕ್ಷಣೆ ಮಾಡಬಹುದು ಎಂದರು

ಈಗಾಗಲೇ ಕೊರೋನ ಸೋಂಕು ಎರಡನೇ ಹಂತದಲ್ಲಿ ವ್ಯಾಪಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರಲ್ಲದೆ, ನಾಳೆ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಆಗಮಿಸಲಿದ್ದು, ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡರು, ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಸ್ಥಳೀಯ ಶಾಸಕರು, ಮಾಜಿ ಮಂತ್ರಿಗಳು, ಮಾಜಿ ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಇದರ ಜೊತೆಗೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಬರುವ ಸಾಧ್ಯತೆ ಇದೆ ಎಂದು ಆರ್. ಗಿರೀಶ್ ಹೇಳಿದರು.

ಕಳೆದಬಾರಿ ಸುಮಾರು 5 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದು, ಈ ಬಾರಿ ಅಷ್ಟು ಜನಸಂದಣಿಯಾಗುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ಕೊರೋನ ಮುಂಜಾಗ್ರತಾ ಕ್ರಮಗಳನ್ನು ವ್ಯವಸ್ಥಿತವಾಗಿ ಅನುಸರಿಸಲಾಗಿದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಪ್ರವಾಸೋಧ್ಯಮ ಉಪನಿರ್ದೇಶಕರಾದ ಸಂಜಯ್, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here