ಮನೆ ಬಾಗಿಲಿಗೆ ತೆರಳಿ 94ಸಿ ಮನೆ ಹಕ್ಕು ಪತ್ರ ವಿತರಣೆ- ಅಗತ್ಯ ದಾಖಲಾತಿ ನೀಡದವರಿಗೆ ಜಾಗೃತಿ- ಆಲೂರು ತಹಸಿಲ್ದಾರ್ ಶಿರೀನ್ ತಾಜ್ ರಿಂದ ವಿನೂತನ ಕಾರ್ಯಕ್ರಮ
ಜನರು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾರೆ. ಫಲಾನುಭವಿಗಳಾದರೂ ಸೌಲಭ್ಯ ಪಡೆಯೋದು ಸಾಹಸದ ಕೆಲಸ. ಈ ನಡುವೆ ಆಲೂರು ತಹಸಿಲ್ದಾರ್ ಶಿರೀನ್ ತಾಜ್ ಮನೆ ಮನೆ ಬಾಗಿಲಿಗೆ ತೆರಳಿ 94ಸಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ವಿಭಿನ್ನ ಕೆಲಸ ಮಾಡಿದ್ದಾರೆ. ಆ ವರದಿ ಇಲ್ಲಿದೆ ನೋಡಿ….
ಮನೆ ಹಕ್ಕು ಪತ್ರಗಳನ್ನು ಪಡೆಯದೇ ಇದ್ದವರ ಮನೆ ಬಾಗಿಲಿಗೆ ತೆರಳಿ ಆಲೂರು ತಹಸಿಲ್ದಾರ್ ಶಿರೀನ್ ತಾಜ್ ಹಕ್ಕು ಪತ್ರ ವಿತರಿಸುವ ಮೂಲಕ ಹಕ್ಕು ಪತ್ರ ವಿತರಣಾ ವಿಭಿನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಹೌದು, ಮಳೆಯ ನಡುವೆ ಕೈಯಲ್ಲಿ ಛತ್ರಿ ಹಿಡಿದು ಫಲಾನುಭವಿಗಳ ಮನೆಗಳಿಗೆ ತೆರಳಿ ಮನೆ ಹಕ್ಕು ಪತ್ರ ವಿತರಿಸುತ್ತಿದ್ದಾರೆ ತಹಸಿಲ್ದಾರ್ ಶಿರೀನ್ ತಾಜ್. ಅಗತ್ಯ ದಾಖಲಾತಿ ನೀಡದವರಿಗೆ ಮಾಹಿತಿ ನೀಡಿ ಜಾಗೃತಿ ಸಹ ಮೂಡಿಸಿದ್ದಾರೆ. 94ಸಿ ಅಡಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ತೆರಳಿ ಹಕ್ಕು ಪತ್ರ ನೀಡಿದ್ದಾರೆ. ಮಳೆ ನಡುವೆ ಫಲಾನುಭವಿಗಳು ಕಚೇರಿಗಳಿಗೆ ಬಂದು ಹಕ್ಕು ಪತ್ರ ಪಡೆಯೋದು ಕಷ್ಟಕರ, ಹೀಗಾಗಿ ಅಧಿಕಾರಿಗಳ ತಂಡವೇ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಬಂದು ಹಕ್ಕು ಪತ್ರ ವಿತರಿಸುತ್ತಿದ್ದೇವೆ. ಕಿತ್ತಗೆರೆ,ಕಿತ್ತಗಳಲೆಯ 10 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ಕೆ.ಹೊಸಕೋಟೆ ಹೋಬಳಿಯಲ್ಲಿ 50 ಹಕ್ಕು ಪತ್ರ ನೀಡಲಾಗಿದೆ. 94ಸಿ ಅಡಿ ಅರ್ಜಿ ಸಲ್ಲಿಸಿರುವ ತಾಲ್ಲೂಕಿನ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ನೀಡುವಂತೆ ಎರಡು ಬಾರಿ ತಿಳುವಳಿಕೆ ಪತ್ರ ನೀಡಲಾಗಿದೆ. ಅವರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಾವೇ ಮನೆ ಬಾಗಿಲಿಗೆ ಬಂದು ಹಕ್ಕು ಪತ್ರ ವಿತರಿಸುತ್ತಿದ್ದೇವೆ. ದಾಖಲಾತಿ ನೀಡದವರು, ಸರ್ಕಾರಕ್ಕೆ ಕಿಮ್ಮತ್ತು ಪಾವತಿಸದವರು ಶೀಘ್ರ ಪಾವತಿಸಿ ಹಕ್ಕು ಪತ್ರ ನೀಡುವಂತೆ ಜನರಿಗೆ ಜಾಗೃತಿ ಮೂಡಿಸಿದರು.
ಶಿರೀನ್ ತಾಜ್, ತಹಸಿಲ್ದಾರ್, ಆಲೂರು
ಆಲೂರು ತಾಲ್ಲೂಕಿನ ಕಿತ್ತಗೆರೆ,ಕಿತ್ತಗಳಲೆ ಗ್ರಾಮಗಳಲ್ಲಿ ಕೆಲ ಒಂಟಿ ಮನೆಗಳ ಬಳಿ ಕಾಲ್ನಡಿಗೆಯಲ್ಲೆ ಹೋದ ತಹಸಿಲ್ದಾರ್ ಶಿರೀನ್ ತಾಜ್ ಮತ್ತು ಅಧಿಕಾರಿಗಳು ಹಕ್ಕು ಪತ್ರ ವಿತರಿಸಿದರು. ಸ್ಥಳದಲ್ಲಿಯೇ ಫಲಾನುಭವಿಗಳ ಸಹಿ ಪಡೆದು ಹಕ್ಕು ಪತ್ರ ನೀಡಿದರು. ಈ ಮಳೆಯಲ್ಲಿ ನಾವುಗಳು ಕಚೇರಿಗೆ ಹೋಗಿ ಕಾಯ್ದು ಹಕ್ಕು ಪತ್ರ ಪಡೆಯುವುದು ಸಾಕಷ್ಟು ತೊಂದರೆಯಾಗುತ್ತಿತ್ತು. ತಹಸಿಲ್ದಾರ್ ಮತ್ತು ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಹಕ್ಕುಪತ್ರ ನೀಡಿದ್ದು ಸಂತೋಷವಾಗಿದೆ. ನಮ್ಮ ಮನೆಗಳ ಬಳಿ ಅಧಿಕಾರಿಗಳೇ ಬಂದು ಸೌಲಭ್ಯ,ಸಹಾಯ ಮಾಡುತ್ತಿರುವುದು ಇದೇ ಮೊದಲು. ಈ ರೀತಿ ಕೆಲಸದಿಂದ ರೈತರಿಗೆ, ಬಡವರಿಗೆ ಒಳ್ಳೆಯದಾಗುತ್ತದೆ ಎಂದು ಫಲಾನುಭವಿಗಳು ಅಭಿಪ್ರಾಯ ಹಂಚಿಕೊಂಡರು.
ಮಂಜುಳ, ಹಕ್ಕು ಪತ್ರ ಪಡೆದವರು
ಮನೆ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶಿರೀನ್ ತಾಜ್ ಮತ್ತು ಉಪತಹಸಿಲ್ದಾರ್ ಸೋಮಣ್ಣ, ರೆವಿನ್ಯೂ ಇನ್ಸ್ ಪೆಕ್ಟರ್ ವಸಂತ್, ಕೇಸ್ ವರ್ಕರ್ ಕವಿತಾ, ಗ್ರಾಮಲೆಕ್ಕಿಗ ರಾಮಪ್ಪ, ಗ್ರಾ.ಪಂ ಉಪಾಧ್ಯಕ್ಷ ಶರತ್, ಗ್ರಾಮ ಸಹಾಯಕ ಸಂಜಯ್ ಇದ್ದರು. ಮನೆ ಬಾಗಿಲಲ್ಲೆ ತಹಸಿಲ್ದಾರ್ ಕೈ ಯಿಂದ ಹಕ್ಕು ಪತ್ರ ಸ್ವೀಕರಿಸಿದ ಫಲಾನುಭವಿಗಳು ಖುಷಿಪಟ್ಟಿದ್ದಾರೆ. ಮನೆ ಮನೆ ಬಾಗಿಲಿಗೆ ತೆರಳಿ ಮನೆ ಹಕ್ಕುಪತ್ರ ವಿತರಿಸಿದ ಆಲೂರು ತಹಸಿಲ್ದಾರ್ ಶಿರೀನ್ ತಾಜ್ ವಿಭಿನ್ನ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಪರ ಇನ್ನಷ್ಟು ಉತ್ತಮ ಕಾರ್ಯಗಳನ್ನು ಅವರು ಮಾಡಲಿ ಎಂದಿದ್ದಾರೆ.