ಹಾಸನ: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ 21 ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡ, ಶುಕ್ರವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿತ್ತು.
ರಾಜ್ಯದ 21 ಅಧಿಕಾರಿಗಳಲ್ಲಿ ಹಾಸನದ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ರಾಮಕೃಷ್ಣ ಎಂಬುವರೂ ಸೇರಿದ್ದರು. ಎಇಇ ಅವರ ಹಾಸನ ನಗರದ ವಿದ್ಯಾನಗರ ನಿವಾಸ, ಕುವೆಂಪುನಗರದಲ್ಲಿರುವ ಕಚೇರಿ ಮತ್ತು ಚನ್ನರಾಯಪಟ್ಟಣ ತಾಲೂಕು ಹಿರೀಸಾವೆಯ ನಿವಾಸದ ಎಸಿಬಿ ಡಿವೈಎಸ್ಪಿ ಸಚಿತ್ ನೇತೃತ್ವದ 3 ತಂಡ ಮುಂಜಾನೆಯೇ ದಾಳಿ ನಡೆಸಿ ಕಡತ ಪರಿಶೀಲನೆಯಲ್ಲಿ ತೊಡಗಿದೆ. ಈ ವೇಳೆ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ಎಸಿಬಿ ತಂಡ ದಿಢೀರ್ ಎಂಟ್ರಿ ಕೊಡುವ ವೇಳೆ ರಾಮಚಂದ್ರ ವಿದ್ಯಾನಗದ ನಿವಾಸದಲ್ಲೇ ಇದ್ದರು. ಕೂಡಲೇ ಅವರನ್ನು ಅಲ್ಲೇ ಲಾಕ್ ಮಾಡಿದ ಅಧಿಕಾರಿಗಳು, ಕೂಲಂಕಷ ತಪಾಸಣೆ ನಡೆಸಿದರು. ತಿಂಡಿ, ಊಟವನ್ನು ಇದ್ದಲ್ಲಿಗೇ ತರಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಎಸಿಬಿ ತಪಾಸಣೆ ವೇಳೆ ರಾಮಕೃಷ್ಣ ಅವರಿಗೆ ಸೇರಿದ ಕೋಟಿ ಕೋಟಿ ಬೆಲೆ ಬಾಳುವ ಅಪಾರ ಪ್ರಮಾಣದ ಆಸ್ತಿ, ಸಂಪತ್ತು ಪತ್ತೆಯಾಗಿದೆ. 28 ವರ್ಷ ಸರ್ಕಾರಿ ಸೇವೆ ಸಲ್ಲಿಸಿರುವ ಇವರಿಗೆ ತಿಂಗಳಿಗೆ 1 ಲಕ್ಷ ಸಂಬಳ, ಹಾಸನದ ವಿದ್ಯಾನಗರದಲ್ಲಿ 1 ವಾಸದ ಮನೆ, ಹಾಸನ, ಮೈಸೂರು, ತುರುವೇಕೆರೆಗಳಲ್ಲಿ ಒಂದೊಂದು ಸೇರಿ 4 ನಿವೇಶನ ಇವೆ.
ಹಿರೀಸಾವೆ, ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲೂ 26 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಹಾಸನ ಮನೆಯಲ್ಲಿ 150 ಗ್ರಾಂ ಚಿನ್ನಾಭರಣ, 1 ಕೆಜಿ 242 ಗ್ರಾಂ ಬೆಳ್ಳಿ ಸಾಮಾನು ಸಿಕ್ಕಿದೆ. ಹಾಸನದ ಎಸ್ಬಿಐ ಬ್ಯಾಂಕಿನಲ್ಲಿರೋ ಲಾಕರ್ನಲ್ಲಿ ಚಿನ್ನ ಬೆಳ್ಳಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಮೇಲೆ ಲಾಕರ್ ಸೀಜ್ ಮಾಡಲಾಗಿದೆ.
– ವಿವಿಧ ಕಂಪನಿಯ 2 ದ್ವಿಚಕ್ರ ವಾಹನ, 1 ಕಾರು, 20 ಸಾವಿರ ನಗದು, ವಿವಿಧ ಬ್ಯಾಂಕ್ಗಳಲ್ಲಿ 37 ಲಕ್ಷ ಠೇವಣಿ ಉಳಿತಾಯ, ಸುಮಾರು 7 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು ಶೋಧನಾ ಕಾರ್ಯ ನಡೆಯುತ್ತಿದೆ. ಎಸಿಬಿ ದಕ್ಷಿಣ ವಲಯ ಎಸ್ಪಿಸಜಿತ್ .ವಿ.ಜಿ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.