ಕರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆದಿಚುಂಚನಗಿರಿ ಸಂಸ್ಥಾನದಿಂದ ವಿದ್ಯಾಭ್ಯಾಸ

0

ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಸಾಂಕ್ರಮಿಕ ರೋಗದಿಂದ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಮುಂದಾಗಿದೆ.
ಕೋವಿಡ್ ಎರಡನೇ ಅಲೆಯಿಂದ ತೀವ್ರತರವಾದ ಸಂಕಷ್ಟವನ್ನು ಜನರು ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಅನಾಥರಾಗಿರುವ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮಠದ ವತಿಯಿಂದ ವಹಿಸಿಕೊಳ್ಳಲಾಗುವುದು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ತಂದೆ, ತಾಯಿ ಹಾಗೂ ಪೋಷಕರು ಮೃತರಾಗಿರುತ್ತಾರೆ. ಈ ಮೃತರಾದವರ ಮಕ್ಕಳಿಗೆ ಆಶ್ರಯವಿಲ್ಲದೆ, ಅನ್ನ, ಶಿಕ್ಷಣಕ್ಕೂ ಸಂಕಷ್ಟ ಪರಿಸ್ಥಿತಿಗೆ ಒಳಗಾಗಿರುವುದು, ಮಕ್ಕಳು ಅನಾಥರಾಗಿರುವ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ‌. ಅನ್ನ, ಅಕ್ಷರ, ಆರೋಗ್ಯ ಸೇವೆಗೆ ಸದಾ ಮುಂದಿರುವ ಶ್ರೀ ಮಠವು, ಮಾನವೀಯ ದೃಷ್ಟಿಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಿದೆ ಎಂದು ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ನಿಂದ ತಂದೆ, ತಾಯಿ ಕಳೆದುಕೊಂಡಿರುವ ಮಕ್ಕಳು ಆದಿಚುಂಚನಗಿರಿ ಮಠದಲ್ಲಿ ಸಂಪೂರ್ಣ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡು ನೋವಿನಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ‌ ಶ್ರೀಮಠವು ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿ ಜನರು ತೊಂದರೆಗೀಡಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶ್ರೀ ಮಠವು ಬೆಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್, ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರಿಗೆ ಸಾರಿಗೆ ವ್ಯವಸ್ಥೆ ಹಾಗೂ ಔಷಧಿ ಕಿಟ್ ನೀಡುವುದನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ತಂದೆ, ತಾಯಿ ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಈ ಕೆಳಕಂಡ ಮೊಬೈಲ್ ಸಂಖ್ಯೆ ಸಂಖ್ಯೆಯನ್ನು ಬೆಂಗಳೂರಿನಲ್ಲಿ-9448071803 ಹಾಗೂ ಆದಿಚುಂಚನಗಿರಿ ಮಠದಲ್ಲಿ -9148024141 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here