ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಕಂದಾಯ ಇಲಾಖೆ ಹಾಗೂ ದೇಗುಲದ ನೌಕರರು ಅಡ್ಡೆಹೊತ್ತು ಉತ್ಸವ ನಡೆಸಿದರು. ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಅನಂತಪದ್ಮನಾಭ ಉತ್ಸವವು ಸಂಪ್ರದಾಯದಂತೆ ನಡೆದಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಚನ್ನಕೇಶವ ದೇಗುಲದಲ್ಲಿ ಗುರುವಾರ ಸಂಜೆ ಅಡ್ಡೆಗಾರರು ಉತ್ಸವ ನಡೆಸಲು ನಿರಾಕರಿಸಿದ್ದರಿಂದ, ಕಂದಾಯ ಇಲಾಖೆ ಹಾಗೂ ದೇಗುಲದ ನೌಕರರೇ ಅಡ್ಡೆ ಹೊತ್ತುಕೊಂಡು ಉತ್ಸವ ನಡೆಸಿದರು. ಸಂಪ್ರದಾಯದಂತೆ ಅನಂತಪದ್ಮನಾಭ ಉತ್ಸವವನ್ನು ಅಡ್ಡೆಗಾರರು ಹೊತ್ತು ನಡೆಸಬೇಕಿತ್ತು. ಆದರೆ ತಹಶೀಲ್ದಾರ್ ಹಾಗೂ ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಂ.ಮಮತಾ ಅವರು ನೋಟಿಸ್ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅಡ್ಡೆಗಾರರು ಅಡ್ಡೆ ಹೊರಲಿಲ್ಲ. ಹೀಗಾಗಿ ಟ್ರಾಕ್ಟರ್‌ನಲ್ಲಿ ಉತ್ಸವ ನಡೆಸಲು ಟ್ರ್ಯಾಕ್ಟರ್ ತರಿಸಲಾಯಿತು.
ಅದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಟ್ರ್ಯಾಕ್ಟರ್ ವಾಪಸ್ ಕಳುಹಿಸಲಾಯಿತು. ಕಂದಾಯ ಇಲಾಖೆ ನೌಕರರು, ದೇಗುಲದ ನೌಕರರು ಉತ್ಸವದ ಅಡ್ಡೆ ಹೊತ್ತು, ದೇಗುಲದ ಆವರಣದಲ್ಲಿ ಸಾಗಿದರು. ಹೊರಲಾಗದೇ ಹೈರಾಣಾಗಿ ಅಡ್ಡೆಯನ್ನು ಎರಡು ಬಾರಿ ಕೆಳಕ್ಕೆ ಇಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಗಿರೀಶ್, ‘ಸಂಪ್ರದಾಯ ಮುರಿದು, ಬೇಕಾದ ರೀತಿಯಲ್ಲಿ ಉತ್ಸವ ನಡೆಸುವುದು ಸರಿಯಲ್ಲ. ದೇಗುಲದ ವ್ಯವಸ್ಥಾಪನಾ ಸಮಿತಿಯವರು ಹಾಗೂ ದೇಗುಲದ ಇ.ಒ. ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭಾ ಸದಸ್ಯ ಪ್ರಭಾಕರ್ ಮಾತನಾಡಿ, ‘ಅನಂತ ಪದ್ಮನಾಭ ಉತ್ಸವವು, ಮುಖ್ಯ ರಸ್ತೆಯ ಮೂಲಕ ಗಾಣಿಗರ ಬೀದಿಗೆ ಬಂದು, ವಾಪಸ್ ಬರುವುದು ವಾಡಿಕೆ.
ಆದರೆ ಈ ಉತ್ಸವವನ್ನು ಕೇವಲ ದೇಗುಲದ ಪ್ರಾಂಗಣದಲ್ಲಿ ಅವ್ಯವಸ್ಥೆಯಲ್ಲಿ ನಡೆಸಿರುವ ಉದ್ದೇಶ ತಿಳಿಯುತ್ತಿಲ್ಲ. ಕೆಲವರು ರಾಜಕೀಯದ ಹಿತಾಸಕ್ತಿಗಾಗಿ ದೇಗುಲದ ಆಡಳಿತದಲ್ಲಿ ಕೈ ಹಾಕಿದ್ದಾರೆ. ಕಂದಾಯ ಇಲಾಖೆ ನೌಕರರು ಬಂದು ಅಡ್ಡೆ ಹೊರುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ಪುಷ್ಪಲತಾ ಮಾತನಾಡಿ, ‘ಯಾರದೋ ಒಬ್ಬರ ಹಿತಾಸಕ್ತಿಗಾಗಿ ಆ ಪದ್ಧತಿಯನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ. ಇಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿಗಳು ತಮ್ಮ ನೌಕರರ ಹಾಗೂ ಸಿಬ್ಬಂದಿಯಿಂದ ಉತ್ಸವ ನಡೆಸಿದ್ದು ಬೇಸರದ ಸಂಗತಿ’ ಎಂದರು. ಆಯುಕ್ತರಿಗೆ ತಿಳಿಸಲಾಗಿದೆ: ತಹಶೀಲ್ದಾರ್. ‘ಸೆ.25 ರಂದು ಇದ್ದ ಉತ್ಸವಕ್ಕೆ ಅಡ್ಡೆಗಾರರು ಭಾಗಿಯಾಗಬೇಕು.
ಇಲ್ಲವಾದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ನಾನು ಅಡ್ಡೆಗಾರರಿಗೆ ತಿಳಿವಳಿಕೆ ಪತ್ರ ನೀಡಿದ್ದೆ. ಸೇವಾರ್ಥದಾರರು ಎರಡು ವರ್ಷದಿಂದ ಉತ್ಸವ ನಡೆಸಿಲ್ಲ ಎಂಬ ಕಾರಣ ನೀಡಿ, ಈ ವರ್ಷವೂ ನಡೆಸಿಕೊಡುವುದಿಲ್ಲ ಎಂದು ಅಡ್ಡೆಗಾರರು ಹೇಳುವುದು ಸರಿಯಲ್ಲ. ಅಡ್ಡೆಗಾರರು ಇನ್ನು ಮುಂದೆ ಅಡ್ಡೆ ಹೊರುವುದಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿ, ತಿಳಿಸಿರುವುದರಿಂದ ಗುರುವಾರ ಟ್ರ್ಯಾಕ್ಟರ್‌ನಲ್ಲಿ ಉತ್ಸವ ಮಾಡಲು ಮುಂದಾಗಿದ್ದೆವು. ಕೊನೆಗೆ ಕಂದಾಯ ಇಲಾಖೆ ಮತ್ತು ದೇಗುಲದ ಸಿಬ್ಬಂದಿ ಅಡ್ಡೆ ಹೊತ್ತು ಉತ್ಸವ ನಡೆಸಿಕೊಟ್ಟಿದ್ದಾರೆ. ಅಡ್ಡೆಗಾರರು ಉತ್ಸವ ನಡೆಸಲು ಮುಂದೆ ಬಂದರೆ ನಮ್ಮ ಅಭ್ಯಂತರವಿಲ್ಲ. ನಡೆದಿರುವ ಘಟನೆಗಳನ್ನು ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರಿಗೆ ತಿಳಿಸಲಾಗಿದೆ’ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ತಹಶೀಲ್ದಾರ್ ಎಂ.ಮಮತಾ ಸ್ಪಷ್ಟಪಡಿಸಿದ್ದಾರೆ.