ವಿಶ್ವ ಮಾನಸಿಕ ಆರೋಗ್ಯ ದಿನಕ್ಕೆ ಜಿಲ್ಲಾಧಿಕಾರಿಯವರಿಂದ ಚಾಲನೆ

0

ಹಾಸನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ವಿಶ್ವ ಮಾನಸಿಕ ಆರೋಗ್ಯ ದಿನ ಮತ್ತು 21 ನೇ ವಿಶ್ವ ದೃಷ್ಟಿ ದಿನಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಹಿಮ್ಸ್ ನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ|| ಸಂತೋಷ್ ಅವರು ಮಾತನಾಡಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಸುಲಭವಾಗುವಂತೆ ವೈಯಕ್ತಿಕವಾಗಿ ಧ್ಯಾನ, ಪ್ರಾಣಯಾಮ ಹಾಗೂ ಬೆಳಿಗ್ಗೆ ಅರ್ಧಗಂಟೆ ವೇಗದ ನಡಿಗೆ ಮಾಡಿದರೆ ಮೆದುಳಿನಲ್ಲಿ ಎಂಡೋಫಿನ್ ಉತ್ಪತ್ತಿಯಾಗಿ ಮನಸ್ಸು ಹಗುರವಾಗುತ್ತದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅನೇಕರು ಆತಂಕಕ್ಕೆ ಈಡಾಗಿದ್ದು, ಸಕಾರಾತ್ಮಕವಾಗಿ ಯೋಚನೆ ಮಾಡುವ ಮೂಲಕ ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಆತ್ಮ ಸ್ಥೈರ್ಯ ಬೆಳಸಿಕೊಳ್ಳುವಂತೆ ಅವರು ತಿಳಿಸಿದರು.

ಮನುಷ್ಯ ಮಾನಸಿಕವಾಗಿ ಸರಿಯಿಲ್ಲದಿದ್ದರೆ ಖಿನ್ನತೆ, ಭಯ ಹಾಗೂ ಸಂಶಯ ಹೆಚ್ಚಾಗುವ ತೊಂದರೆಗಳಿರುತ್ತೆ. ಅಂತಹವರು ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯಬಹುದು ಅಥವಾ ಸರ್ಕಾರದಿಂದ ಬೇರೆ ವೈದ್ಯರಿಗೂ ತರಬೇತಿ ನೀಡಲಾಗಿದ್ದು ಅವರಿಂದ ಕೂಡ ಚಿಕಿತ್ಸೆ ಪಡೆಯಬಹುದು ಎಂದು ಡಾ|| ಸಂತೋಷ್ ಅವರು ಮಾಹಿತಿ ನೀಡಿದರು.
ಇತ್ತೀಚೆಗೆ ಮಾನಸಿಕ ತೊಂದರೆಯಿಂದ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮನಸ್ಸು ಖಿನ್ನತೆಗೆ ಒಳಪಟ್ಟಾಗ ಆತ್ಮಹತ್ಯೆ ವಿಚಾರ ಬರಬಹುದು ಅಂತಹ ಸಂದರ್ಭದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟರೆ ಜೀವನ ಚೆನ್ನಾಗಿರುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಸೇವನೆ ಹೆಚ್ಚಾಗಿದೆ ಹಾಗೂ ಮನಸ್ಸು ಖಿನ್ನತೆಗೆ ಒಳಪಟ್ಟು ಡ್ರಗ್ಸ್ ಸೇವಿಸುವ ಸಾಧ್ಯತೆ ಕೂಡ ಇದೆ ಅಂತಹ ದುರಭ್ಯಾಸಗಳಿಂದ ದೂರವಿದ್ದು, ಉತ್ತಮ ಹವ್ಯಾಸ ಬೆಳಸಿಕೊಂಡರೆ ಉತ್ತಮ ಜಗತ್ತನ್ನು ನಿರ್ಮಿಸಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ, ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ|| ವೇಣುಗೋಪಾಲ್, ಡಾ|| ಶ್ರೀಧರ್, ಡಾ|| ಶಿವಶಂಕರ್, ವಿಜಯ್ ಕುಮಾರ್, ರವೀಂದ್ರ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಅಂಧತ್ವ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here